ಬೆಂಗಳೂರು: ಇದುವರೆಗೆ ಹಲವು ರೀತಿಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೊಸ ಲೋಕವೇ ತೆರೆದಂತಿದೆ. ವಿಶಾಲ ಮೈದಾನದಲ್ಲಿ ಒಂದೆಡೆ ಕೋಣಗಳ ಓಟಕ್ಕೆ ಸಜ್ಜಾಗಿರುವ ಸುಂದರ ಕಂಬಳ ಕೆರೆಯಾದರೆ ಮತ್ತೊಂದೆಡೆ ಯಾವಾಗ ಸ್ಪರ್ಧೆ ಆರಂಭವಾಗುತ್ತದೆಯೋ ಎಂದು ಕಾದು ಕುಳಿತಿರುವ ಕೋಣಗಳು, ಯಜಮಾನರು.
ಮೈದಾನದ ಮತ್ತೊಂದೆಡೆ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗಿರುವ ವಿಶಾಲ ವೇದಿಕೆ, ಮತ್ತೊಂದೆಡೆ ಆಹಾರ ಮೇಳದ ಟೆಂಟ್ ಗಳಿಂದ ಘಮ್ಮನೆ ಬರುತ್ತಿರುವ ಸುವಾಸನೆ… ಇದಕ್ಕೆಲ್ಲ ಕಾರಣವಾಗಿರುವುದು ಐತಿಹಾಸಿಕ ದಾಖಲೆ ಬರೆಯಲು ಮುಂದಾದ ಬೆಂಗಳೂರು ರಾಜ ಮಹಾರಾಜಾ ಜೋಡುಕೆರೆ ಕಂಬಳ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶಾಲ ಪ್ರದೇಶದಲ್ಲಿ ಇದೆ ಮೊದಲ ಬಾರಿಗೆ ಕಂಬಳ ಆಯೋಜಿಸಲು ಬೆಂಗಳೂರು ಕಂಬಳ ಸಮಿತಿ ಮುಂದಾಗಿದೆ. ಕರಾವಳಿಯಿಂದ ಹೊರಗೆ ಇದೆ ಮೊದಲ ಬಾರಿಗೆ ಕಂಬಳ ನಡೆಯುತ್ತಿದೆ. ಹೀಗಾಗಿ ಕೇವಲ ಕಂಬಳ ಮಾತ್ರವಲ್ಲದೆ ಕರಾವಳಿ ಮಣ್ಣಿನ ಸೊಗಡಿನ ಕಂಪನ್ನು ರಾಜಧಾನಿ ಬೆಂಗಳೂರಿಗೆ ಪಸರಿಸಲು ಸಿದ್ಧತೆ ನಡೆಸಲಾಗಿದೆ
ಕಂಬಳ ಕರೆಯ ಪಕ್ಕದಲ್ಲಿರುವ ವಿಶಾಲ ಜಗದಲ್ಲಿ ಆಹಾರ ಮೇಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರಾವಳಿಯ ಆಹಾರ ಪದ್ದತಿಯ ಪ್ರಮುಖವಾಗಿ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಆಹಾರ ಮಳಿಗೆಗಳು ಇಲ್ಲಿವೆ.
ಇಲ್ಲಿನ ಮೈದಾನದಲ್ಲಿ ತುಳುನಾಡು ಮತ್ತು ಕರಾವಳಿಯನ್ನು ಪ್ರತಿನಿಧಿಸುವ ಹಲವು ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಯಕ್ಷಗಾನದ ವೇಷಧಾರಿ, ಯಕ್ಷಗಾನದ ಬೃಹತ್ ಕಿರೀಟ, ಬತ್ತದ ಕಣಜ, ಸಿರಿ ತುಪ್ಪೆ, ಕಂಬಳ ಕೋಣಗಳು, ಎತ್ತಿನಗಾಡಿ, ಗೋಮಟೇಶ್ವರ ಪ್ರತಿಮೆ, ಕೋಟಿ ಚೆನ್ನಯರ ಮೂರ್ತಿಗಳನ್ನು ಇಲ್ಲಿ ಇರಿಸಲಾಗಿದೆ.
ಕಂಬಳ ಆರಂಭಕ್ಕೆ ಒಂದು ದಿನ ಮೊದಲೇ ಬಂದಿರುವ ಜನರು ಇದರ ಬಳಿ ಫೋಟೋ, ಸೆಲ್ಫಿ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಇಷ್ಟೇ ಅಲ್ಲದೆ ತುಳುನಾಡ ಮೂಲ ನಂಬಿಕೆಯಾದ ನಾಗಾರಾಧನೆಯ ನಾಗಬನ, ದೈವಾರಾಧನೆಯ ದೈವದ ಮನೆಯ ಮಾದರಿಯನ್ನು ಮಾಡಿ ಬೆಂಗಳೂರಿಗರಿಗೆ ತುಳುನಾಡ ಸಂಸ್ಕೃತಿಯ ಪರಿಚಯ ಮಾಡುವ ಪ್ರಯತ್ನ ನಡೆಯುತ್ತಿದೆ.
-ಕೀರ್ತನ್ ಶೆಟ್ಟಿ ಬೋಳ