ಚಿಂಚೋಳಿ: ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಕುರಿತು ರಾಜ್ಯ ಸರ್ಕಾರ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ಆಗ್ರಹಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಸುಧಾರಣೆ ಸುಧಾರಣೆಗಾಗಿ ಐನೋಳಿಯಿಂದ ಚೆಂಡ್ರಿಕೆರೆ ನಾಲೆ ವರೆಗೆ ರಸ್ತೆ ನಿರ್ಮಿಸಲು 2.50 ಕೋಟಿ ರೂ. ನೀಡಲಾಗಿದೆ. ಇದೇ ರಸ್ತೆಗೆ ಚಂದ್ರಂಪಳ್ಳಿ ಪ್ರವಾಸಿತಾಣದಿಂದ ಐನೋಳಿ ಗ್ರಾಮದ ವರೆಗೆ ರಸ್ತೆ ಸುಧಾರಣೆಗಾಗಿ 2.50ಕೋಟಿ ರೂ.ಗಳನ್ನು ಕೆಕೆಆರ್‌ಡಿಬಿ ವತಿಯಿಂದ ಮಂಜೂರಿ ಮಾಡಲಾಗಿದೆ. ಆದರೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದೇ ಕಚೇರಿಯಲ್ಲಿ ಕುಳಿತು ಅಂದಾಜುಪಟ್ಟಿ ಸಿದ್ಧಪಡಿಸಿರುವುದು ಅವೈಜ್ಞಾನಿಕವಾಗಿದೆ ಎಂದರು.
ಕುಸರಂಪಳ್ಳಿ ಗ್ರಾಮದಿಂದ ಕೊಳ್ಳುರ ಗ್ರಾಮದ ವರೆಗೆ 5ಕೋಟಿ ರೂ.ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆದರೆ ಕುಸರಂಪಳ್ಳಿ ಮಾರ್ಗದ ಅರಣ್ಯಪ್ರದೇಶದಲ್ಲಿ 2 ಕಿ.ಮೀ ರಸ್ತೆ ಸುಧಾರಣೆ ಡಾಂಬರೀಕರಣ ಯಾಕೆ ಮಾಡಿಲ್ಲ ಎಂದರು.
ತಾಲೂಕಿನ ಗಾರಂಪಳ್ಳಿ ಗ್ರಾಮದಿಂದ ಸಾಲೇಬೀರನಳ್ಳಿ ರಸ್ತೆ ಅಭಿವೃದ್ಧಿಗೆ 2020-21ನೇ ಸಾಲಿನಲ್ಲಿ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ 1.48 ಕೋಟಿ ರೂ.ಗಳಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದೆ. ಆದರೆ ಇದೇ ಸಾಲೇಬೀರನಳ್ಳಿ-ಎಂಪಳ್ಳಿ-ಕೊಳ್ಳುರ ಗ್ರಾಮದ ವರೆಗೆ 6 ಕಿ.ಮೀ ರಸ್ತೆಗೆ 4.50 ಕೋಟಿ ರೂ.ಅನುದಾನ ಕೆಕೆಆರ್‌ಡಿಬಿ ಯೋಜನೆಗೆ ನೀಡಲಾಗಿದೆ. ತಾಲೂಕಿನಲ್ಲಿ ರಸ್ತೆ ಅಭಿವೃದ್ಧಿ ನೆಪದಲ್ಲಿ ಹಣ ಲೂಟಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಆದ್ದರಿಂದ ಈ ಕುರಿತು ತನಿಖೆ ನಡೆಸಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಐನೋಳಿ ಗ್ರಾಪಂ ಅಧ್ಯಕ್ಷ ಅಶೋಕ ಭಜಂತ್ರಿ, ಶಿವಕುಮಾರ ಮೂಲಗೆ, ಶರಣು ಪಪ್ಪಾ,ಅಲ್ಲಾವುದ್ದೀನ್ ಅನಸಾಗಿ, ಲೋಕೇಶ ಪತ್ತೆಪೂರ ಇದ್ದರು.