Advertisement

ಶಿಕಣದಿಂದ ಅಸ್ಪೃಶ್ಯತೆ ನಿವಾರಣೆ ಸಾಧ್ಯ: ಹಿರೇಮಠ

04:00 PM Apr 06, 2022 | Team Udayavani |

ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಅದಕ್ಕೆ ಶಿಕ್ಷಣವನ್ನು ಮೂಲ ಅಸ್ತ್ರವಾಗಿಸಬೇಕು. ಶಿಕ್ಷಣದಲ್ಲಿ ಸಾಧನೆ ಮಾಡಿ ಉನ್ನತ ಹುದ್ದೆಯನ್ನು ಪಡೆದು ಸಮಾಜ ಸೇವೆಯಲ್ಲಿ ಮುಂದಾಗಬೇಕು ಅಂದಾಗ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

Advertisement

ಇಲ್ಲಿಯ ಸಂಗಮೇಶ್ವರ ನಗರದ ಡಾ. ಬಾಬು ಜಗಜೀವನರಾಮ್‌ ಉದ್ಯಾನವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಹಸಿರು ಕ್ರಾಂತಿ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್‌ ಅವರ 115ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ. ಬಾಬು ಜಗಜೀವನರಾಮ್‌ ಒಬ್ಬ ದಕ್ಷ ಆಡಳಿತಗಾರರು, ಅವರು 30 ವರ್ಷಗಳ ಕಾಲ ಸಂಪುಟ ದರ್ಜೆ ಸಚಿವರಾಗಿ, ಸಂಸದರಾಗಿ ಕಾರ್ಯನಿರ್ವಹಿಸಿದ್ದು ಅವರ ದಕ್ಷತೆಯ ಪ್ರತೀಕವಾಗಿದೆ. ಅವರು ಅಸ್ಪೃಶ್ಯತೆ ನಿವಾರಣೆಯ ಹರಿಕಾರರು, ಅಸ್ಪೃಶ್ಯತೆ ನಿವಾರಣೆ ಆಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಾತ್ರವಲ್ಲದೇ ಎಲ್ಲ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಲ್ಲಿ ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಎಲ್ಲ ಅಧಿಕಾರಿಗಳಿಗೆ ತಿಳಿಸಿದರು.

ಪಿಯುಸಿ, ಎಲ್‌.ಎಲ್‌.ಬಿ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಅವರನ್ನು ಸನ್ಮಾನ ಮಾಡಿರುವುದರಿಂದ ಡಾ. ಬಾಬು ಜಗಜೀವನರಾಮ್‌ ಅವರ ಜಯಂತಿ ಅರ್ಥಪೂರ್ಣವಾಗಿದೆ ಎಂದು ಜಿಲ್ಲಾ ಧಿಕಾರಿ ಹಿರೇಮಠ ಹೇಳಿದರು.

Advertisement

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಪ್ರಕಾಶ ಕಟ್ಟಿಮನಿ ಅವರು, ಡಾ| ಬಾಬು ಜಗಜೀವನರಾಮ್‌ ಅವರ ಸಾಧನೆಯ ಕುರಿತು ಮಾತನಾಡಿ, ಡಾ. ಬಿ.ಆರ್‌. ಅಂಬೇಡ್ಕರ ಮತ್ತು ಡಾ. ಬಾಬು ಜಗಜೀವನರಾಮ್‌ ಅವರು ದಲಿತ ನಾಯಕರಲ್ಲ, ಅವರು ಸಮಾಜದ ನಾಯಕರು. ಇವರು ಕೇವಲ ದಲಿತ ಸಮುದಾಯಕ್ಕಾಗಿ ಮಾತ್ರ ಹೋರಾಡದೇ ಎಲ್ಲ ಸಮಾಜದವರ ನಾಯಕರಾಗಿ ಹೋರಾಟ ಮಾಡಿದ್ದಾರೆ ಎಂದರು.

ಸಂವಿಧಾನ ಎಂದರೆ ದಲಿತರ ಮೀಸಲಾತಿ ಎನ್ನುವುದಲ್ಲ, ಮೀಸಲಾತಿ ಭಾರತದ ಪ್ರತಿಯೊಂದು ಸಮುದಾಯಕ್ಕೂ ಇದೆ. ಮೀಸಲಾತಿ ಎನ್ನುವುದು ಸಂವಿಧಾನದ ಒಂದು ಭಾಗ ಮಾತ್ರ ಎಂದರು.

ಭಾವಚಿತ್ರದ ಮೆರವಣಿಗೆ: ಇದಕ್ಕೂ ಮುಂಚೆ ಜಿಲ್ಲಾ  ಧಿಕಾರಿಗಳ ಕಚೇರಿ ಆವರಣದಿಂದ ಡಾ| ಬಾಬು ಜಗಜೀವನರಾಮ್‌ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಸಂಗಮೇಶ್ವರ ನಗರದ ಡಾ. ಬಾಬು ಜಗಜೀವನರಾಮ್‌ ಉದ್ಯಾನವನಕ್ಕೆ ತೆರಳಿ , ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ| ಉಮಾ ಸಾಲಿಗೌಡರ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧಿಧೀಕ್ಷಕ ಎಂ.ಬಿ. ಹೊಸಮನಿ ನಿರೂಪಿಸಿದರು. ನಗರ ಪೊಲೀಸ್‌ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಮಹಾನಗರ ಪಾಲಿಕೆಯ ಉಪ ಆಯುಕ್ತೆ(ಆಡಳಿತ) ಭಾಗ್ಯಶ್ರೀ ಹುಗ್ಗಿ, ಜಿಲ್ಲಾ ಪಂಚಾಯತಿ (ಆಡಳಿತ) ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.

ಮಾದಿಗ ಮಿಸಲಾತಿ ಹೋರಾಟ ಸಮಿತಿ ಜಿಲ್ಲಾ ಅದ್ಯಕ್ಷ ಶಂಕರ ದೊಡಮನಿ, ಪ.ಜಾತಿ ಮತ್ತು ಪ.ಪಂಗಡದ ಜಿಲ್ಲಾ ಮುಖಂಡರಾದ ಮಲ್ಲೇಶ ಚೌಗಲಾ, ಸಮುದಾಯದ ಮುಖಂಡರಾದ ಯಲ್ಲಪ್ಪ ಹುದಲಿ, ಬಾಬು ಪೂಜಾರಿ, ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next