ನವದೆಹಲಿ: ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಶನಿವಾರ (ಜನವರಿ 15) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಇದನ್ನೂ ಓದಿ:ನಾರಾಯಣ ಗುರುಗಳ ಚಿತ್ರದ ಟ್ಯಾಬ್ಲೋವನ್ನು ಕೇಂದ್ರ ತಿರಸ್ಕರಿಸಿದ್ದು ಅಜ್ಞಾನದ ಪರಮಾವಧಿ: HDK
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್ ಪುರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ದೇವೇಂದ್ರ ಪ್ರಧಾನ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಅವರು ಅಯೋಧ್ಯೆ ಅಥವಾ ಮಥುರಾದಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹ ಹರಿದಾಡಿತ್ತು.
ಗೋರಖ್ ಪುರ್ (ನಗರ) ವಿಧಾನಸಭಾ ಕ್ಷೇತ್ರದ ಚುನಾವಣೆ ಮಾರ್ಚ್ 3ರಂದು ನಡೆಯಲಿದೆ. ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಬಹಿರಂಗವಾಗಲಿದೆ.
ಯೋಗಿ ಆದಿತ್ಯನಾಥ್ ಅವರು ಗೋರಖ್ ಪುರ್ ಲೋಕಸಭಾ ಕ್ಷೇತ್ರದಿಂದ ಸತತ ಐದು ಬಾರಿ ಗೆಲುವು ಸಾಧಿಸಿದ್ದರು. ಪ್ರಸ್ತುತ ಯೋಗಿ ಅವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಹಾಲಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಸಿರಾಥು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪ್ರಧಾನ್ ತಿಳಿಸಿದ್ದಾರೆ.