ಪುಣೆ: ಟೀಂ ಇಂಡಿಯಾ ನಾಯಕತ್ವದಿಂದ ಕೆಳಕ್ಕೆ ಇಳಿದ ಮೇಲೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಮೂರು ಮಾದರಿಗೂ ಒಬ್ಬನೇ ನಾಯಕನಿರಬೇಕು. ವಿದೇಶದಲ್ಲಿ ಇರುವಂತೆ ವಿಭಜಿತ ನಾಯಕತ್ವ ಭಾರತದಲ್ಲಿ ಕೆಲಸ ಮಾಡದು. ಸದ್ಯ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಸೀಮಿತ ಓವರ್‌ಗಳ ನಾಯಕತ್ವದಿಂದ ಕೆಳಕ್ಕೆ ಇಳಿಯಲು ನಿರ್ಧರಿಸಿದೆ ಎಂದು ಧೋನಿ ತಿಳಿಸಿದರು. ಮಾಧ್ಯಮದೊಂದಿಗೆ ತಮ್ಮ ಮೊದಲ ಮಾಧ್ಯಮ ಸಂವಾದದಲ್ಲಿ ಹಲವಾರು ವಿಷಯಗಳ ಬಗ್ಗೆ ಧೋನಿ ಮಾತನಾಡಿದರು.
ಕೊಹ್ಲಿ ಬಗ್ಗೆ ಧೋನಿ ಪ್ರಶಂಸೆ: ವಿರಾಟ್ ಕೊಹ್ಲಿ ಸದ್ಯ ಅದ್ಭುತ ಆಟವನ್ನು ಆಡುತ್ತಿದ್ದಾರೆ. ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಮುಂದೊಂದು ದಿನ ಕೊಹ್ಲಿ ಭಾರತ ಅತೀ ಹೆಚ್ಚು ಪಂದ್ಯಗಳನ್ನು ಗೆಲ್ಲಲಿದೆ. ಒತ್ತಡದಲ್ಲಿ ಆಡುವ ಕಲೆಯನ್ನು ಕೊಹ್ಲಿ ಮತ್ತು ತಂಡ ಅಭ್ಯಾಸ ಮಾಡಿಕೊಂಡಿದೆ. ಯಾವ ರೀತಿಯಲ್ಲಿ ಆಡಬಹುದು, ಹೇಗೆ ಪಂದ್ಯವನ್ನು ಸಂಘಟಿತವಾಗಿ ಗೆಲ್ಲಿಸಬಹುದು ಎನ್ನುವುದು ಕೊಹ್ಲಿಗೆ ಚೆನ್ನಾಗಿಯೇ ಗೊತ್ತಿದೆ. ಮುಂದೊಂದು ದಿನ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ಅತ್ಯಂತ ಹೆಚ್ಚು ಸಾಧನೆ ಮಾಡಲಿದೆ. ಕೊಹ್ಲಿ ಟೀಂ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಲಿದ್ದಾರೆ ಎಂದು ಧೋನಿ ತಿಳಿಸಿದರು.
ಆಟದ ಮೇಲೆ ಪರಿಣಾಮ ಬೀರದು: ನಾಯಕತ್ವದಿಂದ ಕೆಳಕ್ಕೆ ಇಳಿದುದರಿಂದ ಆಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಧೋನಿ ಸ್ಪಷ್ಟಪಡಿಸಿದ್ದಾರೆ. ವಿಕೆಟ್ ಕೀಪರ್ ಯಾವಾಗಾಲೂ ಉಪನಾಯಕನ ಕೆಲಸವನ್ನು ನಿರ್ವಹಿಸುತ್ತಾನೆ. ನಾಯಕನಿಗೆ ಯಾವ ರೀತಿ ಅನುಕೂಲವಾಗುತ್ತದೋ ಅದೇ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೇನೆ. ಈ ಬಗ್ಗೆ ಕೊಹ್ಲಿ ಜತೆಗೂ ಮಾತುಕತೆ ನಡೆಸಿದ್ದೇನೆ. ಒಟ್ಟಾಗಿ ತಂಡದಲ್ಲಿ ಕೆಲಸ ಮಾಡಲಿದ್ದೇವೆ ಎಂದು ಧೋನಿ ತಿಳಿಸಿದ್ದಾರೆ.