Advertisement
ಹೌದು. ಶುಕ್ರವಾರ ಧಾರವಾಡ ಕಿಲ್ಲರ್ ಕಟ್ಟಡ ದುರಂತದ ವಿಚಾರಣೆ ಆರಂಭಗೊಂಡಿದ್ದು, ಸಂಜೆವರೆಗೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ದೀಪಾ ಚೋಳನ್ ಅವರು ಕಟ್ಟಡ ದುರಂತದಲ್ಲಿ ಮೃತಪಟ್ಟವರ ವಾರಸುದಾರರು, ಗಾಯಗೊಂಡವರು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದ ವೇಳೆ ಕಿಲ್ಲರ್ ಕಟ್ಟಡ ದುರಂತದಲ್ಲಿ ಮಡಿದವರ ಮತ್ತು ಗಾಯಗೊಂಡವರ ಕುಟುಂಬಗಳ ಕರುಣಾಜನಕ ಕಥೆಗಳು ಅನಾವರಣಗೊಂಡವು. ಅಷ್ಟೇಯಲ್ಲ, ಕಟ್ಟಡ ಕುಸಿತಕ್ಕೆ ಕಾರಣವಾದ ಸಂಗತಿಗಳು ಮತ್ತು ಕಾರಣವಾದ ವ್ಯಕ್ತಿಗಳ ಕುರಿತು ಮತ್ತಷ್ಟು ಸತ್ಯಗಳು ಹೊರ ಬಿದ್ದವು.
Related Articles
Advertisement
ಅಂಗಡಿ ಹಣ ಕೊಡಿಸಿ : ಇದೇ ವೇಳೆ ಕಿಲ್ಲರ್ ಕಟ್ಟಡದಲ್ಲಿ ಅಂಗಡಿ ಖರೀದಿಸಿದ ಕುಟುಂಬಗಳು ತಮ್ಮ ದುರಂತ ಕಥೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಈ ಪೈಕಿ ಸಂಗಮೇಶ ಮನಮಿ ಎನ್ನುವವರ ಕುಟುಂಬ ಸದಸ್ಯರು 32 ಲಕ್ಷ ರೂ.ಗಳನ್ನು ಕೊಟ್ಟು ಅಲ್ಲಿ ಮಳಿಗೆ ಖರೀದಿಸಿದ್ದೆವು. ಆದರೆ ಇದೀಗ ಹಣವೂ ಹೋಯ್ತು, ಅಂಗಡಿಯೂ ಹೋಯ್ತು. ಪ್ರತಿ ತಿಂಗಳು ಪೈನಾನ್ಸ್‌ದವರು ನೋಟಿಸ್ ನೀಡುತ್ತಿದ್ದಾರೆ. ನಾವು ದುಡ್ಡನ್ನು ಹೇಗೆ ಕಟ್ಟುವುದು? ದಯಮಾಡಿ ನಮಗೆ ನಮ್ಮ ಹಣ ಕೊಡಿಸಿ ಎಂದು ಮನವಿ ಮಾಡಿದರು. ಅದೇ ರೀತಿ ಬಸವರಾಜ ನಿಗದಿ ಅವರಿಂದ 30 ಲಕ್ಷ ರೂ. ನೀಡಿ ಇದೇ ಕಟ್ಟಡದಲ್ಲಿ ಮಳಿಗೆ ಖರೀದಿಸಿ ಕಂಪ್ಯೂಟರ್ ಅಂಗಡಿ ಇಟ್ಟಿದ್ದ ಕುಟುಂಬಸ್ಥರು ಕೂಡ ಜಿಲ್ಲಾಧಿಕಾರಿಗಳಿಗೆ ಪರಿಹಾರಕ್ಕೆ ಮೊರೆ ಇಟ್ಟರು. ಈ ಕುರಿತು ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಭರವಸೆ ನೀಡಿದರು.
15ರೊಳಗೆ ಪರಿಹಾರ: ಜಿಲ್ಲಾಧಿಕಾರಿ
ಕಿಲ್ಲರ್ ಕಟ್ಟಡ ದುರಂತದಲ್ಲಿ ಮೃತಪಟ್ಟವರು, ತೀವ್ರ ಗಾಯಗೊಂಡವರಿಗೆ ಈಗಾಗಲೇ ಅರ್ಧದಷ್ಟು ಪರಿಹಾರ ನೀಡಲಾಗಿದೆ. ಆದರೆ ಇದೀಗ ಪ್ರಧಾನಮಂತ್ರಿ ಪರಿಹಾರ ಧನ ಯೋಜನೆಯಡಿಯಲ್ಲಿ ಮತ್ತೆ ಹಣ ಬಂದಿದ್ದು ಅದನ್ನು ಮೇ 15ರೊಳಗೆ ಅವರ ಖಾತೆಗಳಿಗೆ ಬಿಡುಗಡೆ ಮಾಡುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಟ್ಟಡ ದುರಂತದಲ್ಲಿ ಮೃತಪಟ್ಟಿರುವ 19 ಜನರಿಗೆ ತಲಾ 7ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಈ ಪೈಕಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 3 ಲಕ್ಷ, ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ , ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇನ್ನು ತೀವ್ರ ಗಾಯಗೊಂಡವರಿಗೆ ಈಗಾಗಲೇ ಮಹಾನಗರ ಪಾಲಿಕೆಯಿಂದ ತಲಾ 1ಲಕ್ಷ ರೂ. ನೀಡಲಾಗಿದ್ದು, ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದರು. ಇನ್ನು ಗಾಯಗೊಂಡವರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ ಪಡೆಯಲಾಗುತ್ತಿದೆ ಎನ್ನುವ ದೂರಿದೆ. ಈ ಕುರಿತು ತಕ್ಷಣವೇ ಎಸ್‌ಡಿಎಂ ಮತ್ತು ಕಿಮ್ಸ್‌ಗೆ, ಕಟ್ಟಡ ದುರಂತದಲ್ಲಿ ಗಾಯಗೊಂಡ ಯಾರಿಂದಲೂ ಚಿಕಿತ್ಸಾ ವೆಚ್ಚ ಪಡೆಯದಂತೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು