ಲಕ್ನೋ: ಅಪಹರಣಕ್ಕೀಡಾಗಿದ್ದ ಉದ್ಯಮಿಯೊಬ್ಬರ 16 ವರ್ಷದ ಪುತ್ರ ಮಂಗಳವಾರ ಮುಂಜಾನೆ(ಅ.31 ರಂದು) ಕೊಲೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಪ್ರಕರಣ ಸಂಬಂಧ ಬಾಲಕನ ಟ್ಯೂಷನ್ ಟೀಚರ್ ಮತ್ತು ಅವರ ಪ್ರಿಯಕರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ಅ.30 ರ ಮುಂಜಾನೆ ಬಾಲಕ ಟ್ಯೂಷನ್ ಟೀಚರ್ ಮನೆಗೆಂದು ತೆರಳಿದ್ದಾರೆ. ಈ ವೇಳೆ ಬಾಲಕನನ್ನು ಹಿಂಬಾಲಿಸಿಕೊಂಡು ಟ್ಯೂಷನ್ ಟೀಚರ್ ರಚಿತಾ ಅವರ ಪ್ರಿಯಕರ ಪ್ರಭಾತ್ ಶುಕ್ಲಾ ಬಂದಿದ್ದಾರೆ. ಆ ಬಳಿಕ ಪ್ರಭಾತ್ ಬಾಲಕನನ್ನು ಟೀಚರ್ ಮನೆಯ ಸ್ಟೋರ್ ರೂಮ್ ಗೆ ಕರೆದುಕೊಂಡು ಹೋಗಿದ್ದಾನೆ. ಇದಾದ ನಂತರ 20 ನಿಮಿಷದ ಬಳಿಕ ಪ್ರಭಾತ್ ಬಟ್ಟೆ ಬದಲಾಯಿಸಿಕೊಂಡು ಹೊರೆಗೆ ಬಂದಿದ್ದಾನೆ.ಇದೇ ಸಂದರ್ಭದಲ್ಲಿ ಬಾಲಕನ ಕೊಲೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆ ನಂತರ ಬಾಲಕ ಬಂದಿದ್ದ ಸ್ಕೂಟರ್ ಬಳಸಿ, ಅದರ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ಬಾಲಕನ ಮನೆಯ ಪಕ್ಕಕ್ಕೆ ಹೋಗಿ ಪತ್ರವೊಂದನ್ನು ಎಸೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪತ್ರದಲ್ಲಿ 30 ಲಕ್ಷ ಹಣದ ಬೇಡಿಕೆ ಹಾಗೂ ʼಅಲ್ಲಾಹ್ ಅಕ್ಬಾರ್ʼ ಎಂದು ಬರೆಯಲಾಗಿದೆ. ಈ ಕಾರಣದಿಂದ ಇದು ಅಪಹರಣ ಪ್ರಕರಣವೆಂದು ಶಂಕೆ ವ್ಯಕ್ತವಾಗಿತ್ತು. ಆದರೆ ಬಾಲಕನ ಕೊಲೆಯಾಗುವ ಮುನ್ನವೇ ಪತ್ರವನ್ನು ತಲುಪಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಪತ್ರದ ಮೇಲೆ ʼಅಲ್ಲಾಹ್ ಅಕ್ಬಾರ್ʼ ಬರೆದಿರುವುದು ಪೊಲೀಸರು ದಿಕ್ಕು ತಪ್ಪಿಸಲು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಸಿಸಿಟಿವಿ ದೃಶ್ಯವನ್ನು ಆಧಾರಿಸಿ ಆರೋಪಿಗಳಾದ ಪ್ರಭಾತ್, 21 ವರ್ಷದ ರಚಿತಾ ಮತ್ತು ಅವರ ಸ್ನೇಹಿತ ಆರ್ಯನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದ ಹಿಂದಿನ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.