ಮಹಾನಗರ: ಸ್ವಚ್ಛತೆಯ ಹೆಸರಿನಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಗರದ ರಸ್ತೆ ಬದಿಗಳಲ್ಲಿ ನಿರುಪಯುಕ್ತ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ನಗರದ ಸೌಂದರ್ಯಕ್ಕೆ ದಕ್ಕೆ ತರುವಂತಿದೆ. ಪೊಲೀಸರು ಮುಟ್ಟುಗೋಲು ಹಾಕಿದ ವಾಹನಗಳನ್ನು ನಿಲ್ಲಿಸಲು ನಗರದಲ್ಲಿ ಸ್ಥಳಾವಕಾಶದ ಕೊರತೆ ಇದೆ.
ಠಾಣೆ ಎದುರು ವಾಹನಗಳ ಸಾಲು
ಉರ್ವ, ಬರ್ಕೆ, ಕಂಕನಾಡಿ ಸಹಿತ ಪೊಲೀಸ್ ಠಾಣೆ ಎದುರು ಮುಟ್ಟುಗೋಲು ಹಾಕಿರುವ ವಾಹನಗಳನ್ನು ನಿಲ್ಲಿಸಲಾಗಿದೆ. ಅಪಘಾತ, ವಿಮೆ ಸಹಿತ ಕೆಲವೊಂದು ವಾಹನಗಳ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿ ಇವೆ. ಕೆಲವು ಪ್ರಕರಣ ಅಂತ್ಯಗೊಂಡರೂ ಮಾಲಕರು ವಾಹನ ಬಿಡಿಸಿ ಕೊಳ್ಳಲು ಮುಂದೆ ಬರುತ್ತಿಲ್ಲ. ಅಂತಹ ಹೆಚ್ಚಿನ ವಾಹನ ರಸ್ತೆ ಬದಿಯಿದೆ.
ಲಾರಿ, ರಿಕ್ಷಾಗಳಿಗೆ ಬಳ್ಳಿಯೇ ಹೊದಿಕೆ
ನಾಗುರಿ, ಉರ್ವ ಸಹಿತ ಹಲವು ಕಡೆಗಳಲ್ಲಿ ರಿಕ್ಷಾ, ಬೈಕ್, ಕಾರು, ಟಿಪ್ಪರ್ ಗಳನ್ನು ರಸ್ತೆ ಬದಿ ನಿಲ್ಲಿಸಲಾಗಿದ್ದು, ಅವುಗಳನ್ನು ಮರದ ಬಳ್ಳಿಗಳು, ಗಿಡ, ಪೊದೆಗಳು ಸುತ್ತುವರೆದಿದೆ. ಪರಿಣಾಮ ದೂರಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ವಾಹನಗಳು ಕಾಣಿಸುತ್ತಿಲ್ಲ. ಇದೇ ಅಪಘಾತಕ್ಕೂ ಆಹ್ವಾನ ನೀಡುವಂತಿದೆ.
ಅಪಘಾತಕ್ಕೆ ಆಹ್ವಾನ
ನಿರುಪಯುಕ್ತ ಕಾರಣ ರಸ್ತೆ ಬದಿ ನಿಲ್ಲಿಸಿದ ವಾಹನಗಳು ಅಪಘಾತಕ್ಕೆ ಆಹ್ವಾನ ನೀಡುವಂತಿವೆ. ಕೆಲವು ತಿಂಗಳ ಹಿಂದೆ ಮರೋಳಿ ಬಳಿ ರಸ್ತೆ ಬದಿ ನಿಲ್ಲಿಸಲಾಗಿದ್ದ ನಿರುಪಯುಕ್ತ ಟಿಪ್ಪರ್ ಗೆ ರಿಕ್ಷಾವೊಂದು ಢಿಕ್ಕಿ ಹೊಡೆದು ಚಾಲಕ ಸಾವನ್ನಪ್ಪಿದ ಘಟನೆ ನಡೆದಿತ್ತು. ಬಳಿಕ ಹಲವು ವರ್ಷಗಳಿಂದ ತುಕ್ಕು ಹಿಡಿದು ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಆ ಗುಜರಿ ವಾಹನವನ್ನು ಅಲ್ಲಿಂದ ತೆರವುಗೊಳಿಸುವ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಿತ್ತು. ಈ ರೀತಿ ಅನಾಹುತ ಸಂಬಂಧಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.
ಮಳೆ ಬಂದರೆ ರೋಗಕ್ಕೆ ಆಹ್ವಾನ
ರಸ್ತೆ ಬದಿ ನಿಲ್ಲಿಸಲಾದ ನಿರುಪಯುಕ್ತ ವಾಹನಗಳಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಸಾಂಕ್ರಾಮಿಕ ರೋಗಗಳನ್ನು ತಡೆಯಲು ಟಯರ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆದರೆ, ಈ ವಾಹನಗಳು ರೋಗಕ್ಕೆ ಆಹ್ವಾನ ನೀಡುವಂತಿದೆ. ಈ ವಾಹನಗಳ ಟಯರ್ ಗಳಲ್ಲಿ ಮತ್ತು ವಾಹನಗಳ ಒಳಗೆ ನೀರು ನಿಂತರೆ, ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.
ಸ್ಥಳಾವಕಾಶದ ಕೊರತೆ
ಸಾರಿಗೆ, ಪೊಲೀಸ್ ಇಲಾಖೆ ಮುಟು ಗೋಲು ಹಾಕಿದ ವಾಹನಗಳನ್ನು ನಿಲ್ಲಿಸಲು ನಗರದಲ್ಲಿ ಸ್ಥಳಾವಕಾಶದ ಕೊರತೆಯಿದ್ದು, ಸೂಕ್ತ ಜಾಗ ಗುರುತಿಸಲು ಜಾಗ ಬೇಕು ಎಂದು ಸಾರಿಗೆ ಇಲಾಖೆಯಿಂದ ಸ್ಥಳೀಯಾಡಳಿತಕ್ಕೆ ಈ ಹಿಂದೆಯೇ ಮನವಿ ಮಾಡಲಾಗಿದೆ. ಯಾವ ಭಾಗದಲ್ಲಿ ಸೂಕ್ತ ಜಾಗ ಎಂದು ನಿರ್ಧರಿಸುವ ನಿರ್ಧಾರಕ್ಕೆ ಇನ್ನೂ ಬಂದಿಲ್ಲ.