ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಅವರನ್ನು ಔರಂಗಜೇಬ್ ಗೆ ಹೋಲಿಸಿದ್ದಾರೆ. ಔರಂಗಜೇಬ್ ಸ್ವಂತ ತಂದೆ, ಚಕ್ರವರ್ತಿ ಶಹಜಹಾನ್ ನನ್ನು ಸಿಂಹಾಸನದಿಂದ ಕಿತ್ತೆಸೆದು ಜೈಲಿಗೆ ಹಾಕಿದ್ದ ಎಂದು ನೆನಪಿಸಿಕೊಟ್ಟಿದ್ದಾರೆ.
ರಾಜ್ಯದಲ್ಲಿನ ಎಸ್‌ಪಿ – ಬಿಎಸ್‌ಪಿ ಮೈತ್ರಿಕೂಟವನ್ನು ಮಹಾ ಮಿಲಾವಟ್ ಎಂದು ಕರೆದ ಸಿಎಂ ಆದಿತ್ಯನಾಥ್, ನೆರೆ ನೀರಿನಲ್ಲಿ ಹೇಗೆ ಹಾವು, ಚೇಳು, ಕಪ್ಪೆಗಳು ಒಂದಾಗುತ್ತವೋ ಹಾಗೆಯೇ ಈ ಮಿಲಾವಟಿಗಳು ಚುನಾವಣೆ ಬಂದಾಗ ಒಂದಾಗುತ್ತಾರೆ; ಚುನಾವಣೆಯ ಬಳಿಕ ಅವರು ಮತ್ತೆ ಪರಸ್ಪರರನ್ನು ದೂಷಿಸುತ್ತಾ ಬೇರ್ಪಡುತ್ತಾರೆ ಎಂದು ಆದಿತ್ಯನಾಥ್ ಹೇಳಿದರು.
ಸಿಎಂ ಯೋಗಿ ಅವರು ಇಂದು ಶನಿವಾರ ಬಲ್ಲಿಯಾ ಕ್ಷೇತ್ರಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.
‘ನಾನು ಮತ್ತು ಪ್ರಧಾನಿ ನರೇಂದ್ರ ಮೋದಿ ಜೀ ಅವರು ಬುವಾ (ಮಾಯಾವತಿ) ಮತ್ತು ಬಬುವಾ (ಅಖೀಲೇಶ್) ಅವರ (ಭ್ರಷ್ಟಾಚಾರದ) ಅಂಗಡಿಗಳನ್ನು ಮುಚ್ಚಿಸಿದಾಗ ಅವರು ಮಹಾಮಿಲಾವಟಿ ಉತ್ಪನ್ನಗಳನ್ನು ಮಾರಲು ಮತ್ತು ಜನರನ್ನು ವಂಚಿಸಲು ಇನ್ನೊಂದು ಕೌಂಟರ್ ತೆರೆದರು’ ಎಂದು ಯೋಗಿ ಆದಿತ್ಯನಾಥ್ ಮಾರ್ಮಿಕವಾಗಿ ಹೇಳಿದರು.