ಮಹಾನಗರ: ಸ್ಮಾರ್ಟ್‌ಸಿಟಿ, ಪಾಲಿಕೆ ಸಹಿತ ಮಂಗಳೂರು ನಗರದಲ್ಲಿ ವಿವಿಧ ಅಭಿವೃದ್ಧಿ ಕೆಲಸ ನಡೆದರೂ ಪಡೀಲ್ ಬಳಿಯ ಬಜಾಲ್ ಅಂಡರ್‌ಪಾಸ್‌ನಲ್ಲಿ ಕೃತಕ ನೆರೆ ಸೃಷ್ಟಿಯಾಗುವ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ದೊರಕಿಲ್ಲ.
ನಗರದಲ್ಲಿ ಸಾಧಾರಣ ಮಳೆಯಾದರೂ ಪಡೀಲ್ ಜಂಕ್ಷನ್ ಬಳಿಯಿಂದ ಬಜಾಲ್ ಸಂಪರ್ಕಿತ ರಸ್ತೆಯಲ್ಲಿರುವ ಅಂಡರ್ ಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಈ ರೈಲ್ವೇ ಕೆಳಸೇತುವೆಯಲ್ಲಿ ಮಳೆ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣ.ಜೋರಾಗಿ ಮಳೆ ಸುರಿದರೆ
ವಾಹನಗಳು ಈ ಅಂಡರ್ ಪಾಸ್ ಮುಖೇನ ಸಂಚರಿಸಲು ಬಹಳ ಕಷ್ಟವಾಗುತ್ತದೆ.
ಬಜಾಲ್, ಜಲ್ಲಿಗುಡ್ಡೆ,ವೀರನಗರ, ಕರ್ಮಾರ್ ಸಹಿತ ಸುತ್ತಮುತ್ತಲಿನ ಮಂದಿ ಇದೇ ಅಂಡರ್‌ಪಾಸ್ ಮುಖೇನ ನಗರಪ್ರವೇಶಿಸುತ್ತಿದ್ದು, ಮಳೆ ಬಂದರೆ ಸುತ್ತು ಬಳಸಿ ನಗರಕ್ಕೆ ಆಗಮಿಸಬೇಕಾದ ಅನಿವಾರ್ಯ ಎದುರಾಗಿದೆ. ಈ ಭಾಗದಲ್ಲಿ ರೈಲ್ವೇ ಅಂಡರ್‌ಪಾಸ್ ನಿರ್ಮಾಣ ಮಾಡುವುದಕ್ಕೂ ಮೊದಲು ರೈಲು ಬರುವುದಕ್ಕೂ ಮುನ್ನ ಗೇಟ್ ಮುಚ್ಚಲಾಗುತ್ತಿತ್ತು. ಇದರಿಂದ ಪಾದಚಾರಿಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದ ಬಳಿಕ ಕೆಲವು ವರ್ಷಗಳ ಹಿಂದೆ ಇಲ್ಲಿ ಅಂಡರ್ ಪಾಸ್ ನಿರ್ಮಾಣವಾಯಿತು.
ಅಸಮರ್ಪಕ ಕಾಮಗಾರಿ
ಅಂಡರ್‌ಪಾಸ್‌ನಿರ್ಮಾಣದ ವೇಳೆ ಸಮರ್ಪಕ ಯೋಜನ ಆಧಾರಿತ ಕಾಮಗಾರಿ ಮಾಡದ ಪರಿಣಾಮ ಸದ್ಯ ಸಮಸ್ಯೆಗೆ ಕಾರಣವಾಗಿದೆ. ಈಗ ಅಂಡರ್ ಪಾಸ್‌ಬದಿಯಲ್ಲಿ ತೋಡು ಇದ್ದು, ಇದು ಕೂಡ ಅಸಮರ್ಪಕವಾಗಿದ್ದು ಪೂರ್ಣಗೊಳ್ಳಬೇಕಿದೆ. ತೋಡಿಗೆ ಅಡ್ಡಲಾಗಿ ಡ್ರೈನೇಜ್ ಪೈಪ್‌ಲೈನ್ ಹಾದುಹೋಗುತ್ತಿದ್ದು, ಇದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಪೈಪ್ ಲೈನ್ ಸ್ಥಳಾಂತರ ಕೆಲಸ ಆಗಬೇಕು. ಈ ಎಲ್ಲ ಕಾರಣದಿಂದಾಗಿ ಅಂಡರ್‌ಪಾಸ್‌ನಲ್ಲಿ ಶೇಖರಣೆಗೊಂಡ ನೀರು ಹರಿಯಲು ಸರಿಯಾಗಿ ಜಾಗವಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ವಾಹನವೊಂದು ನೀರಿನಲ್ಲಿ ಸಿಲುಕಿಕೊಂಡಿತ್ತು. ಸದ್ಯ ಮಳೆ ಬಂದರೆ ಪಂಪ್ ಮುಖೇನ ನೀರು ಹೊರ ತೆಗೆಯಲಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಬೇಕು ಎನ್ನುತ್ತಾರೆ ಸಾರ್ವಜನಿಕರು.