Advertisement

ಬಳಕೆಯಾಗದ ಸರ್ಕಾರಿ ವಸತಿ ಗೃಹಗಳು

05:02 PM Sep 02, 2021 | Team Udayavani |

ಮದ್ದೂರು: ತಾಲೂಕು ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿರುವ ಸರ್ಕಾರಿ ವಸತಿ ಗೃಹಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಅಧಿಕಾರಿಗಳು ಕರ್ತವ್ಯ ನಿರತ ಸ್ಥಳಗಳಲ್ಲಿ ವಾಸವಿರದ ಕಾರಣ ಹಾಳುಕೊಂಪೆಗಳಾಗಿ ಮಾರ್ಪಟ್ಟಿವೆ.

Advertisement

ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರಬೇಕೆಂಬ ಸರ್ಕಾರದ ಆದೇಶವಿದ್ದರೂ ಯಾವೊಬ್ಬ ಅಧಿಕಾರಿಯು
ವಸತಿ ಗೃಹದಲ್ಲಿ ವಾಸ ವಿರದೆ ದೂರದ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಂದ ಬಂದು ಹೋಗುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ.

ವಿಷ ಜಂತುಗಳ ವಾಸಸ್ಥಾನ: ತಾಲೂಕಿನ ವಿವಿಧ ಹೋಬಳಿ ಕೇಂದ್ರಗಳಲ್ಲಿ ನಿರ್ಮಿಸಿರುವ ವಸತಿ ಗೃಹಗಳು ಇಂದು ಉಪಯೋಗಕ್ಕೆ ಬಾರದಂತಿದ್ದು, ಗಿಡಗಳು ಬೆಳೆದು ನಿಂತು ವಿಷ ಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ.

ವಾಸ ಮಾಡುತ್ತಿಲ್ಲ: ತಾಲೂಕಿನಾದ್ಯಂತ ಸಾರ್ವಜನಿಕರ, ರೈತರ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಆಗಬೇಕೆಂಬ ಜತೆಗೆ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ತಲುಪಬೇಕೆಂಬ ಸದುದ್ದೇಶದೊಂದಿಗೆ ತಾಲೂಕುಮಟ್ಟದ ಅಧಿಕಾರಿಗಳೂ ಸೇರಿದಂತೆ ಕೆಳ ವರ್ಗದ ಅಧಿಕಾರಿಗಳಿಗೆ ಸರ್ಕಾರಿ ನಿವೇಶನದಲ್ಲಿ ವಸತಿ ಗೃಹಗಳನ್ನು ನಿರ್ಮಾಣ ಮಾಡಿದ್ದರೂ ಯಾವೊಬ್ಬ ಅಧಿಕಾರಿಯು ವಾಸ ಮಾಡದಿರುವುದು
ವಿಪರ್ಯಾಸವೇ ಸರಿ.

ಹೇಳತೀರದು: ಕೆಲ ಅಧಿಕಾರಿಗಳು ದುಪ್ಪಟ್ಟು ಬಾಡಿಗೆ ನೀಡಿ ಖಾಸಗಿ ನಿವಾಸಗಳಲ್ಲಿ ವಾಸವಿರುವ ಪರಿಣಾಮವಾಗಿ ಕೆಲ ವಸತಿ ಗೃಹಗಳು ಅದ್ವಾನಗೊಳ್ಳಲು ಕಾರಣವಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ಇರುವ ವಸತಿ ಗೃಹಗಳ ಸ್ಥಿತಿ ಹೇಳತೀರದಂತಾಗಿದೆ.

Advertisement

ಇದನ್ನೂ ಓದಿ:ಹುಬ್ಬಳ್ಳಿಗೆ ಆಗಮಿಸಿದ ಅಮಿತ್ ಶಾ, ಓಂ ಬಿರ್ಲಾ: ಪುಸ್ತಕ ಕೊಟ್ಟು ಸ್ವಾಗತಿಸಿದ ಸಿಎಂ ಬೊಮ್ಮಾಯಿ

ಜೂಜು ಅಡ್ಡೆಗಳಾಗಿ ಮಾರ್ಪಾಟು: ಕೊಪ್ಪ, ಬೆಸಗರಹಳ್ಳಿ, ಕೆಸ್ತೂರು ಸೇರಿದಂತೆ ಇನ್ನಿತರೆಗ್ರಾಮಗಳಲ್ಲಿರುವ ವಸತಿ ಗೃಹಗಳ ಸ್ಥಿತಿ ಅದ್ವಾನ ವಾಗಿ ಕೆಲವು ಬೀಳುವ ಸ್ಥಿತಿಯಲ್ಲಿದ್ದು, ಮತ್ತೆ ಕೆಲವು ಜೂಜು ಅಡ್ಡೆಗಳಾಗಿ ಮಾರ್ಪಟ್ಟಿದ್ದರೂ ಯಾವೊಬ್ಬ ಅಧಿಕಾರಿಯು ಇತ್ತ ತಲೆ ಹಾಕದೇ ಮೌನಕ್ಕೆ ಶರಣಾಗಿರು ವುದು ಸಾರ್ವಜನಿಕರ ಟೀಕೆಗೆಕಾರಣವಾಗಿದೆ. ಜನಪ್ರತಿನಿಧಿಗಳು ಮೌನ: ಕಳೆದ ನಾಲ್ಕು ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್‌ ಉಪ ವಿಭಾಗ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ಗೃಹವು ಉಪಯೋಗಕ್ಕೆ ಬಾರದಂತಿದ್ದು, ಆವರಣದಲ್ಲಿ
ಗಿಡಗಳು ಬೆಳೆದುನಿಂತು ಅದ್ವಾನಗೊಂಡಿದ್ದು ನಿರ್ಲಕ್ಷ್ಯ ಧೋರಣೆಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಚುನಾಯಿತ ಪ್ರತಿನಿಧಿಗಳು ಚಕಾರವೆತ್ತುತ್ತಿಲ್ಲ.

ಅಭಿವೃದ್ಧಿ ಕುಂಠಿತ: ತಾಲೂಕುಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರಬೇಕೆಂಬ ನಿಯಮವನ್ನುಗಾಳಿಗೆ ತೂರಿ, ಮಂಡ್ಯ, ಮೈಸೂರು, ಬೆಂಗಳೂರು ಇನ್ನಿತರೆ ಹೊರ ಜಿಲ್ಲೆಗಳಿಂದ ಬಂದು ಹೋಗುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದು ರೈತರ, ಸಾರ್ವಜನಿಕರ
ಕೆಲಸ ಕಾರ್ಯಗಳ ವಿಳಂಬದ ಜತೆಗೆ ತಾಲೂಕು ಅಭಿವೃದ್ಧಿ ಕುಂಠಿತವಾಗಿದೆ. ತಾಲೂಕು ಹಾಗೂ ಪಟ್ಟಣ ವ್ಯಾಪ್ತಿಯಲ್ಲಿರುವ ವಸತಿ ಗೃಹಗಳನ್ನು ಸರ್ಕಾರ ಆಧುನೀಕರಣಗೊಳಿಸಿ ಮೂಲ ಸೌಲಭ್ಯ ಕಲ್ಪಿಸಿ ಅಧಿಕಾರಿಗಳು ಕೇಂದ್ರ ಸ್ಥಾನಗಳಲ್ಲಿ ವಾಸವಿರಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಬಿಕೋ ಎನ್ನುತ್ತಿರುವ ದಂಡಾಧಿಕಾರಿಗಳ ವಸತಿ ಗೃಹ
2008ರಲ್ಲಿ ತಹಶೀಲ್ದಾರ್‌ ಆಗಿ ಕರ್ತವ್ಯ ನಿರ್ವಹಿಸಿದ ವಾಣಿಅವರು ಲಕ್ಷಾಂತರ ರೂ.ವೆಚ್ಚದಲ್ಲಿ ವಸತಿ ಗೃಹವನ್ನು ದುರಸ್ತಿಗೊಳಿಸಿ ಮೂಲ ಸೌಲಭ್ಯ ಕಲ್ಪಿಸುವ ಜತೆಗೆ ಹಲವಾರು ಕೆಲಸಕಾರ್ಯಗಳನ್ನು ಕೈಗೊಂಡು ಸಾರ್ವಜನಿಕ ಪ್ರಶಂಸೆಗೆಕಾರಣವಾಗಿದ್ದ ದಂಡಾಧಿಕಾರಿಗಳ ವಸತಿ ಗೃಹ ಇಂದುಕೇಳುವರಿಲ್ಲದ ಸ್ಥಿತಿಗೆ ತಲುಪಿದ್ದು, ನಾಮ್‌ಕೇವಸ್ಥೆ ಆಗಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. 2008 ರಿಂದ 2021ರ ವರೆಗೂ 23 ಮಂದಿ ತಹಶೀಲ್ದಾರ್‌ಗಳುಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿದ್ದರೂ ಕೆಲ ಮಂದಿಯಷ್ಟೇ ವಸತಿ ಗೃಹದಲ್ಲಿ ವಾಸವಿದ್ದು, ಕಾರ್ಯನಿರ್ವಹಣೆ ಮಾಡಿರುವ ನಿದರ್ಶನಗಳಿದ್ದು, ಸುಸಜ್ಜಿತಕಟ್ಟಡವಿದ್ದರೂ ಕೆಲ ಅಧಿಕಾರಿಗಳು ಇವುಗಳಿಂದ ದೂರವೇ ಉಳಿದಿದ್ದಾರೆ.ಕಳೆದ ಒಂದು ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ ಮದ್ದೂರು ತಹಶೀಲ್ದಾರ್‌ ಅವರು ವಸತಿ ಗೃಹದಿಂದ ದೂರವೇ ಉಳಿದಿರುವ ಪರಿಣಾಮವಾಗಿ ಬಿಕೋ ಎನ್ನುತ್ತಿರುವ ದೃಶ್ಯಕಂಡು ಬರುತ್ತಿದೆ.

ಬಳಕೆಯೇ ಇಲ್ಲ
ಮದ್ದೂರು ಪಟ್ಟಣ ವ್ಯಾಪ್ತಿಯಲ್ಲಿರುವಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್‌ ಎಂಜಿನಿಯರಿಂಗ್‌ ಉಪ ವಿಭಾಗ,ಕೃಷಿ, ರೇಷ್ಮೆ, ಪಶುಸಂಗೋಪನೆ, ವೃತ್ತ ನಿರೀಕ್ಷಕ ಮತ್ತು ತಾಲೂಕು ದಂಡಾಧಿಕಾರಿಗಳು ಸೇರಿದಂತೆ ತಾಲೂಕು ಪಂಚಾಯಿತಿ ಇಒ ಅವರ ವಸತಿ ಗೃಹಗಳು ಬಳಕೆಯಿಂದ ದೂರವೇ ಉಳಿದಿವೆ.

ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರುವಂತೆ ಈಗಾಗಲೇ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕೆಲ ಕಟ್ಟಡಗಳ ದುರಸ್ತಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಿದ್ದು, ದಂಡಾಧಿಕಾರಿಗಳ ವಸತಿಗೃಹ ದುರಸ್ತಿಕಾರ್ಯ ಮುಗಿದ ಬಳಿಕ ವಾಸ್ತವ್ಯಕ್ಕೆಕ್ರಮ ವಹಿಸಲಾಗುವುದು.
-ಟಿ.ಎನ್‌.ನರಸಿಂಹಮೂರ್ತಿ,
ತಹಶೀಲ್ದಾರ್‌, ಮದ್ದೂರು

ಅಧಿಕಾರಿಗಳ ಬಳಕೆಯಿಂದ ದೂರ ಉಳಿದಿರುವ ವಸತಿ ಗೃಹದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ವಾಸವಿರಲು ಮೇಲಧಿಕಾರಿಗಳು ಅಗತ್ಯ
ಕ್ರಮವಹಿಸಬೇಕಾಗಿದ್ದು, ಅದ್ವಾನಗೊಂಡಿರುವ ವಸತಿಗೃಹಗಳನ್ನು ಆಧುನೀಕರಣಗೊಳಿಸಿ ಮೂಲ ಸೌಲಭ್ಯ ಕಲ್ಪಿಸಬೇಕಿದೆ.
-ವಿ.ಸಿ.ಉಮಾಶಂಕರ್‌, ಕಸ್ತೂರಿ ಕರ್ನಾಟಕ
ಜನಪರ ವೇದಿಕೆ ಜಿಲ್ಲಾಧ್ಯಕ್ಷ

-ಎಸ್‌.ಪುಟ್ಟಸ್ವಾಮಿ, ಎಚ್‌.ಕೆ.ವಿ.ನಗರ

Advertisement

Udayavani is now on Telegram. Click here to join our channel and stay updated with the latest news.

Next