Advertisement

Coffee growers: ಅಕಾಲಿಕ ಮಳೆ ಕಾಫಿ ಬೆಳೆಗಾರರಲ್ಲಿ ಆತಂಕ

02:07 PM Nov 27, 2023 | Team Udayavani |

ಸಕಲೇಶಪುರ: ತಾಲೂಕಿನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಕಾಫಿ ಬೆಳೆಗಾರರ ವಲಯದಲ್ಲಿ ಆತಂಕ ಮೂಡಲು ಕಾರಣವಾಗಿದೆ. ಹವಮಾನ ವೈಪರೀತ್ಯ, ಕೂಲಿ ಕಾರ್ಮಿಕರ ಕೊರತೆ, ದುಬಾರಿ ಉತ್ಪಾದನಾ ವೆಚ್ಚದಿಂದ ಕಾಫಿ ಬೆಳೆಗಾರರು ತತ್ತರಿಸಿದ್ದು ಇದೀಗ ಸುರಿಯುತ್ತಿರುವ ಅಕಾಲಿಕ ಮಳೆ ಕಾಫಿ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ.

Advertisement

ಉದುರುತ್ತಿರುವ ಅರೇಬಿಕಾ ಕಾಫಿ: ಸಾಮಾನ್ಯವಾಗಿ ನವೆಂಬರ್‌ ಮಾಹೆಯಲ್ಲಿ ಅರೇಬಿಕಾ ಕಾಫಿ ಕುಯ್ಲು ಮಾಡುವುದು ವಾಡಿಕೆಯಾಗಿದ್ದು ಕಳೆದ ಅಕ್ಟೋಬರ್‌ ನಲ್ಲಿ ಸುರಿದ ಮಳೆ ಬೆಳೆಗಾರರಿಗೆ ತುಸು ಸಂತೋಷ ತಂದಿತ್ತು. ಆದರೆ, ಇದೀಗ ಬರುತ್ತಿರುವ ಮಳೆಯಿಂದಾಗಿ ಅರೇಬಿಕಾ ಕಾಫಿ ನೆಲಕಚ್ಚುವ ಸಾಧ್ಯತೆಗಳು ಹೆಚ್ಚಿವೆ.

ಅವಧಿ ಪೂರ್ವ ಹಣ್ಣಾಗುತ್ತಿರುವ ರೋಬಸ್ಟಾ ಕಾಫಿ: ಡಿಸೆಂಬರ್‌ ಕೊನೆಯ ವಾರ, ಜನವರಿ, ಫೆಬ್ರವರಿ ಮಾಹೆಯಲ್ಲಿ ರೋಬಸ್ಟಾ ಕಾಫಿ ಕುಯ್ಲು ಮಾಡುವುದು ವಾಡಿಕೆಯಾಗಿತ್ತು. ಆದರೆ, ಇದೀಗ ಹವಾಮಾನ ವೈಪರೀತ್ಯದಿಂದ ರೋಬಸ್ಟಾ ಕಾಫಿ ಅವಧಿ ಪೂರ್ವ ಹಣ್ಣಾಗುತ್ತಿರುವುದಲ್ಲದೆ ಕಾಫಿ ಯೂ ಸಹ ಉದುರುವ ಸಾಧ್ಯತೆಗಳು ಹೆಚ್ಚಿದೆ. ಮಳೆಯಿಂದ ಹೆಚ್ಚುವ ಕಳೆ: ಅಕಾಲಿಕ ಮಳೆಯಿಂದ ಕಾಫಿ ಗಿಡಗಳ ಮಧ್ಯೆ ಕಳೆ ಬರುವುದರಿಂದ ಪದೇ ಪದೆ ಕಳೆ ತೆಗೆಯಲು ಬೆಳೆಗಾರರು ಹಣ ವ್ಯಯಿಸಬೇಕಾಗಿದೆ.

ಮಳೆ ಬಂದ ಹಾಗೆ ಕಾಫಿ ತೋಟಗಳಲ್ಲಿ ಕಳೆ ಹೆಚ್ಚಾಗುವುದರಿಂದ ಪದೇ ಪದೆ ಕಳೆ ತೆಗೆಯಲು ಹರ ಸಾಹಸ ಮಾಡಬೇಕಾಗಿದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಸದ್ಯ ಬೀಳುತ್ತಿರುವ ಹಿಂಗಾರು ಮಳೆ ಅರೇಬಿಕಾ ಕಾಫಿಗೆ ಆತಂಕ ತಂದಿದ್ದು ಹವಮಾನ ವೈಪರೀತ್ಯದಿಂದ ಮಳೆ ಡಿಸೆಂಬರ್‌ ಅಂತ್ಯದವರೆಗೆ ಮುಂದುವರಿದರೆ ಬೆಳೆಗಾರರಿಗೆ ಬಹಳ ತೊಂದರೆಯಾಗುವುದರಲ್ಲಿ ಅನುಮಾನವಿಲ್ಲ.

ಹೊಸಗಿಡಗಳಿಗೆ ಅನುಕೂಲ: ಅಕಾಲಿಕ ಮಳೆ ಹಳೇ ಗಿಡಗಳಿಗೆ ಆತಂಕ ತಂದರೆ ಹೊಸದಾಗಿ ಗಿಡ ನೆಟ್ಟು ತೋಟ ಮಾಡಿದವರಿಗೆ ಅನುಕೂಲವಾಗುತ್ತಿದೆ. ಸುರಿಯುತ್ತಿರುವ ಮಳೆಯಿಂದಾಗಿ ಹೊಸ ಗಿಡಗಳನ್ನು ಹಾಕಿದವರಿಗೆ ಕೃತಕವಾಗಿ ನೀರು ಹರಿಸುವುದು ತಪ್ಪುತ್ತದೆ. ಸಣ್ಣ ಬೆಳೆಗಾರರಿಗೆ ಕಾಫಿ ಒಣಗಿಸಿ ಮಾರಾಟ ಮಾಡುವುದು ಅಸಾಧ್ಯವಾಗಿದೆ. ಒಂದೆಡೆ ಕೂಲಿ ಕಾರ್ಮಿಕರ ಕೊರತೆ ಮತ್ತೂಂದೆಡೆ ಮೋಡ ಕವಿದ ವಾತಾವರಣದಿಂದ ಕಾಪಿಯನ್ನು ಹೇಗೆ ಒಣಗಿಸುವುದೆಂಬ ಆತಂಕಕ್ಕೆ ಸಿಲುಕಿ ಕೆಲವರು ಹಸಿ ಅರೇಬಿಕಾ ಹಣ್ಣನ್ನು ಕೆ.ಜಿ.ಗೆ 35- 40ರೂ. ಗಳ ವರೆಗೆ ಮಾರಾಟ ಮಾಡುತ್ತಿದ್ದಾರೆ. ಇದು ಬೆಳೆಗಾರರಿಗೆ ನಷ್ಟ ತಂದರೂ ಇರುವ ಬೆಳೆಯನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಹಲವಾರು ಮಂದಿ ಹಸಿ ಕಾಫಿ ನೀಡಲು ಮುಂದಾಗಿದ್ದಾರೆ.

Advertisement

ಒಟ್ಟಾರೆಯಾಗಿ ಹವಾಮಾನ ವೈಪರೀತ್ಯದಿಂದ ಕಾಫಿ ಉತ್ಪಾದನೆ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತಿದ್ದು, ಕಾಫಿ ಸಂಶೋಧನಾ ಮಂಡಳಿಯವರು ಸಣ್ಣ ಬೆಳೆಗಾರರಿಗೆ ಅನುಕೂಲವಾಗುವಂತೆ ಕಾಫಿ ಒಣಗಿಸುವ ತಂತ್ರಜ್ಞಾನವನ್ನು ತರಬೇಕಾಗಿದೆ.

ಕಾಡಾನೆಗಳ ಕಾಟ: ತಾಲೂಕಿನ ಕೆಲವು ಭಾಗ ಗಳಲ್ಲ ಕಾಡಾನೆಗಳ ಕಾಟ ಹೆಚ್ಚಾಗಿದ್ದು, ಇದರಿಂದ ಹಲವಡೆ ಕೂಲಿ ಕಾರ್ಮಿಕರು ಕಾಡಾನೆಗಳ ಭಯದಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಮುಂದಾಗದಿರುವುದು ಅರೇಬಿಕಾ ಕಾಫಿ ಬೆಳೆಗಾರರಿಗೆ ಆತಂಕ ತಂದಿದೆ. ಕೂಲಿ ಕಾರ್ಮಿಕರ ಕೊರತೆ: ಮಲೆನಾಡಿನಲ್ಲಿ ಕೂಲಿ ಕಾರ್ಮಿಕರ ಕೊರತೆ ಬಾದಿಸುತ್ತಿದ್ದು ಕಾರ್ಮಿಕರ ಕೂಲಿ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಇದರಿಂದ ಉತ್ಪಾದನಾ ವೆಚ್ಚ ಸಹ ಏರಲು ಕಾರಣವಾಗಿದೆ. ಕೂಲಿ ಕಾರ್ಮಿಕರ ಕೂಲಿ ದರ ಏರುತ್ತಿದ್ದರು ಸಹ ಕೂಲಿ ಕಾರ್ಮಿಕರ ಕೊರತೆ ಬಾಧಿಸುತ್ತಿರುವದು ಆತಂಕಕಾರಿಯಾಗಿದೆ.

ಡ್ರೈಯರ್‌ ಹೆಚ್ಚಿದ ಬೇಡಿಕೆ: ಅಕಾಲಿಕ ಮಳೆಯಿಂದಾಗಿ ಶ್ರೀಮಂತ ಬೆಳೆಗಾರರು ಡ್ರೈಯರ್‌ಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಆದರೆ, ಸಣ್ಣ ಹಾಗೂ ಮಧ್ಯಮ ಬೆಳೆಗಾರರು ಡ್ರೈಯರ್‌ಗಳನ್ನು ಅಳವಡಿಸಿಕೊಳ್ಳಲು ಕಷ್ಟಕರವಾಗಿದ್ದು ಸೂರ್ಯನ ಬಿಸಿಲನ್ನೆ ನಂಬಿಕೊಂಡೆ ಕಾಫಿ ಒಣಗಿಸಬೇಕಾಗಿದೆ. ಶ್ರೀಮಂತ ಬೆಳೆಗಾರರು ಡ್ರೈಯರ್‌ಗಳನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿರುವುದರಿಂದ ಡ್ರೈಯರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಮೊದಲಿಗೆ ಮಳೆಯಿಲ್ಲದೆ ತತ್ತರಿಸಿದ್ದ ಕಾಫಿ ಬೆಳೆಗಾರರು ಇದೀದ ಮಳೆಯಿಂದಾಗಿ ತತ್ತರಿಸಬೇಕಾಗಿದೆ. ಹವಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರರಿಗೆ ತೊಂದರೆಯುಂಟಾಗುತ್ತಿದ್ದು ಸರ್ಕಾರ ಸೂಕ್ತ ಪರಿಹಾರವನ್ನು ಬೆಳೆಗಾರರಿಗೆ ನೀಡಬೇಕು. – ಡಾ.ಮೋಹನ್‌ ಕುಮಾರ್‌, ಅಧ್ಯಕ್ಷರು, ಕೆ.ಜಿ.ಎಫ್:

ಹವಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರು ತತ್ತರಿಸಿ ಹೋಗಿದ್ದಾರೆ. ಸಣ್ಣ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಡ್ರೈಯರ್‌ಗಳನ್ನು ಕಡಿಮೆ ದರಕ್ಕೆ ಸಿಗುವಂತೆ ಕಾಫಿ ಮಂಡಳಿ ಮುಂದಾಗಬೇಕು. ● ಭೂಷಣ್‌, ಬ್ಯಾಕರವಳ್ಳಿ ಕಾಫಿ ಬೆಳೆಗಾರರು

-ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next