ಮಂಗಳೂರು: ಜನರ ವಿಶ್ವಾಸ ಗಳಿಸಿ ಸದೃಢವಾಗಿ ಬೆಳೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮುಂದೆಯೂ ಪ್ರೀತಿ, ವಿಶ್ವಾಸಕ್ಕೆ ಚ್ಯುತಿಯಾಗದ ರೀತಿಯಲ್ಲಿ ಕೆಲಸ ಮಾಡಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಜರುಗಿದ ಹುಟ್ಟುಹಬ್ಬ ಆಚರಣೆ ಸಮಾರಂಭ, ಮೈಸೂರು ವಿಭಾಗದ ಡಿಸಿಸಿ ಬ್ಯಾಂಕ್‌ಗಳ ಆಡಳಿತ ಮಂಡಳಿಯ ಸದಸ್ಯರು, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಎಸ್‌ಸಿಡಿಸಿಸಿ ಬ್ಯಾಂಕ್ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲಿಸಿಕೊಟ್ಟು ಅವರನ್ನು ಸ್ವಾವಲಂಬಿಯನ್ನಾಗಿಸಿದೆ ಎಂದರು.
ಮುಖ್ಯವಾಗಿ ರೈತರು, ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದೆ. ಮಹಿಳೆಯರು ಪಡೆದ ಸಾಲದಲ್ಲಿ ಶೇ.99.9ರಷ್ಟು ಮರುಪಾವತಿಯಾಗುತ್ತಿದೆ. ಕೃಷಿ ಸಾಲ ಶೇ.100 ಮರುಪಾವತಿಯಾಗುತ್ತಿದೆ. ರೂಪೇ ಕಿಸಾನ್ ಕಾರ್ಡ್‌ನ್ನು ದೇಶದಲ್ಲೇ ಮೊದಲ ಬಾರಿಗೆ ನೀಡಿರುವ ಹೆಗ್ಗಳಿಕೆಯೂ ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ಇದೆ. ತಂತ್ರಜ್ಞಾನದ ಅಳವಡಿಕೆಯಲ್ಲಿಯೂ ಮುಂಚೂಣಿಯಲ್ಲಿದೆ.
ಸಮಾಜದ ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡುತ್ತಾ ಬರುತ್ತಿದೆ. ಉನ್ನತ ವಿದ್ಯಾಭ್ಯಾಸ ನಡೆಸುವವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು. ಕಳೆದ ಬಾರಿ 26 ಮಂದಿ ರೈತರನ್ನು ವೈಜ್ಞಾನಿಕ ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್‌ಗೆ ಕಳುಹಿಸಿ ಕೊಡಲಾಗಿತ್ತು. ಈ ಬಾರಿ ಮಹಿಳೆಯರಿಗೂ ಅವಕಾಶ ನೀಡಲಾಗುವುದು. ನವೋದಯ ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಒತ್ತು ನೀಡಲಾಗುತ್ತಿದೆ.
ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ, ಜಾತಿ, ಧರ್ಮಗಳು ಇರಬಾರದು ಎಂದು ಪ್ರತಿಪಾದಿಸುತ್ತಾ ಬಂದಿದ್ದೇನೆ. ಅದರಂತೆಯೇ ನಡೆದುಕೊಳ್ಳುತ್ತಿದ್ದೇನೆ. ಜನರ ಪ್ರೀತಿ, ದೇವರು, ಹಿರಿಯರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. ಹೆಜ್ಜೆ ಹೆಜ್ಜೆಗೂ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹರಸಿದ್ದಾರೆ. ಮಹಿಳೆಯರು ಮತ್ತಷ್ಟು ಸ್ವಾವಲಂಬಿಯಾಗಬೇಕು. ಎಲ್ಲರೂ ಒಂದಾಗಿ ಮುನ್ನಡೆದಾಗ ಜಿಲ್ಲೆಯನ್ನು ಆರ್ಥಿಕವಾಗಿ ಮತ್ತಷ್ಟು ಸದೃಢಗೊಳಿಸಿ ಮಾದರಿಯನ್ನಾಗಿ ಮಾಡಬಹುದು ಎಂದು ರಾಜೇಂದ್ರ ಕುಮಾರ್ ಹೇಳಿದರು.