Advertisement

ಸಂತೋಷ್‌ ಭೇಟಿಯಾದ ಅನರ್ಹ ಶಾಸಕರು

11:05 PM Nov 13, 2019 | Team Udayavani |

ಬೆಂಗಳೂರು: ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳುತ್ತಿದ್ದಂತೆ ಬಹುತೇಕ ಅನರ್ಹ ಶಾಸಕರು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿ ಹಲವು ವಿಚಾರಗಳ ಬಗ್ಗೆ ಖಾತರಿಪಡಿಸಿಕೊಂಡರು.

Advertisement

ಪಕ್ಷ ಸೇರ್ಪಡೆ, ಟಿಕೆಟ್‌ ಖಾತರಿ, ಬಂಡಾಯ ಉಪಶಮನ, ಕುಟುಂಬದವರಿಗೆ ಟಿಕೆಟ್‌ ಇತರೆ ವಿಚಾರಗಳ ಬಗ್ಗೆ ಸಂತೋಷ್‌ ಅವರೊಂದಿಗೆ ಮುಕ್ತವಾಗಿ ಚರ್ಚಿಸಿ ಖಾತರಿಪಡಿಸಿಕೊಂಡರು. ಪಕ್ಷ ಸೇರ್ಪಡೆ, ಟಿಕೆಟ್‌ ಖಾತರಿ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ಮಾತ್ರವಲ್ಲದೆ, ಪಕ್ಷದ ವರಿಷ್ಠರ ಸಹಮತದ ಬಗ್ಗೆ ಖಾತರಿ ಪಡೆದುಕೊಳ್ಳಲು ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಕೆಲವರಲ್ಲಿ ಅಸಮಾಧಾನ: ಸುಪ್ರೀಂ ಕೋರ್ಟ್‌ ತೀರ್ಪು ತಮ್ಮ ಪರವಾಗಿ ಬರುವ ನಿರೀಕ್ಷೆ ಅನರ್ಹ ಶಾಸಕರಲ್ಲಿತ್ತು. ಸ್ಪೀಕರ್‌ ಆದೇಶವನ್ನು ಮರುಶೀಲಿಸುವಂತೆ ನ್ಯಾಯಾಲಯ ತೀರ್ಪು ನೀಡುವ ನಿರೀಕ್ಷೆ ಹಲವು ಅನರ್ಹ ಶಾಸಕರಲ್ಲಿತ್ತು. ಒಂದೊಮ್ಮೆ ತೀರ್ಪು ಆ ರೀತಿ ಬಂದಿದ್ದರೆ ರಾಜೀನಾಮೆ ಅಂಗೀಕಾರವಾಗಿ ಅನರ್ಹತೆಯ ಕಳಂಕ ಕಳಚುತ್ತಿತ್ತು. ನಂತರ ಸಚಿವರಾಗಿ ಆ ಮೇಲೆ ಉಪಚುನಾವಣೆ ಎದುರಿಸುವ ಲೆಕ್ಕಾಚಾರದಲ್ಲಿದ್ದರು. ಆದರೆ ಸುಪ್ರೀಂ ಕೋರ್ಟ್‌ ಅನರ್ಹತೆಯನ್ನು ಎತ್ತಿ ಹಿಡಿದು, ಚುನಾವಣಾ ಸ್ಪರ್ಧೆಯ ನಿರ್ಬಂಧ ಸಡಿಲಿಸಿದೆ. ಇದು ಕೆಲ ಅನರ್ಹರಲ್ಲಿ ಬೇಸರ ಮೂಡಿಸಿದ್ದರೂ ಆ ಬಗ್ಗೆ ಹೆಚ್ಚಾಗಿ ತೋರ್ಪಡಿಸಿಕೊಳ್ಳಲಿಲ್ಲ.

ಅಲ್ಪಸಂಖ್ಯಾತರಿಗೆ ಟಿಕೆಟ್‌?: ಶಿವಾಜಿನಗರ ಕ್ಷೇತ್ರದಿಂದ ಮಾಜಿ ಸಚಿವ ಆರ್‌.ರೋಷನ್‌ ಬೇಗ್‌ ತಮ್ಮ ಬದಲಿಗೆ ಪುತ್ರನಿಗೆ ಟಿಕೆಟ್‌ ನೀಡುವಂತೆ ಕೋರಿದ್ದು, ಇದಕ್ಕೆ ಸಹಮತ ವ್ಯಕ್ತವಾಗಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಗೂ ಟಿಕೆಟ್‌ ನೀಡಿರಲಿಲ್ಲ. ಇದೀಗ ರೋಷನ್‌ ಬೇಗ್‌ ಪುತ್ರನಿಗೆ ಟಿಕೆಟ್‌ ನೀಡಲು ಮುಂದಾದರೆ ಅಲ್ಪಸಂಖ್ಯಾತರೊಬ್ಬರಿಗೆ ಟಿಕೆಟ್‌ ನೀಡಿದಂತಾಗಲಿದೆ.

ಅಥಣಿ ಅಭ್ಯರ್ಥಿ ಗೊಂದಲ?: ಅಥಣಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಅಥಣಿ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಹಾಗಾಗಿ ಲಕ್ಷ್ಮಣ ಸವದಿ ಅವರ ಸ್ಪರ್ಧೆ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹಾಗಿದ್ದರೂ ಮಹೇಶ್‌ ಕುಮಟಳ್ಳಿ ಅವರೇ ಅಭ್ಯರ್ಥಿಯಾಗಲಿದ್ದಾರೆಯೇ ಎಂಬ ಬಗ್ಗೆಯೂ ಅನುಮಾನವಿದೆ. ಇಬ್ಬರ ಪೈಕಿ ಒಬ್ಬರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡುವುದು, ಮತ್ತೂಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಹಿರಿಯ ನಾಯಕರು ಚರ್ಚಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next