ಕೇಂದ್ರ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಅವರು ಉತ್ತರ ಪ್ರದೇಶ ಸಿಎಂ ಆಗದಂತೆ ತಡೆದಿದ್ದು ಯಾರು? ಅವರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದು ಯಾರು? ಆರೆಸ್ಸೆಸ್ ಎನ್ನುತ್ತದೆ ಮೂಲಗಳು! ಮನೋಜ್ ಸಿನ್ಹಾ ಉತ್ತರಪ್ರದೇಶ ಸಿಎಂ ಆಗುವುದು ಬಿಜೆಪಿಯ ಸೈದ್ಧಾಂತಿಕ ಸಲಹೆಗಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ(ಆರೆಸ್ಸೆಸ್) ಇಷ್ಟವಿರಲಿಲ್ಲ. ಹೀಗಾಗಿ, ಸಿನ್ಹಾ ಹೆಸರನ್ನು ಕೈಬಿಟ್ಟು ಪಕ್ಷದ ಫೈರ್‌ಬ್ರಾಂಡ್ ಯೋಗಿ ಆದಿತ್ಯನಾಥ್‌ರನ್ನು ಸಿಎಂ ಪಟ್ಟಕ್ಕೇರಿಸಿತು ಎಂದು ‘ದಿ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ವಿದ್ಯಾರ್ಥಿ ದಿಸೆಯಿಂದಲೇ ಎಬಿವಿಪಿ ಕಾರ್ಯಕರ್ತನಾಗಿ ಅನುಭವ ಹೊಂದಿದ್ದರೂ ಸಿನ್ಹಾಗೆ ಆರೆಸ್ಸೆಸ್ ಇಷ್ಟಪಡುವ ರೀತಿಯಲ್ಲಿ ರಾಜ್ಯದಲ್ಲಿ ಸೈದ್ಧಾಂತಿಕ ಯುದ್ಧವನ್ನು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯವಿಲ್ಲ ಎನ್ನುವುದು ಸಂಘದ ಅಭಿಪ್ರಾಯವಾಗಿತ್ತು. ಜತೆಗೆ, ನಿರ್ದಿಷ್ಟ ಜಾತಿಯೊಂದರ ಬಗ್ಗೆ ಸಿನ್ಹಾಗೆ ಮೃದುಧೋರಣೆ ಇರುವುದೂ ಅವರಿಗೆ ಮುಳುವಾಯಿತು. ಜಾತಿ ತಾರತಮ್ಯ ಮಾಡದ ನ್ಯೂಟ್ರಲ್ ನಾಯಕನೊಬ್ಬ ಆರೆಸ್ಸೆಸ್‌ಗೆ ಬೇಕಿತ್ತು. ಜತೆಗೆ, ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಅವರಿಗೂ ಸಿನ್ಹಾ ಬಗ್ಗೆ ಅಷ್ಟೊಂದು ಒಲವಿಲ್ಲದಿರುವುದೂ ಅವರ ಆಯ್ಕೆಗೆ ಕಲ್ಲು ಹಾಕಿತು.