ಉತ್ತರ ಪ್ರದೇಶ : ಗಂಡ-ಹೆಂಡತಿಯ ಜಗಳ ವಿಚ್ಛೇದನ ಹಂತಕ್ಕೆ ತಲುಪಿ ಕೋರ್ಟ್ ಮೆಟ್ಟಿಲು ಏರಿದೆ ಎಂದರೆ ಅದಕ್ಕೆ ಬಲವಾದ ಕಾರಣ ಇರಲೇಬೇಕು. ಆದರೆ, ಉತ್ತರ ಪ್ರದೇಶದ ಅಲಿಗರ್ ನಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಕರಣವೊಂದು ನಡೆದಿದೆ.
ತನ್ನ ಹೆಂಡತಿ ಪ್ರತಿ ನಿತ್ಯ ಸ್ನಾನ ಮಾಡುವುದಿಲ್ಲ. ಸ್ನಾನ ಮಾಡು ಅಂತಾ ಹೇಳಿದರೆ ಜಗಳಕ್ಕೆ ಬರುತ್ತಾಳೆ. ಹೀಗಾಗಿ ಅವಳ ಜೊತೆ ಇರಲು ಇಷ್ಟಪಡುವುದಿಲ್ಲ ಎಂದು ಮುಸ್ಲಿಂ ವ್ಯಕ್ತಿಯೋರ್ವ ಹೇಳಿದ್ದಾನೆ.
ಅಲಿಗರ್ ನ ಚಂದೌಸ್ ಗ್ರಾಮದ ಮುಸ್ಲಿಂ ವ್ಯಕ್ತಿ ಕ್ವಾರ್ಸಿ ಗ್ರಾಮದ ಯುವತಿ ಜೊತೆ ಕಳೆದ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದಾನೆ. ಈ ದಂಪತಿಗೆ ಒಂದು ವರ್ಷದ ಮಗು ಇದೆ. ಇದೀಗ ತನ್ನ ಪತ್ನಿಗೆ ತಲಾಖ್ ನೀಡಲು ಈತ ಬಯಸಿದ್ದಾನೆ. ಆದರೆ, ಪತ್ನಿಗೆ ಗಂಡನಿಂದ ವಿಚ್ಛೇದನ ಪಡೆಯಲು ಇಷ್ಟವಿಲ್ಲ. ಹೀಗಾಗಿ ತನ್ನ ದಾಂಪತ್ಯ ಉಳಿಸಿಕೊಳ್ಳುವ ಉದ್ದೇಶದಿಂದ ಆಕೆ ಮಹಿಳಾ ಆಯೋಗದ ಮೊರೆ ಹೋಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳಾ ಆಯೋಗವು ಈ ದಂಪತಿಗೆ ಆಪ್ತ ಸಮಾಲೋಚನೆ ನಡೆಸಿದೆ. ಈ ವೇಳೆ ಪತ್ನಿಗೆ ವಿಚ್ಛೇದನ ನೀಡಲು ಕಾರಣ ಏನು ಎಂಬುದನ್ನು ಪತಿ ಹೇಳಿಕೊಂಡಿದ್ದಾನೆ. ಆಕೆ ಪ್ರತಿ ನಿತ್ಯ ಸ್ನಾನ ಮಾಡುವುದಿಲ್ಲ. ಇದೆ ವಿಚಾರಕ್ಕೆ ನಿತ್ಯ ನಮ್ಮ ಮನೆಯಲ್ಲಿ ಜಗಳ ನಡೆಯುತ್ತಿದೆ. ಹೀಗಾಗಿ ಅವಳಿಗೆ ತಲಾಖ್ ನೀಡಲು ಮುಂದಾಗಿದ್ದೇನೆ ಎಂದು ಹೇಳಿದ್ದಾನೆ.
ಇನ್ನು ಸಮಾಲೋಚನೆ ಬಳಿಕ ಆತನಿಗೆ ಬುದ್ಧಿವಾದ ಹೇಳಿದ್ದೇವೆ. ನಿಮ್ಮಲ್ಲಿಯೇ ಬಗೆಹರಿಸಬಹುದಾದ ಈ ಸಣ್ಣ ಕಾರಣಕ್ಕೆ ವಿಚ್ಛೇದನ ಪಡೆಯುವುದು ಸರಿಯಲ್ಲ. ಈ ನಿರ್ಧಾರ ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಮಹಿಳಾ ಆಯೋಗ ತಿಳಿ ಹೇಳಿದೆ. ಜೊತೆಗೆ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಕೆಲವು ಸಮಯ ನೀಡಿದ್ದೇವೆ ಎಂದಿದ್ದಾರೆ.