Advertisement

ರೈತ ದಸರಾದಲ್ಲಿ ರೈತರ ಬದುಕು ಅನಾವರಣ

09:00 PM Oct 01, 2019 | Lakshmi GovindaRaju |

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ನಡೆಯುತ್ತಿರುವ ರೈತ ದಸರಾ, ರೈತರ ಬದುಕನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ನಗರದ ಜೀವಣ್ಣರಾಯನಕಟ್ಟೆ ಮೈದಾನದಲ್ಲಿ ಆಯೋಜಿಸಿರುವ ರೈತ ದಸರಾ ಉದ್ಘಾಟಿಸಿ ಮಾತನಾಡಿದರು.

Advertisement

ಮೈಸೂರು ದಸರಾಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಬಂದು ಕಣ್ತುಂಬಿ ಕೊಳ್ಳುತ್ತಾರೆ. ಮೈಸೂರು ದಸರಾವನ್ನು ಸರಿಗಟ್ಟುವ ಮತ್ತೊಂದು ಹಬ್ಬ ರಾಜ್ಯದಲ್ಲಿ ಆಚರಿಸುವುದು ಕಡಿಮೆ. ರೈತರು ನಮ್ಮೆಲ್ಲರ ಬೆನ್ನೆಲುಬು ಅವರಿಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಸಂದೇಶ ಕೊಡುತ್ತದೆ. ದಸರಾ ಹಬ್ಬದಲ್ಲಿ ನಾಡಿನ ರೈತರು ಭಾಗಿಯಾಗಿ ಮತ್ತಷ್ಟು ಮೆರಗು ನೀಡಬೇಕು. ದಸರಾ ಎಂದರೆ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಹಬ್ಬವಾಗಿದ್ದು ರೈತರು ಭಾಗಿಯಾಗುವುದು ಸಾಂಪ್ರದಾಯಿಕ ಸಂಕೇತ ಎಂದು ಬಣ್ಣಿಸಿದರು.

ಕೃಷಿ ಬಜೆಟ್‌: ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಕೃಷಿಗೆ ಪ್ರತ್ಯೇಕ ಬಜೆಟ್‌ ಮಂಡಿಸಿ ರೈತರಿಗೆ ಇದು ನಮ್ಮ ಬಜೆಟ್‌ ಅನ್ನುವ ಭಾವನೆ ಮೂಡಿಸಿದರು. ರಾಜ್ಯದಲ್ಲಿ ಅನೇಕ ವರ್ಷಗಳಿಂದ ಬರಗಾಲ ಇತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಭಾರೀ ಮಳೆಯಾಗಿ ಪ್ರವಾಹ ಸಂಭವಿಸಿ ಅಲ್ಲಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾಗಿರಬಹುದು. ಆದರೆ, ರಾಜ್ಯದ ಎಲ್ಲಾ ಜಲಾಶಯಗಳೂ ತುಂಬಿರುವುದರಿಂದ ರೈತರಿಗೆ ನೆಮ್ಮದಿಯ ಭಾವ ಬಂದಿದೆ.

ಪ್ರವಾಹ ಪರಿಸ್ಥಿತಿಯನ್ನು ಸರ್ಕಾರ ಸಮರ್ಪಕವಾಗಿ ನಿಭಾಯಿಸಿದೆ ಎಂದರು. ಶಾಸಕ ಎಲ್‌.ನಾಗೇಂದ್ರ ಮಾತನಾಡಿ, ದಸರಾ ಕಾರ್ಯಕ್ರಮಗಳಲ್ಲಿ ರೈತರಿಗೆ ವಿಶೇಷವಾಗಿ ಅವಕಾಶ ಕಲ್ಪಿಸಲು ಹಾಗೂ ಅವರನ್ನು ಕ್ರೀಡೆ ಮತ್ತಿತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಅವರಿಗೂ ದಸರಾ ಪರಂಪರೆ ತಿಳಿಸುವ ಸಂಪ್ರದಾಯ ಈ ರೈತ ದಸರಾ ಕಾರ್ಯಕ್ರಮದಲ್ಲಿ ಅಡಗಿದೆ ಎಂದು ಹೇಳಿದರು.

ವಿಚಾರ ವಿನಿಮಯ: ತಂಬಾಕು ಬೆಳೆಗೆ ಪರ್ಯಾಯ ಬೆಳೆ ಯೋಜನೆ ಕುರಿತು ಸಾಧಕ ರೈತರೊಂದಿಗೆ ವಿಚಾರ ವಿನಿಮಯ, ಕೃಷಿ ಸಂಬಂಧಿತ ರೇಷ್ಮೆ, ತೋಟಗಾರಿಕೆ, ಅರಣ್ಯ, ಪಶುಪಾಲನೆ, ಮೀನುಗಾರಿಕೆಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು.

Advertisement

ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೂ ಮುನ್ನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದ ಜೆ.ಕೆ.ಮೈದಾನದವರೆಗೆ ರೈತ ದಸರಾ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪೂಜಾ ಕುಣಿತ, ವೀರಗಾಸೆ, ಹುಲಿವೇಷ ಸೇರಿದಂತೆ ಹಲವಾರು ಕಲಾ ತಂಡಗಳು, ಸ್ತಬ್ಧಚಿತ್ರಗಳು ಭಾಗಿಯಾಗಿದ್ದು, ಬಂಡೂರಿ ಕುರಿಗಳ ಪ್ರದರ್ಶನ ಹಾಗೂ ಏಳು ಎತ್ತಿನ ಗಾಡಿಗಳ ಮೂಲಕ ರೈತರು ಜೆ.ಕೆ ಮೈದಾನದವರೆಗೆ ಮೆರವಣಿಗೆ ಮೂಲಕ ಸಾಗಿದರು. ಈ ವೇಳೆ ಶಾಸಕ ಎಸ್‌.ಎ ರಾಮದಾಸ್‌, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಉಪ ಮೇಯರ್‌ ಶಫೀ ಅಹಮದ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ಜಂಟಿ ಕೃಷಿ ನಿರ್ದೇಶಕ ಡಾ.ಮಹಂತೇಶಪ್ಪ ಇತರರಿದ್ದರು.

ದೇಗುಲಗಳಲ್ಲಿ ಸಾಮೂಹಿಕ ವಿವಾಹ: ರಾಜ್ಯದಲ್ಲಿ 34 ಸಾವಿರಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿದ್ದು, ಈ ಪೈಕಿ ಸಂಪದ್ಬರಿತ ದೇವಸ್ಥಾನಗಳ ಮೂಲಕ ಸಾಮೂಹಿಕ ವಿವಾಹ ಏರ್ಪಡಿಸಿ, ವಧುವಿಗೆ ತಾಳಿ, ಸೀರೆ ಕೊಡಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಮುಜರಾಯಿ ಹಾಗೂ ಮೀನುಗಾರಿಕೆ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next