ಎಚ್.ಡಿ.ಕೋಟೆ: ಇಂದಿನ ವೈಜ್ಞಾನಿಕ ಯುಗದಲ್ಲೂ ದೇಶದಲ್ಲಿ ಜಾತಿ ವ್ಯವಸ್ಥೆ ಅಳವಾಗಿ ಬೇರೂರಿದ್ದು, ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂದು ಸಂಸದ ಆರ್. ಧ್ರುವನಾರಾಯಣ್ ಹೇಳಿದರು. ಸಮಾಜದಲ್ಲಿ ಇನ್ನು ಅಸಮಾನತೆ, ಕಂದಚಾರ ಆಚರಣೆಯಲ್ಲಿದೆ,
ಇದು ಯಾವುದೇ ದೇಶದ ಅಭಿವೃದ್ದಿ ಮಾರಕ ಇಂತಹ ಅಸ್ಪೃಶ್ಯತೆಯ ಬಗ್ಗೆ ಬಹಳ ವರ್ಷಗಳ ಹಿಂದೆಯೇ ಹೋರಾಟ ಮಾಡಿದ ಮಹಾನ್ ತಪಸ್ವಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ಎಂದರು. ಪಟ್ಟಣದಲ್ಲಿ ಮಂಗಳವಾರ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕು ಆರ್ಯ ಈಡಿಗರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತ್ಯುತ್ಸವದಲ್ಲಿ ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಜಾತಿ ಉಪಜಾತಿಗಳು ಮತ್ತು ಆನೇಕ ಧರ್ಮಗಳಿದ್ದು ದೇಶದಲ್ಲಿ ಜಾತಿ ವ್ಯವಸ್ಥೆಯಿಂದಾಗಿ ಅಸಮಾನತೆ ಅಸ್ಪೃಶ್ಯತೆ ಇನ್ನೂ ಆಚರಣೆಯಲ್ಲಿದೆ ಎಂದರು. ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ನಾನು 50 ವರ್ಷದ ಹಿಂದೆ ಚಿಕ್ಕ ಹುಡಗನಿದ್ದಗಲೇ ಅಸ್ಪೃಶ್ಯತೆಯನ್ನು ಅನುಭವಿಸಿದ್ದೆ,
ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದ್ದರೂ ಕಾನೂನು ಕಾಯ್ದೆಗಳಿಂದಾಗಿ ಅಸ್ಪೃಶ್ಯತೆ ಸಾಕಷ್ಟು ಕಡಿಮೆಯಾಗಿದೆ ಕಾಲ ಬದಲಾಗಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ಬೆಳ್ಳಿ ರಥದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ಇರಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ವೀರಗಾಸೆ, ನಂದಿಕಂಬ, ನಗಾರಿ, ನಾದಸ್ವರ, ಕಂಸಳೆ, ಸತ್ತಿಗೆ ಮೆರವಣಿಗೆಗೆ ರಂಗುತಂದವು.
ಜಿ.ಪಂ. ಅಧ್ಯಕ್ಷೆ ನಯಿಮಾ ಸುಲ್ತಾನ್, ಎಪಿಎಂಸಿ ಅಧ್ಯಕ್ಷ ಸಿದ್ದರಾಜು, ಪುರಸಭೆ ಅಧ್ಯಕ್ಷೆ ಮಂಜುಳಾ ಗೋವಿಂದಾಚಾರಿ, ಸದಸ್ಯರಾದ ಅನಿಲ್, ತೋಟದ ರಾಜಣ್ಣ, ವಿವೇಕ್, ಅನ್ಸಾರ್ ಅಹಮದ್, ಸರಗೂರು ಪ.ಪಂ.ಅಧ್ಯಕ್ಷೆ ಪದ್ಮಾವತಿ ಗೋಪಾಲ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಕೆ.ಕೃಷ್ಣ, ಕುಸುಮಅಜಯ್, ರಂಗೇಗೌಡ, ಶ್ರೀನಿವಾಸ್, ಮುತ್ತು ರಾಜ್, ಕೆ.ರಾಮಣ್ಣ ಇತರರು ಇದ್ದರು.