ಉತ್ತರ ಪ್ರದೇಶ: ಕೋವಿಡ್-19 ಮಾರ್ಗಸೂಚಿ ನೆಪದಲ್ಲಿ ಸಾಮಾನ್ಯ ಜನರಿಗೆ ಹಿಂಸಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸರು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ಮತ್ತು ಆಡಳಿತ ವರ್ಗ ಜನರಲ್ಲಿ ಕೋವಿಡ್ ನಿಯಮದ ಕುರಿತಾಗಿ ಜಾಗೃತಿ ಮೂಡಿಸಬೇಕು. ಮಾತ್ರವಲ್ಲದೆ ಜನರು ನಿಯಮಗಳನ್ನು ಪಾಲಿಸಲು ಪ್ರೊತ್ಸಾಹಿಸಬೇಕು. ಆದರೇ ಹಿಂಸೆ ನೀಡುವಂತಿಲ್ಲ. ಈ ಕುರಿತಾಗಿ ಜನರಿಂದ ದೂರುಗಳು ಬಂದರೆ ಪೊಲೀಸರು ಮತ್ತು ಆಡಳಿತ ವರ್ಗದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿವಾಹ ಮತ್ತು ಇತರ ಕಾರ್ಯಕ್ರಮಗಳಿಗೆ ಪೊಲೀಸರು ಮತ್ತು ಆಡಳಿತಾತ್ಮಕ ವಲಯದಿಂದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಆದರೆ ಪ್ರತಿಯೊಬ್ಬರೂ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ. ಮಾತ್ರವಲ್ಲದೆ ಮದುವೆ ಸಮಾರಂಭಗಳಲ್ಲಿ ಡಿ.ಜೆ ಮತ್ತು ವಾದ್ಯವನ್ನು ಬಳಸಲು ಅವಕಾಶ ನೀಡಲಾಗಿದ್ದು, ಇದನ್ನು ತಡೆಯುವಂತಿಲ್ಲ ಎಂದು ತಿಳಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ ಸರ್ಕಾರದ ಪರಿಸರ ಖಾತೆ ಸಚಿವರಿಗೂ ಕೋವಿಡ್-19 ಸೋಂಕು ದೃಢ
ಕೋವಿಡ್ ಗೆ ಸಂಬಂಧಿಸಿದಂತೆ ಕಳೆದ ಸೋಮವಾರ ಉತ್ತರ ಪ್ರದೇಶ ಸರ್ಕಾರ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದ್ದು, ಇದರ ಅನ್ವಯ ಎಲ್ಲಾ ಒಳಾಂಗಣ ಕಾರ್ಯಕ್ರಮಗಳಿಗೆ (ಕಂಟೋನ್ಮೆಂಟ್ ಪ್ರದೇಶ ಹೊರತುಪಡಿಸಿ) 100 ಜನರು ಭಾಗವಹಿಸಲು ಅನುಮತಿ ನೀಡಲಾಗಿದೆ. ಹಾಗೂ ಹೊರಾಂಗಣ ಕಾರ್ಯಕ್ರಮಗಳಿಗೆ, ಸ್ಥಳಕ್ಕೆ ತಕ್ಕಂತೆ ಶೇ.40 ರಷ್ಟು ಜನರು ಭಾಗವಹಿಸಲು ಅನುಮತಿ ನೀಡಲಾಗಿದೆ.
ಎಲ್ಲಾ ಕಾರ್ಯಕ್ರಮಗಳಿಗೂ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.