ಹೊಸದಿಲ್ಲಿ : ತೃಣಮೂಲ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ತಾರಕಕ್ಕೇರಿರುವ ವಾಕ್ಸಮರ ಈಗ ಪಶ್ಚಿಮ ಬಂಗಾಲದ ಹೊರಗೂ ವ್ಯಾಪಿಸಲಾರಂಭಿಸಿದೆ.
ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ವಿವಾದಿತ ಹೇಳಿಕೆಯೊಂದರಲ್ಲಿ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ರಾಕ್ಷಸಿಗೆ ಹೋಲಿಸಿದ್ದಾರೆ ಮಾತ್ರವಲ್ಲದೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅಖೀಲೇಶ್ ಯಾದವ್ ಅವರನ್ನು ಕಟುಕನೆಂದು ಕರೆದಿದ್ದಾರೆ.
ಸಮುದ್ರಲಂಘನ ಗೈದು ಲಂಕೆಗೆ ಲಗ್ಗೆ ಇಡಲು ಧಾವಿಸುತ್ತಿದ್ದ ಹನುಮಂತನನ್ನು ನುಂಗಲು ಬಾಯಿ ತೆರೆದು ನಿಂತ ರಕ್ಕಸಿಯಂತೆ ಮಮತಾ ಬ್ಯಾನರ್ಜಿ ಅವರು ದೇಶಕ್ಕೆ ಒಳಿತುಂಟು ಮಾಡಲು ಪ್ರಯತ್ನಿಸುತ್ತಿರುವ ಪ್ರಧಾನಿ ಮೋದಿ ಅವರ ಹಾದಿಗೆ ಅಡ್ಡ ಬರುತ್ತಿದ್ದಾರೆ ಎಂದು ಸುರೇಂದ್ರ ಸಿಂಗ್ ಅಕ್ರೋಶಭರಿತರಾಗಿ ಹೇಳಿದರು.
ಪ್ರಧಾನಿ ಮೋದಿ ಶ್ರೀರಾಮನಾದರೆ ಉ.ಪ್ರ.ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹನುಮ ಎಂದು ಸಿಂಗ್ ವರ್ಣಿಸಿದರು.
ಟಿಎಂಸಿ ಸದಸ್ಯರು ತಮ್ಮ ಪಕ್ಷ ತೊರೆದು ಬಿಜೆಪಿಗೆ ಸೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, ಬಿಜೆಪಿ ಈಗಾಗಲೇ ಟಿಎಂಸಿ 10ರಿಂದ 20 ವಿಭೀಷಣರನ್ನು ಪಡೆದುಕೊಂಡಿದೆ; ಇವರಲ್ಲಿ ಸಾಚಾ ವಿಭೀಷಣರನ್ನು ಗುರುತಿಸಲಾಗುವುದು; ಇವರು ಮಮತಾ ಬ್ಯಾನರ್ಜಿ ಅವರ ಲಂಕೆ ಎಂಬ ಪಶ್ಚಿಮ ಬಂಗಾಲವನ್ನು ರಕ್ಕಸಿಯ ಕೈಯಿಂದ ಪಾರುಗೊಳಿಸಲು ನೆರವಾಗುವರು ಎಂದು ಹೇಳಿದರು.