ಉತ್ತರ ಪ್ರದೇಶ : ದಿನಬೆಳಗಾದರೆ ಸಾಕು ಒಂದಿಲ್ಲೊಂದು ವಿಶೇಷ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಬೆಳಕಿಗೆ ಬರುತ್ತವೆ. ಕೆಲವರ ವಿಚಿತ್ರ ನಂಬಿಕೆಗಳು ಎಲ್ಲರ ಗಮನ ಸೆಳೆಯುವಂತಿರುತ್ತದೆ. ಇತಂಹದ್ದೇ ಒಂದು ವಿಶೇಷ ನಂಬಿಕೆಯನ್ನು ಉತ್ತರ ಪ್ರದೇಶ ಪೊಲೀಸರೊಬ್ಬರು ನಡೆಸಿಕೊಂಡು ಬರುತ್ತಿದ್ದಾರೆ. ತನ್ನ ಠಾಣೆಗೆ ಬರುವ ಎಲ್ಲರಿಗೂ ಗಂಗಾಜಲ ಮತ್ತು ಚಂದನದ ಬೊಟ್ಟನ್ನು ಇಟ್ಟು ಸ್ವಾಗತಿಸುತ್ತಾರೆ.
ಉತ್ತರ ಪ್ರದೇಶದ ನೌಚಂಡಿ ಪೊಲೀಸ್ ಠಾಣೆಯ ಎಸ್ ಎಚ್ ಒ ಅಧಿಕಾರಿ ಪ್ರೇಮ್ ಚಂದ್ ಶರ್ಮಾ ಈ ನಂಬಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರು ಗಂಗಾಜಲವನ್ನು ಮತ್ತು ಚಂದನದ ಬೊಟ್ಟನ್ನು ಇಡುತ್ತಿರುವ ವಿಡಿಯೋವನ್ನು ಪಿಯೂಶ್ ರಾಯ್ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನೀವು ಏಕೆ ಈ ನಂಬಿಕೆಯನ್ನು ನಡೆಸಿಕೊಂಡು ಬರುತ್ತಿದ್ದೀರಿ ಎಂದು ಪೊಲೀಸ್ ಅಧಿಕಾರಿಯನ್ನು ಕೇಳಿದ್ರೆ, ಗಂಗಾಜಲವನ್ನು ಠಾಣೆಗೆ ಬರುವವರ ಮೇಲೆ ಹಾಕಿದರೆ ಅವರು ತಾಳ್ಮೆಯಿಂದ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಒತ್ತಡ ಕಡಿಮೆ ಮಾಡಿ ತನ್ನ ದೂರನ್ನು ದಾಖಲಿಸುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಗಂಗಾಜಲ ಮತ್ತು ಚಂದನದ ಬೊಟ್ಟು ಇಡುವುದರಿಂದ ಜನರು ತಾಳ್ಮೆಯಿಂದ ವರ್ತಿಸುವುದನ್ನು ನಾವು ಗಮನಸಿದ್ದೇವೆ. ಆದ್ದರಿಂದ ಈ ನಂಬಿಕೆಯನ್ನು ನಡೆಸಿಕೊಂಡು ಬರುವುದಾಗಿ ತಿಳಿಸಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಹೋಳಿ ಹಬ್ಬದ ಸಂದರ್ಭದಲ್ಲಿ ಎಸ್ ಎಚ್ ಒ ಅಧಿಕಾರಿ ಪ್ರೇಮ್ ಚಂದ್ ಶರ್ಮಾ ಠಾಣೆಗೆ ಬರುವವರಿಗೆ ಗಂಗಾಜಲದ ಬಾಟಲಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.