ಚಿಕ್ಕಮಗಳೂರು:ಹನುಮ ಧ್ವಜ ನಿಷೇಧಿತ ಧ್ವಜವೇ? ಮಂಡ್ಯದ ಕೆರೆಗೋಡು ವಿವಾದಿತ ಸ್ಥಳವೇ ಎಂದು ಮಾಜಿ ಸಚಿವ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.15, ಜ.26, ನ.1ರಂದು ಕನ್ನಡ ಧ್ವಜ ಉಳಿದಂತೆ ಧರ್ಮಧ್ವಜ ಹಾರಿಸುತ್ತೇವೆಂದು ಹನುಮ ಧ್ವಜ ಹಾರಿಸಲು ಪಂಚಾಯಿತಿ ಅನುಮತಿ ಕೇಳಿದ್ದಾರೆ. ಪಂಚಾಯಿತಿ ಅನುಮತಿ ಮೇರೆಗೆ ಶಾಶ್ವತ ಧ್ವಜಸ್ಥಂಬ ನಿರ್ಮಾಣ ಮಾಡಿದ್ದು, ಜಿಲ್ಲಾಡಳಿತ ಏಕಾಏಕಿ ಹನುಮ ಧ್ವಜ ತೆರವು ಮಾಡಿದ್ದಕ್ಕೆ ಕಾರಣವೇನು? ಇದರ ಹಿಂದೆ ಕಾಂಗ್ರೆಸ್ ಪಿತೂರಿ ಇದೆ. ಕಾಂಗ್ರೆಸ್ ಮನಸ್ಥಿತಿಯೇ ಇದಾಗಿದ್ದು ಸನಾತನ ಧರ್ಮದ ಮೇಲಿನ ಭಾವನೆ ಇದರಿಂದ ವ್ಯಕ್ತವಾಗಿದೆ. 30 ವರ್ಷದ ಹಿಂದಿನ ಪ್ರಕರಣ ಓಪನ್, ಹನುಮ ಧ್ವಜ ತೆರವು ಕಾಕತಾಳೀಯ ಅಲ್ಲ. ಇದರಲ್ಲಿ ಹಿಂದೂ ದ್ವೇಷ ಎದ್ದು ಕಾಣುತ್ತಿದೆ. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವೇಳೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದು ಇದರ ಹಿಂದೆ ಹಿಂದೂ ದ್ವೇಷ ಎದ್ದು ಕಾಣುತ್ತಿದೆ ಎಂದರು.
ರಾಷ್ಟ್ರಧ್ವಜ ಹಾರಿಸಲು ಹೋದವರ ಮೇಲೆ ಹುಬ್ಬಳ್ಳಿಯಲ್ಲಿ ಗೋಲಿಬಾರ್ ಮಾಡಿಸಿ ಐದು ಜನರನ್ನು ಸಾಯಿಸಿದರು. ಕಾಂಗ್ರೆಸ್‌ಗೆ ಮಾನ, ಮಾರ್ಯಾದೆ ಇದೆಯೇ. ಹನುಮ ಧ್ವಜ ತೆಗೆದು ರಾಷ್ಟ್ರಧ್ವಜ ಹಾರಿಸಬೇಕಾ? ನಿಮಗೆ ಮತ್ತೊಂದು ಧ್ವಜಕಂಬ ಹಾಕಿ ಇನ್ನೂ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸೋ ಯೋಗ್ಯತೆ ಇಲ್ವಾ. ನಾವು ರಾಷ್ಟ್ರಧ್ವಜವನ್ನು ಎಲ್ಲದಕ್ಕಿಂತ ಎತ್ತರದಲ್ಲಿ ಹಾರಿಸುತ್ತೇವೆ. ಹನುಮ ಧ್ವಜವನ್ನೂ ಹಾರಿಸುತ್ತೇವೆ. ಜಿಲ್ಲಾಡಳಿತ ಯಾರ ಕೈಗೊಂಬೆಯಲ್ಲ. ಹನುಮ ಧ್ವಜ ತೆಗೆಯೋ ಅಧಿ ಕಾರ ಯಾರೂ ಕೊಟ್ಟಿಲ್ಲ. ಯಾವ ಆದೇಶದ ಮೇರೆಗೆ ತೆಗೆಯಲಾಗಿದೆ ಎಂದು ಅವರು ತಿಳಿಸಲಿ. ಮರ್ಯಾದೆಯಿಂದ ನೀವೇ ಧ್ವಜ ಹಾರಿಸಬೇಕು. ಶಾಲಾ-ಕಾಲೇಜಿನಲ್ಲಿ ಹಿಜಾಬ್ ತರ್ತೀವಿ ಅಂತೀರಾ. ಅಲ್ಲಿ ಹನುಮ ಧ್ವಜ ತೆಗೆಯುತ್ತೀರಾ ಎಂದರು.
ಸಿದ್ದರಾಮಯ್ಯ ಶೋಷಿತರ ಹೆಸರಿನಲ್ಲಿ ಸಮಾವೇಶ ಮಾಡಿದ್ದಾರೆ. ಅಲ್ಲಿಗೆ ಬಂದವರು ಯಾರು? ಸ್ಪಾನ್ಸರ್ ಮಾಡಿದ್ದು ಯಾರು ಎಂದು ನಮಗೂ ಗೊತ್ತಿದೆ. ಭೈರತಿ ಸುರೇಶ್ ಶೋಷಿತರಾ? ಭೈರತಿ ಸುರೇಶ್ ಕೋಟಿ ಕೋಟಿ ಹಣ ಕೊಟ್ಟು ಶೋಷಿತರ ಸಮಾವೇಶ ಮಾಡಿದ್ದಾರೆ. ಹೆಸರಿಗೆ ಮಾತ್ರ ಶೋಷಿತರ ಸಮಾವೇಶ.
ಮುಖ್ಯಮಂತ್ರಿಗಳು ರಾಷ್ಟ್ರಪತಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಇದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ. ನಿಮಗೆ ಕಿಂಚಿತ್ತು ಆ ಸ್ಥಾನದ ಬಗ್ಗೆ ಗೌರವವಿದ್ದರೆ ಕ್ಷಮೆ ಕೇಳಿ ಎಂದರು.