ಪುಂಜಾಲಕಟ್ಟೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಬಂಟ್ವಾಳ ತಾ| ತುಳು ಸಾಹಿತ್ಯ ಸಮ್ಮೇಳನ ಸಮಿತಿ ಆಶ್ರಯದಲ್ಲಿ ಬಿ.ಸಿ. ರೋಡ್‌ನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ಬಂಟ್ವಾಳ ತಾ| ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳು, ವಸ್ತು ಪ್ರದರ್ಶನ, ಆಟೋಟ ಸ್ಪರ್ಧೆಗಳು, ಚಾವಡಿ ಪಟ್ಟಾಂಗ, ನೃತ್ಯ, ಹಾಡುಗಳು, ಹೀಗೆ ವಿವಿಧ ಸಾಹಿತ್ಯಕ, ಸಾಂಸ್ಕೃತಿಕ ಕ್ರೀಡೆಗಳು ಮೇಳೈಸಿದವು.
ತುಳುಗ್ರಾಮ ಕಲ್ಪನೆಯ ವಿಶಾಲ ಗದ್ದೆಯ ಮೈದಾನದಲ್ಲಿ ಸಿರಿದೊಂಪ ಸಭಾಂಗಣದಲ್ಲಿ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ, ವೇದಿಕೆ ಹಿಂಭಾಗದ ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳು ನಡೆದವು. ಸಭಾಂಗಣದ ಸುತ್ತಮುತ್ತ ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ-ಮಾರಾಟ, ವಸ್ತ್ರಗಳು, ಫ್ಯಾನ್ಸಿ, ದೇಸಿ ಸಾಮಗ್ರಿಗಳ ಮಳಿಗೆ, ಕಬ್ಬಿನ ಹಾಲು, ಚರುಂಬುರಿ, ಐಸ್‌ಕ್ರೀಂ ಹಾಗೂ ಗೃಹೋಪಯೋಗಿ ವಸ್ತುಗಳು, ಕೃಷಿ ಸಂಬಂಧಿತ ಉಪಕರಣಗಳ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ನಡೆಯಿತು.
ತಾಲೂಕಿನ ಪ್ರಥಮ ತುಳು ಸಾಹಿತ್ಯ ಸಮ್ಮೇಳನಕ್ಕೆ ಜನಸಾಗರವೇ ಹರಿದು ಬಂತು. ಒಂದೆಡೆ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸಿದರೆ, ಇನ್ನೊಂದೆಡೆ ಮಳಿಗೆಗಳಲ್ಲೂ ಜನಸಂದಣಿ ಕಂಡುಬಂತು. ಬೆಳಗ್ಗೆ ನೀರು, ಬೆಲ್ಲ ಆಗಮಿಸಿದವರ ಬಾಯಾರಿಕೆ ತಣಿಸಿದರೆ, ಬಳಿಕ ಉಪಾಹಾರ, ಮಧ್ಯಾಹ್ನ ಭೋಜನ ವ್ಯವಸ್ಥೆಗೊಳಿಸಲಾಗಿತ್ತು.
ಬಂಟ್ವಾಳ ತಾಲೂಕು ಮಟ್ಟಕ್ಕೆ ಒಳಪಟ್ಟು ತುಳು ಗಾದೆ, ಎದುರು ಕತೆ, ಅಜ್ಜಿಕತೆ ಬರೆಯುವುದು ಮತ್ತು ತುಳು ಲಿಪಿಯಲ್ಲಿ ತುಳುವ ವೀರರ ಹೆಸರು ಬರೆಯುವುದು ಹಾಗೂ ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರಿಗೆ ಸೈಕಲ್ ಟಯರ್, ಕಾರ್ ಕಂಬುಲ, ಪಾಲೆ ಬಂಡಿ, ಗೋಲಿಗೊಬ್ಬು, ಜಿಬಿಲಿ, ಕೆರೆ ದಂಡೆ, ಡೊಂಕಾಟ, ಕಲ್ಲಾಟ, ಉಪ್ಪು ಮುಡಿ, ಲಗೋರಿ, ಗೋಣಿ ಚೀರವು, ಹಗ್ಗಜಗ್ಗಾಟ, ಮುಟ್ಟಾಲೆ ಪಾಡಿ, ಹಿರಿಯ ನಾಗರಿಕರು ವೇಗದ ನಡಿಗೆ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಬಟ್ಟಿ, ಕುಡುಪು, ಮುಟ್ಟಾಳೆ, ಬೀಡಿದ ಸೂಪು, ಪಜೆ, ಮಣ್ಣ್ ದ ಬಾಜನ, ಕೈಲ್,ತಡ್ಪೆ, ಕುರುವೆ, ಮೈಪುಸೂಡಿ ಪ್ರದರ್ಶನ ಜನರನ್ನಾಕರ್ಷಿಸಿತು.
ವಿಚಾರಗೋಷ್ಠಿ, ಚಾವಡಿ ಪಟ್ಟಾಂಗದಲ್ಲಿ ತುಳು ಸಂಸ್ಕೃತಿಯ ಉಳಿವು, ವ್ಯವಸಾಯದ ಏಳು-ಬೀಳುಗಳು ಕುರಿತು ಗೋಷ್ಠಿ ನಡೆಯಿತು. ಕವಿಗೋಷ್ಠಿ, ಹಳೆಯ ತುಳು ಹಾಡುಗಳು, ಸಂಧಿ-ಪಾಡ್ದನ, ಉರಲ್, ನೃತ್ಯ ಹಾಡುಗಳು ಸಭಿಕರನ್ನು ರಂಜಿಸಿದವು. ಸ್ವಚ್ಛತೆಗೆ ಎಲ್ಲೆಡೆ ಆದ್ಯತೆ ನೀಡಲಾಗಿದ್ದು, ಕಸ ಹಾಕಲು ಅಲ್ಲಲ್ಲಿ ಕಸದ ಡಬ್ಬಿ ವ್ಯವಸ್ಥೆಗೊಳಿಸಲಾಗಿತ್ತು. ಒಟ್ಟಿನಲ್ಲಿ ತುಳು ಸಾಹಿತ್ಯ ಸಮ್ಮೇಳನ ತುಳು ಜಾತ್ರೆಯಾಗಿ ತುಳು ಸಂಸ್ಕೃತಿಯನ್ನು ಅನಾವರಣಗೊಳಿಸಿ ತುಳುವರನ್ನು ಒಗ್ಗೂಡಿಸಿತು.