ಬೆಂಗಳೂರು: ಯಾರಿಗೂ ಅಸಮಾಧಾನವಾಗಬಾರದು ಎಂದು ಗಜಗಾತ್ರದ ಕೆಪಿಸಿಸಿ ಪದಾಧಿಕಾರಿಗಳ ಜಂಬೋ ಪಟ್ಟಿ ಬಿಡುಗಡೆ ಮಾಡಿದ್ದರೂ, ಸ್ಥಾನ ಸಿಗದೆ ರವಿಶಂಕರ ಶೆಟ್ಟಿ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಪದಾಧಿಕಾರಿಯಾಗಿ ಆಯ್ಕೆಯಾಗದ್ದಕ್ಕೆ ಅಸಮಾಧಾನಗೊಂಡು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವ ರವಿಶಂಕರ ಶೆಟ್ಟಿ, ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ ಅವರೊಂದಿಗೆ ತಾವು ಕಾಂಗ್ರೆಸ್ ಸೇರಿದು,ª 11 ವರ್ಷದಿಂದ ಕಾಂಗ್ರೆಸ್ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
2008ರಲ್ಲಿ ಹೆಬ್ಟಾಳ ಕ್ಷೇತ್ರದಿಂದ ಸ್ಪರ್ಧಿಸುವಂತೆ ಎಂ.ಪಿ.ಪ್ರಕಾಶ್ ಟಿಕೆಟ್ ಕೊಡಿಸಿದ್ದರು. ಆದರೆ, ಆ ಟಿಕೆಟ್ ವಾಪಸ್ ಪಡೆದು ಎಚ್.ಎಂ.ರೇವಣ್ಣ ಅವರಿಗೆ ನೀಡಲಾಯಿತು. ಆ ವೇಳೆ ಅಂದು ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಹೊತ್ತಿದ್ದ ದಿಗ್ವಿಜಯ್ ಸಿಂಗ್ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಭರವಸೆ ನೀಡಿದ್ದರು.ಅದೂ ಆಗಲಿಲ್ಲ. 2013ರಲ್ಲಿಯೂ ಹೆಬ್ಟಾಳ ಕ್ಷೇತ್ರದಿಂದ ಟಿಕೆಟ್ ಕೇಳಿದಾಗಲೂ ತಮ್ಮನ್ನು ಪರಿಗಣಿಸಲಿಲ್ಲ. ಈಗ ಪ್ರಕಟವಾದ ಪದಾಧಿಕಾರಿಗಳ ಪಟ್ಟಿಯಲ್ಲೂ ಅವಕಾಶ ನೀಡದೇ ನಿರ್ಲಕ್ಷಿಸಿರುವುದರಿಂದ ಬೇಸತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ರವಿಶಂಕರ ಶೆಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.
ಜೆಡಿಎಸ್‌ಗೆ ಸೇರ್ಪಡೆ ಸಾಧ್ಯತೆ: ರವಿಶಂಕರ ಶೆಟ್ಟಿ ಮೂಲತಃ ಜನತಾ ಪರಿವಾರದಲ್ಲಿ ಎಂ.ಪಿ.ಪ್ರಕಾಶ್‌ರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. 11 ವರ್ಷಗಳ ಹಿಂದೆ ಎಂ.ಪಿ.ಪ್ರಕಾಶ್ ಜೊತೆ ಕಾಂಗ್ರೆಸ್ ಸೇರಿದ್ದ ರವಿಶಂಕರ ಶೆಟ್ಟಿ ಅವರಿಗೆ ಎಂ.ಪಿ.ಪ್ರಕಾಶ್ ನಿಧನದ ನಂತರ ಕಾಂಗ್ರೆಸ್‌ನಲ್ಲಿ ಗಾಢ್ ಫಾದರ್ ಇಲ್ಲದಂತಾಗಿ ಮೂಲೆಗುಂಪಾದರು. ಈಗ ಕಾಂಗ್ರೆಸ್ ತೊರೆದಿರುವ ರವಿಶಂಕರ ಶೆಟ್ಟಿ ಮತ್ತೆ ಮಾತೃ ಪಕ್ಷದ ಕಡೆಗೆ ಮುಖ ಮಾಡುವ ಸಾಧ್ಯತೆ ಇದೆ. 2013ರಲ್ಲಿ ಹೆಬ್ಟಾಳ ಕ್ಷೇತ್ರದ ಟಿಕೆಟ್ ಕೈತಪ್ಪಿದಾಗ ಸ್ವತಃ ಎಚ್.ಡಿ.ದೇವೇಗೌಡರೇ ರವಿಶಂಕರ್‌ಗೆ ಜೆಡಿಎಸ್‌ಗೆ ಆಹ್ವಾನ ನೀಡಿದ್ದರು. ಆಗ ಕಾಂಗ್ರೆಸ್‌ನಲ್ಲಿ ಏನಾದರೂ ಅಧಿಕಾರ ಸಿಗುವ ಭರವಸೆಯಿಂದ ಪಕ್ಷದಲ್ಲಿ ಉಳಿದಿದ್ದ ರವಿಶಂಕರ ಶೆಟ್ಟಿ ಈಗ ರಾಜಕೀಯ ಭವಿಷ್ಯಕ್ಕಾಗಿ ಮತ್ತೆ ಜೆಡಿಎಸ್ ಕಡೆಗೆ ವಾಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.