Advertisement

ಹಿಮಾಲಯದ ದುರಂತಗಳಿಗೆ ಅವೈಜ್ಞಾನಿಕ ಕಾಮಗಾರಿ ಕಾರಣ?

12:32 AM Feb 10, 2021 | Team Udayavani |

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ರವಿವಾರ ಸಂಭವಿಸಿದ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇಂತಹ ಭೀಕರ ಪ್ರಾಕೃತಿಕ ದುರಂತಗಳು ಸಂಭವಿಸಿದ ಬಳಿಕ ಸುತ್ತಮುತ್ತಲಿನ ಪರಿಸರದಲ್ಲಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾದ ದೊಡ್ಡ ಅಣೆಕಟ್ಟುಗಳು ಮತ್ತು ವಿದ್ಯುತ್‌ ಸ್ಥಾವರಗಳತ್ತ ಎಲ್ಲರೂ ಬೆಟ್ಟು ಮಾಡುವುದು ಸಹಜ. ಆ ಸಂದರ್ಭ ಒಂದಿಷ್ಟು ಪರ- ವಿರೋಧ ಚರ್ಚೆಗಳು ನಡೆದು ಬಳಿಕ ಎಲ್ಲವೂ ಯಥಾಸ್ಥಿತಿಗೆ ಮರಳುವುದು ನಿರಂತರವಾಗಿ ನಡೆದುಬಂದ ಪ್ರಕ್ರಿಯೆ. ಕೆಲವೊಂದು ಅಧ್ಯಯನ ಸಂಸ್ಥೆಗಳು, ವಿಜ್ಞಾನಿಗಳು ಪ್ರಕೃತಿ ಅಸಹಜ ಕಾಮಗಾರಿಗಳ ಬಗೆಗೆ ಆಕ್ಷೇಪ ಎತ್ತಿದರೂ ಅದನ್ನು ಯಾರೂ ಕಿವಿಗೆ ಹಾಕಿಕೊಳ್ಳುವ ಪರಿಸ್ಥಿತಿಯಲ್ಲಿರುವುದಿಲ್ಲ. ಇದೀಗ ಉತ್ತರಾಖಂಡದ ನೀರ್ಗಲ್ಲು ಸ್ಫೋಟದ ಬಳಿಕವೂ ಪರಿಸರ ತಜ್ಞರು ಹಿಮಾಲಯದಲ್ಲಿ ಸಂಭವಿಸುವ ಅಪಾಯಗಳಿಗೆ ಅವೈಜ್ಞಾನಿಕ ಅಭಿವೃದ್ಧಿ ಕಾರ್ಯಗಳೇ ಕಾರಣವಾಗಿವೆ ಎಂದಿದ್ದಾರೆ. ಇದು ಇಲ್ಲಿಗೆ ಅಂತ್ಯಕಾಣದೇ ಮುಂಬರುವ ದಿನಗಳಲ್ಲಿ ಇಂತಹುದೇ ಅನೇಕ ಅನಾಹುತಗಳಿಗೆ ಉತ್ತರಾಖಂಡ ಸಾಕ್ಷಿಯಾಗುವ ಅಪಾಯವೂ ಇದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

Advertisement

ಜಲವಿದ್ಯುತ್‌ ಯೋಜನೆ
ಅಣೆಕಟ್ಟುಗಳ ಮೂಲಕ ಜಲವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಚೀನ, ಬ್ರೆಜಿಲ್‌, ಯುಎಸ್‌ಎ ಮತ್ತು ಕೆನಡಾ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಭಾರತದಲ್ಲಿ 197 ಜಲವಿದ್ಯುತ್‌ ಸ್ಥಾವರಗಳಿವೆ. ಇದು ಒಟ್ಟು 45,798 ಮೆಗಾವ್ಯಾಟ್‌ ಅಥವಾ ದೇಶದ ಶೇ. 12ಕ್ಕಿಂತ ಹೆಚ್ಚು ವಿದ್ಯುತ್‌ ಅನ್ನು ಈ ಜಲ ವಿದ್ಯುತ್‌ ಸ್ಥಾವರಗಳು ಉತ್ಪಾದಿಸುತ್ತವೆ. ಈ ಪೈಕಿ 98 ಸ್ಥಾವರಗಳು ಉತ್ತರಾಖಂಡ್‌ನ‌ಲ್ಲೇ ಇವೆ. ಪ್ರಸ್ತುತ 41ಸ್ಥಾವರಗಳು ನಿರ್ಮಾಣ ಹಂತದಲ್ಲಿದ್ದು, 197 ಯೋಜನೆಗಳು ಪ್ರಸ್ತಾವನೆಯ ಹಂತದಲ್ಲಿವೆ. ವಾಸ್ತವವಾಗಿ 2013ರಲ್ಲಿ ಬರೋಬ್ಬರಿ 336 ಜಲವಿದ್ಯುತ್‌ ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು.

ವಿದ್ಯುತ್‌ ಉತ್ಪಾದನ‌ ಯೋಜನೆ
ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ಲಭ್ಯವಿರುವ ಜಲ ಮೂಲಗಳಿಂದ ವಿದ್ಯುತ್‌ ಯೋಜನೆಗಳ ಅನುಷ್ಠಾನ ಆರ್ಥಿಕವಾಗಿ ಮತ್ತು ಅಭಿವೃದ್ಧಿ ದೃಷ್ಟಿಯಲ್ಲಿ ಸೂಕ್ತವಾದುದಾದರೂ ಪ್ರಾಕೃತಿಕವಾಗಿ ಬಹಳ ದೊಡ್ಡ ಅವಾಂತರಕ್ಕೆ ಎಡೆ ಮಾಡಿಕೊಡುತ್ತಿವೆ. ದೊಡ್ಡ ಅಣೆಕಟ್ಟುಗಳನ್ನು ನಿರ್ಮಾಣ ಮಾಡುವ ಮೂಲಕ ನದಿಗಳ ನೈಸರ್ಗಿ ಹರಿವನ್ನು ತಡೆಯುತ್ತಿರುವುದೂ ಇಂತಹ ಪ್ರಳಯ ಸದೃಶ ವಾತಾವರಣ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಕಳೆದ 20 ವರ್ಷಗಳಲ್ಲಿ ಉತ್ತರಾಖಂಡದಲ್ಲಿ ನದಿಗಳ ಕತ್ತು ಹಿಸುಕುವ ಮೂಲಕ ವಿದ್ಯುತ್‌ ಉತ್ಪಾದನೆಯ ಯೋಜನೆಗಳನ್ನು ಹೆಚ್ಚು ಅನುಷ್ಠಾನಿಸಲಾಗಿದೆ.

ರೋಪ್‌ ವೇ ಗಳ ಕೊಡುಗೆ!
2018ಕ್ಕಿಂತ ಮೊದಲು ಭಾರತದಲ್ಲಿ ಸುಮಾರು 65 ರೋಪ್‌ವೇಗಳು ಇದ್ದವು. 2018ರಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ರೋಪ್‌ ವೇ ಯೋಜನೆ ರೂಪಿಸಲು ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ನೀಡಲಾಯಿತು. ಇದರಂತೆ ಹಿಮಾಲಯನ್‌ ಪ್ರದೇಶದಲ್ಲಿ 21 ರೋಪ್‌ ವೇಗಳ ಪ್ರಸ್ತಾವನೆಗಳು ಸಲ್ಲಿಕೆಯಾದವು. ಆ ಪೈಕಿ ಉತ್ತರಾಖಂಡದಲ್ಲಿ 11, ಹಿಮಾಚಲ ಪ್ರದೇಶದಲ್ಲಿ 10 ಯೋಜನೆಗಳ ಕಾಮಗಾರಿ ಆರಂಭಗೊಂಡವು. ಆದರೆ ಅವೈಜ್ಞಾನಿಕವಾಗಿ, ಅಧ್ಯಯನ ನಡೆಸದೇ ಪ್ರವಾಸೋದ್ಯಮ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಹೊಸ ರೋಪ್‌ ವೇಗಳನ್ನು ನಿರ್ಮಿಸಲಾಗುತ್ತಿದೆ.

8,800 ರಲ್ಲಿ 200 ಹಿಮನದಿಗಳು ಅಪಾಯಕಾರಿ
ಹಿಮಾಲಯ ಪ್ರದೇಶದಲ್ಲಿ ಸುಮಾರು 8,800 ಹಿಮನದಿ ಸರೋವರಗಳಿವೆ. ಈ ಪೈಕಿ 200 ಹಿಮನದಿಗಳು ಅತ್ಯಂತ ಅಪಾಯಕಾರಿ ವಿಭಾಗದಲ್ಲಿವೆ. ಹಿಮಾಲಯದಲ್ಲಿನ ಪ್ರವಾಹವು ದೊಡ್ಡ ಪ್ರಮಾಣದ ಭೂಕುಸಿತದಿಂದ ಉಂಟಾಗುತ್ತದೆ ಎಂದು ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ. ಇದು ಪರ್ವತ ನದಿಗಳ ಹಾದಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುತ್ತದೆ.

Advertisement

983 ಕಿ.ಮೀ. ರಾಷ್ಟ್ರೀಯ ಹೆದ್ದಾರಿ
ಉತ್ತರಾಖಂಡದಲ್ಲಿ 2014 ಮತ್ತು 2018ರ ನಡುವೆ ಹೆದ್ದಾರಿಯ ಒಟ್ಟಾರೆ ವ್ಯಾಪ್ತಿ 983 ಕಿ.ಮೀ. ಗಳಿಗೆ ವಿಸ್ತರಿಸಲ್ಪಟ್ಟಿದೆ.ಇದಕ್ಕಾಗಿ ಮರಗಳು ಮತ್ತು ಪರ್ವತಗಳನ್ನು ದೊಡ್ಡ ಪ್ರಮಾಣದಲ್ಲಿ ಕತ್ತರಿಸಲಾಗಿದೆ.

ಚಾರ್‌ಧಾಮ್‌ ಯೋಜನೆ ಅಪಾಯಕಾರಿ
ಕೇದಾರನಾಥ, ಬದ್ರಿನಾಥ್‌, ಗಂಗೋತ್ರಿ ಮತ್ತು ಯಮುನೋತ್ರಿಗೆ ಚಾರ್‌ಧಾಮ್‌ ಯೋಜನೆಯಡಿ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದು 889 ಕಿ.ಮೀ. ದ್ವಿಪಥ ಹೆದ್ದಾರಿಯಾಗಿದೆ. 12 ಬೈಪಾಸ್‌ ರಸ್ತೆಗಳು, 15 ಪ್ರಮುಖ ಫ್ಲೈ ಓವರ್‌ಗಳು, 101 ಸಣ್ಣ ಸೇತುವೆಗಳು, 3,596 ಕಲ್ವರ್ಟ್‌ ಗಳು ಮತ್ತು 2 ಸುರಂಗಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 56 ಸಾವಿರ ಮರಗಳನ್ನು ಕಡಿಯಲಾಗಿದೆ. 1,702 ಎಕ್ರೆ ಅರಣ್ಯವನ್ನು ಇತರ ಕೆಲಸಗಳಿಗೆ ಬಳಸಿಕೊಳ್ಳಲಾಗಿದೆ. ನಾಶಗೊಂಡ ಮರಗಳಿಗೆ ಪರ್ಯಾಯವಾಗಿ 2,997 ಎಕ್ರೆ ಭೂಮಿಯಲ್ಲಿ 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಆದರೆ ನೈಸರ್ಗಿಕ ಸಂಪತ್ತನ್ನು ನಾಶ ಮಾಡಿ ಪರ್ಯಾಯ ಸಂಪತ್ತಿನ ಸೃಷ್ಟಿ ಪ್ರಕೃತಿಯ ಮೇಲಣ ದೌರ್ಜನ್ಯವಲ್ಲದೆ ಇನ್ನೇನು?

ಏರುತ್ತಿರುವ ತಾಪಮಾನ ಕಾರಣ?
1990ರ ದಶಕದ ಆರಂಭದಲ್ಲಿ ಜಾಗತಿಕ ತಾಪಮಾನದ ಸಮಸ್ಯೆ ಉದ್ಭವಿಸಲು ಪ್ರಾರಂಭಿಸಿತು. ದಶಕಗಳಿಂದ ಹಿಮನ ದಿಗಳ ಕರಗುವಿಕೆಯ ಪ್ರಮಾಣ ವಾರ್ಷಿಕ ಅರ್ಧ ಮೀಟರ್‌ಗಳಷ್ಟು ಅಧಿಕವಾಗಿದೆ. ಪ್ರತೀ ವರ್ಷ ಒಂದೂವರೆ ಅಡಿ ಹಿಮ ಕರಗುತ್ತಿದೆ. ವಿದ್ಯುತ್‌ ಮತ್ತು ಕುಡಿಯುವ ನೀರಿಗಾಗಿ ಲಕ್ಷಾಂತರ ಜನರು ಹಿಮನದಿಗಳನ್ನು ಅವಲಂಬಿಸಿದ್ದಾರೆ.

ವಿಷಕಾರಿ ಅನಿಲ ಕಾರಣ
ಹಿಮಾಲಯದ ಪರಿಸ್ಥಿತಿಯ ಬಗ್ಗೆ ವಾಡಿಯಾ ಸಂಸ್ಥೆಯ ಸಂಶೋಧನೆಯು ಯುರೋಪಿನ ದೇಶಗಳಿಂದ ಹೊರಹೊಮ್ಮುವ ಮಾಲಿನ್ಯವು ಇಡೀ ಹಿಮಾಲಯ ಶ್ರೇಣಿಯ ಆರೋಗ್ಯವನ್ನು ಹಾಳುಮಾಡುತ್ತಿದೆ ಎಂದು ಬಹಿರಂಗಪಡಿಸಿತ್ತು. ಈ ಮಾಲಿನ್ಯವು ಹಿಮಾಲಯದ ಹಿಮನದಿಗಳಿಗೆ ಕಪ್ಪು ಇಂಗಾಲದಂತೆ ಅಂಟಿಕೊಳ್ಳುತ್ತಿದೆ. ಇದು ಹಿಮನದಿಗಳು ಕರಗಲು ಕಾರಣವಾಗುತ್ತದೆ. ಜನವರಿ ತಿಂಗಳಲ್ಲಿ ಕಪ್ಪು ಇಂಗಾಲವು ಪಾಶ್ಚಾತ್ಯ ದೇಶಗಳಿಂದ ಬರುತ್ತಿದೆ. ಈ ವಿಷಕಾರಿ ಅನಿಲಗಳ ಜತೆಗೆ ಬರುವ ಇತರ ರಾಸಾಯನಿಕಗಳು ಈ ಅವಾಂತರಗಳಿಗೆ ಕಾರಣವಾಗುತ್ತಿವೆ.

8 ತಿಂಗಳ ಹಿಂದೆಯಷ್ಟೇ ಎಚ್ಚರಿಸಲಾಗಿತ್ತು!
8 ತಿಂಗಳ ಹಿಂದೆ ಹಿಮಾಲಯದಲ್ಲಿ ಇಂತಹ ಅನಾಹುತದ ಬಗ್ಗೆ ಭೂ-ವಿಜ್ಞಾನಿಗಳು ಎಚ್ಚರಿಸಿದ್ದರು. ಉತ್ತರಾಖಂಡದ ಗಂಗೆಯಲ್ಲಿ ಯಾವುದೇ ಹೊಸ ವಿದ್ಯುತ್‌ ಯೋಜನೆ ಕೈಗೆತ್ತಿಕೊಳ್ಳುವುದು ಪರಿಸರಕ್ಕೆ ಅಪಾಯಕಾರಿ ಎಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯವೇ 2016ರಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. 2013ರ ಕೇದಾರನಾಥ ದುರಂತದ ಅನಂತರ ರಾಜ್ಯದ 39 ವಿದ್ಯುತ್‌ ಯೋಜನೆಗಳಲ್ಲಿ 24 ಅನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿತ್ತು. ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದ್ದರೂ ಅಣೆಕಟ್ಟುಗಳು ಮತ್ತು ವಿದ್ಯುತ್‌ ಯೋಜನೆಗಳ ಕೆಲಸ ಮಾತ್ರ ನಿರಾತಂಕವಾಗಿ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next