Advertisement

ಅಸ್ಪೃಶ್ಯತೆ ಇಂದಿಗೂ ಜೀವಂತ: ತಾಳ್ಯ

10:30 AM Jan 21, 2019 | Team Udayavani |

ಚಿತ್ರದುರ್ಗ: ದಲಿತ ಲೇಖಕರಿಗೆ ಪ್ರಜ್ಞೆ, ಆಳ, ಗುರುತ್ವ ಹೆಚ್ಚಿರುತ್ತದೆ. ಆದರೆ, ಮೇಲ್ವರ್ಗದ ಲೇಖಕರಿಗೆ ಇವುಗಳಿರುವುದಿಲ್ಲ. ಅಸ್ಪೃಶ್ಯರೆಂದು ಕರೆಸಿಕೊಳ್ಳುತ್ತಿರುವ ದಲಿತರು ನೋವು ಸಂಕಟ ಯಾತನೆ ಅನುಭವಿಸುತ್ತಿದ್ದಾರೆ. ದಲಿತರ ಸಂವೇದನೆ ಅತ್ಯಂತ ವಿಶಿಷ್ಟವಾದುದು ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಪ್ರೊ| ಚಂದ್ರಶೇಖರ ತಾಳ್ಯ ಹೇಳಿದರು.

Advertisement

ಇಲ್ಲಿನ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್‌ನ 15ನೇ ವರ್ಷದ ಜಾನಪದ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಡಾ| ಗೋವಿಂದ ಅವರು ರಚಿಸಿರುವ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಜಾತಿ ವಿನಾಶವಾಗುತ್ತದೆ ಎಂಬುದು ಬಹುದೊಡ್ಡ ಕನಸು. ದಲಿತರ ಸಂವೇದನೆ ದಲಿತ ಲೇಖಕರು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

ಕೋಲಾರ ಜಿಲ್ಲೆಯ ಚನ್ನಕ್ಕಲ್‌ ಗ್ರಾಮದಲ್ಲಿ ಇಂದಿಗೂ ದಲಿತರಿಗೆ ಕ್ಷೌರ ಮಾಡುವುದಿಲ್ಲ. ಹೋಟೆಲ್‌ಗ‌ಳಲ್ಲಿ ನೀರು, ಕಾಫಿ ಕೊಡುತ್ತಿಲ್ಲ. ಮಾನವೀಯತೆಯಿರುವ ಯಾವ ವ್ಯಕ್ತಿಯೂ ದಲಿತರನ್ನು ಈ ರೀತಿ ನಡೆಸಿಕೊಳ್ಳಬಾರದು. ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಸರ್ವಣೀಯರು ಬದಲಾಗುವುದಿಲ್ಲ ಎನ್ನುವ ಆಕ್ರೋಶ ಅಂಬೇಡ್ಕರ್‌ಅವರಲ್ಲಿ ಬಹಳಷ್ಟಿತ್ತು ಎಂದು ಹೇಳಿದರು.

ನಗರ ಪ್ರದೇಶಗಳಲ್ಲಿ ಜಾತೀಯತೆ ಅತಿ ಸೂಕ್ಷ್ಮವಾಗಿ ನಿಂತಿದೆ. ಹಳ್ಳಿಗಳಲ್ಲಿ ಜಾತೀಯತೆ ಬಲವಾಗಿದೆ ಎಂದುಕೊಳ್ಳುವುದು ತಪ್ಪು. ದಲಿತರು ಜನ್ಮದಿಂದ ಕಲಾವಿದರು. ಹಾಗಾಗಿ ಅವರಲ್ಲಿ ಸೃಜನಶೀಲತೆಯಿದೆ. ದಲಿತರ ಸಂವೇದನೆಯನ್ನು ವೈಭವೀಕರಿಸಬೇಕಿಲ್ಲ. ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.

ಮೀಸಲಾತಿ ಸರಿಯಾಗಿ ಬಳಕೆಯಾಗುತ್ತಿಲ್ಲ. ಮೇಲ್ವರ್ಗದ ದಲಿತರು ಹಳ್ಳಿಗಳಿಗೆ ಹೋಗಿ ಅನಕ್ಷರತೆ ಹೋಗಲಾಡಿಸಿ ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕು. ದಲಿತ ಲೇಖಕನ ಬರವಣಿಗೆ ಅಧಿಕೃತ ದಾಖಲೆಯಾಗಿರುತ್ತೆ. ಭಾಷೆ, ಸಂವೇದನೆಯಿಂದ ದಲಿತ ಸಮೂಹ ಸ್ಥಗಿತವಾಗಿದೆ. ಅದಕ್ಕಾಗಿ ದಲಿತ ಲೇಖಕನ ಚಿಂತನೆ ಚಲನಶೀಲತೆಯಾಗಬೇಕು. ಯಾವುದು ಸ್ಥಿರವಲ್ಲ ಎಂದು ಬುದ್ದ ಹೇಳಿದ್ದ. ಅದಕ್ಕಾಗಿ ಹಿಂದು ಧರ್ಮ ತೊರೆದ ಅಂಬೇಡ್ಕರ್‌ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂದರು.

Advertisement

ಪ್ರೊ| ಎಚ್.ಲಿಂಗಪ್ಪ ಅವರ ಬದುಕು ಬರಹ ಕುರಿತು ಪ್ರೊ| ಜಿ. ಪರಮೇಶ್ವರಪ್ಪ ಮಾತನಾಡಿ, ಪ್ರೊ| ಲಿಂಗಪ್ಪನವರ ಕಾವ್ಯದಲ್ಲಿ ನೋವು ನಲಿವು, ಸೃಜನಶೀಲತೆಯ ಧ್ವನಿಯಿದೆ. ಮತ್ತೂಬ್ಬರ ದುಃಖವನ್ನು ತಮ್ಮದಾಗಿಸಿಕೊಳ್ಳುವ ಧಾರಾಳತನ ಅವರಲ್ಲಿದೆ ಎಂದು ಹೇಳಿದರು.

ಪ್ರೊ| ಎ.ಕೆ. ಹಂಪಣ್ಣನವರ ಕಾವ್ಯಾವಲೋಕನ ಕುರಿತು ಮಾತನಾಡಿದ ವಿಮರ್ಶಕ ಮೈಸೂರಿನ ಡಾ| ಬಿ.ವಿ. ವಸಂತಕುಮಾರ್‌, ದುಃಖ ದುಮ್ಮಾನ ಇಡೀ ದಲಿತ ಸಮುದಾಯದ ಜೀವನ ದ್ರೌವ್ಯ ಎನ್ನುವುದನ್ನು ಪ್ರೊ| ಎ.ಕೆ. ಹಂಪಣ್ಣ ತಮ್ಮ ಕೃತಿಯಲ್ಲಿ ಹೇಳಿದ್ದಾರೆ. ಒಳಗಡೆ ಬೆಂಕಿ, ನೋವು, ಸಂಕಟ, ಆಕ್ರೋಶ ಹೇಗೆ ಕುದಿಯುತ್ತದೆ ಎಂಬುದನ್ನು ಕೃತಿಯಲ್ಲಿ ಚಿತ್ರಿಸಿರುವುದು ಹಂಪಣ್ಣನವರಿಗೆ ದಲಿತರ ಮೇಲಿರುವ ಅಭಿಮಾನ ತೋರುತ್ತದೆ ಎಂದು ತಿಳಿಸಿದರು. ಎಸ್‌.ಆರ್‌. ಗುರುನಾಥ್‌ ಅವರ ಬದುಕು ಬರಹ ಕುರಿತು ಉಪನ್ಯಾಸಕ ಡಾ| ಎನ್‌.ಎಸ್‌. ಮಹಾಂತೇಶ್‌ ಮಾತನಾಡಿ, ಕೃತಿಯಲ್ಲಿ ಎಸ್‌.ಆರ್‌. ಗುರುನಾಥ್‌ರವರ ಬಂಡಾಯ ಮನೋಭಾವ ಹೆಚ್ಚಾಗಿ ಕಾಣುತ್ತದೆ ಎಂದರು.

ಡಾ| ಯಲ್ಲಪ್ಪ ಕೆ.ಕೆ.ಪುರ ಅವರ ಬದುಕು ಬರಹ ಕುರಿತು ಮಾತನಾಡಿದ ರಂಗನಾಥ ಆರನಕಟ್ಟೆ, 2009ರಲ್ಲಿ ಡಾ| ಯಲ್ಲಪ್ಪ ಕೆ.ಕೆ.ಪುರ ಅವರ ಹೊರಗಿನವರು ಕಾದಂಬರಿ ಪ್ರಕಟವಾಯಿತು. ಸಾಂಸ್ಕೃತಿಕ ನೆನಪುಗಳನ್ನು ಹೇಗೆ ಎದೆಯಲ್ಲಿಟ್ಟುಕೊಳ್ಳಬೇಕೆಂಬುದು ಈ ಕಾದಂಬರಿಯ ಚರ್ಚೆಯಲ್ಲಿದೆ ಎಂದು ತಿಳಿಸಿದರು.

ಲೇಖಕ ಡಾ| ಮೀರಾಸಾಬಿಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಎ.ಕೆ. ಹಂಪಣ್ಣ. ಪ್ರೊ| ಎಚ್. ಲಿಂಗಪ್ಪ, ಸಿ.ಕೆ. ನಾಗಪ್ಪ, ಡಾ| ಯಲ್ಲಪ್ಪ ಕೆ.ಕೆ.ಪುರ, ಅಗಸನೂರು ತಿಮ್ಮಪ್ಪ. ದಲಿತ ಮುಖಂಡರಾದ ಎಂ. ಜಯಣ್ಣ, ಡಿ. ದುರುಗೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next