Advertisement

landslide ಅವೈಜ್ಞಾನಿಕ ಕಾಮಗಾರಿ; ನಿರಂತರ ಭೂ ಕುಸಿತದ ಗಾಬರಿ

09:11 AM Jul 18, 2024 | Team Udayavani |

ಹೊನ್ನಾವರ: ಕೆಂಪು ಮಣ್ಣು, ಹೊಯ್ಗೆ, ಶೇಡಿ ಮಣ್ಣು, ಉರುಟು ಕಲ್ಲು ಮತ್ತು ಬಂಡೆಗಳಿಂದ ಕೂಡಿದ, ಒಂದನ್ನೊಂದು ಒತ್ತಡದಲ್ಲಿ ಹಿಡಿದಿಟ್ಟುಕೊಂಡ, ಒಂದು ತುದಿ ಸಡಿಲಾದರೆ ಪೂರ್ತಿ ಕುಸಿಯುವ ಉತ್ತರ ಕನ್ನಡದ ವಿಶಿಷ್ಟ ಭೂಗುಣದಲ್ಲಿ ಅವೈಜ್ಞಾನಿಕವಾಗಿ ನಡೆದ ಅಭಿವೃದ್ಧಿ ಕಾಮಗಾರಿಯಿಂದ ನಿರಂತರ ಭೂ ಕುಸಿತ ಸಂಭವಿಸುತ್ತಿದ್ದು, ಭವಿಷ್ಯದಲ್ಲಿ ಗುಡ್ಡಗಳೇ ಬಿರುಕು ಬಿಟ್ಟರೆ ಆಶ್ಚರ್ಯವಿಲ್ಲ.

Advertisement

ನೀರಿನ ಹರಿವಿಗೆ ತೊಂದರೆ: ಜಿಲ್ಲೆಯಲ್ಲಿ ಗುಡ್ಡದ ಇಳಿಜಾರಿನಲ್ಲಿ, ಮಧ್ಯ ಭಾಗದಲ್ಲಿ ಹೊಟ್ಟೆ ಸೀಳಿದಂತೆ ಕೊಂಕಣ ರೈಲ್ವೆ ಕಾಮಗಾರಿ ನಡೆಸಿಕೊಂಡು ಬರಲಾಯಿತು.

ದಕ್ಷಿಣೋತ್ತರವಾಗಿ ಕೊರೆದ ಭೂಮಿ ಮತ್ತು ಮಣ್ಣು ತುಂಬಿದ ಭೂಮಿಯಿಂದಾಗಿ ನೀರಿನ ಪೂರ್ವ-ಪಶ್ಚಿಮ ಹರಿವಿಗೆ ತೊಂದರೆ ಆಯಿತು. ಕೊಂಕಣ ರೈಲ್ವೆ ಇದನ್ನು ತಪ್ಪಿಸಲು ರೈಲ್ವೆ ಮಾರ್ಗದ ಎಡಬಲದಲ್ಲಿ ರಾಜಾಕಾಲುವೆ ನಿರ್ಮಿಸಿ ಅದನ್ನು ಹೊಳೆ, ಹಳ್ಳಕ್ಕೆ ಸಂಪರ್ಕಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿತು. ಆದರೆ 20 ವರ್ಷ ಕಳೆದರೂ ಒಂದೇ ಒಂದು ಬಾರಿ ಸಮರ್ಪಕವಾಗಿ ಹೂಳೆತ್ತದ ಕಾರಣ ನೀರು ಹರಿವಿಗೆ ತೊಂದರೆಯಾಗಿ ಸ್ವಲ್ಪ ಜೋರಾಗಿ ಮಳೆಯಾದರೂ ತಗ್ಗು ಪ್ರದೇಶಗಳನ್ನು ಪ್ರವಾಹ ಕಾಡುವುದಲ್ಲದೇ ಹೆದ್ದಾರಿಯನ್ನು, ಹಳ್ಳಿಯ ದಾರಿಯನ್ನು ಅಲ್ಲಲ್ಲಿ ಮುಳುಗಿಸುತ್ತಿದೆ.

ಗುಡ್ಡದಲ್ಲೂ ತೋಟ: ಗುಡ್ಡದ ಮೇಲ್ಗಡೆಗೆ ಮನೆಗಳು ತಲೆ ಎತ್ತಿ ಬೋರ್‌ವೆಲ್‌ ಕೊರೆದು ತೋಟ ಮಾಡಿದ ಕಾರಣ ನೀರು ಇಂಗಿ ಗುಡ್ಡ ಕುಸಿಯುತ್ತಿದೆ. ಗುಡ್ಡದ ಕೆಳಗಡೆ ಜನವಸತಿ ಇದೆ. ಕೆಳಭಾಗದ ಗುಡ್ಡವೂ ಕುಸಿಯುತ್ತಿದೆ. ಈ ವರ್ಷ ಗೋವಾದಲ್ಲಿ ಸುರಂಗ ಬಾಗಿಲಲ್ಲಿ ಕುಸಿತ ಉಂಟಾಗಿತ್ತು. ಕೆಲವೆಡೆ ರೈಲ್ವೆ ಮಾರ್ಗದ ಸುರಂಗದೊಳಗಡೆ ದಪ್ಪದಪ್ಪ ಝರಿಗಳು ಹರಿಯುತ್ತವೆ. ಮಳೆಗಾಲದ ನೀರು ಹರಿದು ಹೋಗುವ ಮೊದಲಿನ ವ್ಯವಸ್ಥೆ ಬದಲಾಗಿ ಹೊಸ ವ್ಯವಸ್ಥೆ ನಿರ್ವಹಣೆ ಆಗದೆ ಕೊಂಕಣ ರೈಲ್ವೆ ಮಳೆಗಾಲದಲ್ಲಿ ಡೆಮೊ ರೈಲು ಓಡಿಸುತ್ತ ಅಪಾಯ ಇಲ್ಲವೆಂದು ಖಚಿತಪಡಿಸಿಕೊಂಡು ವೇಗ ಕಡಿಮೆ ಮಾಡಿ ಸಾಗುತ್ತಿದೆ. ಆದರೂ ಈ ವರ್ಷವೂ ಗುಡ್ಡ ಕುಸಿದಿದೆ.

ಕಾಲುವೆಯೇ ಇಲ್ಲ-ಕಾಮಗಾರಿಯೂ ಸರಿಯಾಗಿಲ್ಲ: ಮೊದಲು ಒಂದು ಹೆದ್ದಾರಿ, ಹಳ್ಳಿಯ ದಾರಿ ರಚನೆಯಾದರೆ ರಸ್ತೆಯ ಎಡಬಲದಲ್ಲಿ ಕಾಲುವೆಗಳು ಇರುತ್ತಿದ್ದವು. ಗುಡ್ಡದ ಮೇಲ್ಗಡೆ ಒಂದು ಕಾಲುವೆ. 100 ಮೀ. ಮುಂದೆ ಇನ್ನೊಂದು ಕಾಲುವೆ (ಹಳ್ಳಿಗರ ಭಾಷೆಯಲ್ಲಿ ಡಬಲ್‌ ಗಟಾರ) ಇರುತ್ತಿತ್ತು. ಈಗ ರಸ್ತೆ ಮಾಡಿದ ಗುತ್ತಿಗೆದಾರ ಹೊರಟು ಹೋಗುತ್ತಾನೆ. ಚತುಷ್ಪಥ ಕಾಮಗಾರಿ ಕಥೆಯೂ ಇದೆ. ಹೆದ್ದಾರಿ ವೈಜ್ಞಾನಿಕವಾಗಿಲ್ಲ,ತಿರುವುಗಳಲ್ಲಿ ಗುಡ್ಡ ಕತ್ತರಿಸಿದ್ದು ಸರಿಯಿಲ್ಲ. ಗುಡ್ಡ ಅರಣ್ಯ ಇಲಾಖೆ ಭೂಮಿ ಆದ ಕಾರಣ ಅದನ್ನು ಬಳಸಿ ಶೇ.45 ಇಳಿಜಾರು ಮಾಡಲು ಬಿಡದ ಕಾರಣ ಶೇ.80 ಇಳಿಜಾರು ಮಾಡಿ ತಲೆಯ ಮೇಲೆ ಕತ್ತಿ ತೂಗುವಂತೆ ಮಾಡಲಾಗಿದೆ.

Advertisement

ಜನರಿಗೆ ರಸ್ತೆ ಇದೆ-ನೀರಿಗೆ ದಾರಿ ಇಲ್ಲ: ಮಳೆಗಾಲದ ನೀರು ಹೋಗುವ ಕಾಲುವೆಗಳಿಗೆ ಮಣ್ಣು ತುಂಬಿದೆ. ಡಬಲ್‌ ಗಟಾರಗಳು ಇಲ್ಲವೇ ಇಲ್ಲ. ಜಿಲ್ಲೆಯಲ್ಲಿ ಕರಾವಳಿ ಕಿರಿದಾಗಿದ್ದು ಕೇವಲ 2-4 ಕಿಮೀ ಅಗಲವಾಗಿದೆ. ಗುಡ್ಡಗಳು ಸಮುದ್ರ ತೀರದವರೆಗೆ ಬಂದಿವೆ. ಗುಡ್ಡದ ಮೇಲೂ ಮನೆಗಳು, ಗುಡ್ಡದ ಕೆಳಗೂ ಮನೆಗಳಿವೆ. ಪಿರಾಮಿಡ್‌ ಆಕಾರದ ಸಹ್ಯಾದ್ರಿಯ ಗುಡ್ಡದ ಮಧ್ಯೆಯಿಂದ ರಾಷ್ಟ್ರೀಯ ಹೆದ್ದಾರಿಗಳು ಹಳ್ಳಿಯ ರಸ್ತೆಗಳು, ಲೋಕೋಪಯೋಗಿ ಇಲಾಖೆಯ ರಸ್ತೆಗಳು ಹಾದು ಹೋಗಿವೆ. ಎಲ್ಲರ ಮನೆಗೂ ರಸ್ತೆಯಾಗಿವೆ. ಆದರೆ ಹರಿಯುವ ನೀರಿಗೆ ಬೇಕಾದ ಮಾರ್ಗ ಇಲ್ಲ. ಬೋಳು ಗುಡ್ಡಕ್ಕೆ ಬಡಿಯುವ ಮಳೆ ರಸ್ತೆ ಮನೆ ಎನ್ನದೇ ನುಗ್ಗಿ ಇಳಿದು ಬರುವಾಗ ಹಳೆಯ ದಾರಿ ಕಾಣದಾಗಿ ಹೊಸದಾರಿ ಹುಡುಕಿಕೊಂಡು ಮಣ್ಣು ಕಲ್ಲುಗಳೊಂದಿಗೆ ಪಶ್ಚಿಮಕ್ಕೆ ಧಾವಿಸುವಾಗ ಗುಡ್ಡಗಳು ಕುಸಿಯುತ್ತವೆ. ಬಂಡೆಗಳು ಉರುಳುತ್ತವೆ. ಕೆಂಪು ಮಣ್ಣು ನದಿಯ ಪ್ರವಾಹಕ್ಕೆ ರಕ್ತದ ಬಣ್ಣ ಬಳಿದುಕೊಂಡು ಸಮುದ್ರದ ಹಾದಿ ಹಿಡಿಯುವ ಮೊದಲು ತಗ್ಗು ಪ್ರದೇಶದ ಮನೆಗಳನ್ನು, ಗದ್ದೆಗಳನ್ನು ನೀರು ಪಾಲು ಮಾಡುತ್ತದೆ.

ಗುಡ್ಡಕ್ಕೆ ತಡೆಗೋಡೆಯೇ ಇಲ್ಲ: ಕೊಂಕಣ ರೈಲ್ವೆ ಅಲ್ಲಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದಲ್ಲಿ ತಡೆಗೋಡೆ ನಿರ್ಮಿಸಿದೆ. ಗುಡ್ಡ ಕಡಿದಲ್ಲಿ ನೀರು ಝರಿಗೆ ಮಾರ್ಗ ಮಾಡಿಕೊಟ್ಟಿದೆ. ಕೆಲವು ಕಡೆ ಸಿಮೆಂಟ್‌ ಪ್ಲಾಸ್ಟರ್‌ ಮಾಡಿದೆ. ಚತುಷ್ಪಥ ಹೆದ್ದಾರಿಯಲ್ಲಿ, ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ, ಹಳ್ಳಿಯ ರಸ್ತೆಯಲ್ಲಿ, ಎಲ್ಲಿಯೂ ತಡೆಗೋಡೆ ಇಲ್ಲ. ಗಟಾರಗಳೂ ಇಲ್ಲ. ಖಾಸಗಿ ಭೂಮಿಯಲ್ಲಿ ಗುಡ್ಡ ಕಡಿಯುವಾಗ ಪರವಾನಿಗೆ ಬೇಕು ಅನ್ನುತ್ತಾರೆ. ಸರಕಾರಿ ಜಾಗದಲ್ಲಿ ಸರಕಾರವೇ ರಸ್ತೆ ಮಾಡುವಾಗ ಕೇಳುವವರಿಲ್ಲ.

ಹೆಚ್ಚಿದ ಜೆಸಿಬಿ ಸದ್ದು: ಇದರ ಜೊತೆಯಲ್ಲಿ ಪ್ರತಿ ತಾಲೂಕಿನಲ್ಲೂ ಸುಮಾರು 50 ಜೆಸಿಬಿಗಳು ಹಳ್ಳಿ ಹಳ್ಳಿಗೆ ಹೋಗಿ ಗುಡ್ಡ ಕಡಿದು ತೋಟ ಮಾಡಲು ಅನುಕೂಲ ಮಾಡಿಕೊಡುತ್ತದೆ. ಕೊಳವೆ ಬಾವಿಗಳು ಜಲಮೂಲವನ್ನು ಖಾಲಿ ಮಾಡುತ್ತವೆ. ಆದ್ದರಿಂದಲೇ ಲಕ್ಷಾಂತರ ಎಕರೆ ಗುಡ್ಡ ಈಗ ತೋಟವಾಗಿದೆ. ಮಳೆಗಾಲದಲ್ಲಿ ಹರಿದು ಹೋಗಲು ನೀರಿಗೆ ಸ್ಥಳವಿಲ್ಲದ ಕಾರಣ ಪ್ರವಾಹ ದಾಳಿ ಮಾಡುತ್ತದೆ.

ಇದರಿಂದಾಗಿ ಕಳೆದ ನಾಲ್ಕಾರು ವರ್ಷಗಳಿಂದ ಪ್ರತಿವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿತ, ನೆರೆ ಹಾವಳಿ, ಘಟ್ಟದ ರಸ್ತೆ ಬಂದ್‌ ಸಾಮಾನ್ಯ ಎಂಬಂತಾಗಿದೆ. ಗುಡ್ಡದ ಮೇಲ್ಗಡೆ ಸಾಕಷ್ಟು ಮನೆಗಳು, ತೋಟಗಳು ನಿರ್ಮಾಣವಾಗಿ ನೀರು ಇಂಗುತ್ತಿರುವುದರಿಂದ ಗುಡ್ಡ ಇಬ್ಭಾಗವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇಷ್ಟು ದೊಡ್ಡ ಪ್ರಮಾಣದ ಕುಸಿತ, ಸಂಭವಿಸಿದ ಸಾವಿನಿಂದ ಸರಕಾರ ಎಚ್ಚರಾಗಬೇಕು. ಕುಮಟಾ-ಶಿರಸಿ ಮಾರ್ಗದಲ್ಲಿ ನಿರ್ಮಾಣವಾದಂತೆ ರಸ್ತೆಗಳ ಎಡಬಲದಲ್ಲಿ ತಡೆಗೋಡೆ ನಿರ್ಮಾಣ ಅನಿವಾರ್ಯವಾಗಿದೆ.

ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ
ಇಂತಹ ಅವಘಡದಲ್ಲಿ ಸಾವು, ನೋವು ಸಂಭವಿಸಿದಾಗ ಸಂತಾಪ ಸೂಚಿಸಿ ಅಷ್ಟಿಷ್ಟು ಕೈಗಿಟ್ಟು ಹೋಗುವ ರಾಜಕಾರಣಿಗಳು ಅವಘಡಕ್ಕೆ ಪರಸ್ಪರರನ್ನು ಆರೋಪಿಸುವುದರಲ್ಲಿ ಸಮಯ ವ್ಯರ್ಥ ಮಾಡುತ್ತಾರೆ. ಮೂಲ ಕಾರಣ ಹುಡುಕಿ ಸಮಸ್ಯೆ ಸರಿಪಡಿಸುವ ಕೆಲಸ ಆಗಬೇಕಾಗಿದೆ. ಹಲವಾರು ವರ್ಷಗಳಿಂದ ಗುಡ್ಡ ಕುಸಿಯುತ್ತಿದ್ದರೂ ಐಆರ್‌ಬಿಯ ಮೇಲೆ ಅವರಿವರ ಮೇಲೆ ಆಪಾದನೆ ಮಾಡುತ್ತ ಹೊಣೆಗಾರಿಕೆ ತಪ್ಪಿಸಿಕೊಂಡ ರಾಜಕಾರಣಿಗಳಿಂದ ಹಲವರ ಜೀವ ಹೋಗುವಂತಾಗಿದೆ.

ಕಾಮಗಾರಿಗಳಿಗೆ ಅಡ್ಡಗಾಲು ಹೆಚ್ಚಾಯ್ತು-ಅಮಾಯಕರ ಜೀವಕ್ಕೆ ಎರವಾಯ್ತು

ದೇಶದ ಎಲ್ಲೆಡೆ ಚತುಷ್ಪಥ, ಷಟ್ಪಥ ಕಾಮಗಾರಿ ನಡೆದಿದೆ. ದಕ್ಷಿಣ ಕನ್ನಡದಲ್ಲಿ ಯಾವುದೇ ಆಸೆ ಇಲ್ಲದೆ ಎಲ್ಲ ಪಕ್ಷದ ರಾಜಕಾರಣಿಗಳು, ಮಠಾಧೀಶರು ಒಂದಾಗಿ 60 ಮೀ. ಚತುಷ್ಪಥ, ಅಲ್ಲಲ್ಲಿ ಮೇಲ್ಸೇತುವೆ, ಸರ್ವಿಸ್‌ ರಸ್ತೆ ಮಾಡಿಸಿಕೊಂಡರು. ಉತ್ತರ ಕನ್ನಡದಲ್ಲಿ ಮೂಲ ನಕ್ಷೆಯಲ್ಲಿ ಹೊನ್ನಾವರ, ಭಟ್ಕಳ, ಕುಮಟಾಕ್ಕೆ ಮೇಲ್ಸೇತುವೆ ಇತ್ತು. 60 ಮೀ. ಚತುಷ್ಪಥ ರಚನೆ ಆಗಬೇಕಿತ್ತು. ನಿತಿನ್‌ ಗಡ್ಕರಿಯವರನ್ನು ಬಲ್ಲ ರಾಜಕಾರಣಿ ಕೆಲವರ ಆಸ್ತಿ ಉಳಿಸಲು ಚತುಷ್ಪಥ ಕಾಮಗಾರಿಯನ್ನು 45 ಮೀ.ಗೆ ಇಳಿಸಿದರು. ಮೇಲ್ಸೇತುವೆಯ ಮೇಲೆ ಹೋದರೆ ಪ್ರವಾಸಿಗರು ಬರುವುದಿಲ್ಲ ಎಂದು ಅದನ್ನು ಕೈಬಿಡಿಸಿದರು.

ಸಣ್ಣಪುಟ್ಟ ಪುಢಾರಿಗಳು ತಮ್ಮ ಮನೆ ಉಳಿಸಲು ನಕಾಶೆ ಬದಲಿಸಿದರು. ಪದೇ ಪದೇ ನಕ್ಷೆ ಬದಲಾಗಿ ಕಾಮಗಾರಿ ವಿಳಂಬವಾಯಿತು. ಅರಣ್ಯ ಇಲಾಖೆಯ ಬಿಗಿ ನಿಲುವಿನಿಂದ ಜಾಗ ಸಿಗದೇ ಗುಡ್ಡಗಳು ಕತ್ತರಿಸಿಕೊಂಡು ಲಂಬವಾಗಿ ಉಳಿಯಬೇಕಾಯಿತು. ಭೂಮಿಗೆ ಪರಿಹಾರ ಕೊಡಬೇಕಾದ ರಾಜ್ಯ ಸರಕಾರ ವಿಳಂಬ ಮಾಡಿತು. ಜಲ್ಲಿ, ಮಣ್ಣು ತರಲು ರಾಜಕಾರಣಿಗಳ ಮರ್ಜಿ ಕಾಯಬೇಕಾಯಿತು. ಜಿಲ್ಲೆಯ ಉಳಿದ ನದಿಗಳಿಗೆ ಸೇತುವೆ ಆದರೂ ಶರಾವತಿಗೆ ಈ ವರೆಗೂ ಸೇತುವೆ ಆಗಲಿಲ್ಲ. ಅಲ್ಲಲ್ಲಿ ತಿರುವುಗಳು ಹಾಗೆಯೇ ಉಳಿದುಕೊಂಡಿದೆ. ಕುಮಟಾದಲ್ಲಿ ಊರ ಹೊರಗಿನಿಂದ ಚತುಷ್ಪಥ ಹೋಗಲಿ ಎಂದು ಕೆಲವರು ವಿಳಂಬ ಮಾಡಿದರು. ಕಾಶ್ಮೀರದಂತಹ ಸಮಸ್ಯಾತ್ಮಕ ಪ್ರದೇಶದಲ್ಲಿ ಐಆರ್‌ಬಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದೆ. ಆದರೆ ಉತ್ತರ ಕನ್ನಡದಲ್ಲಿ ಚತುಷ್ಪಥ ಕಾಮಗಾರಿಗೆ ಬಂದು ಇಲ್ಲಿಯ ಅಡ್ಡಗಾಲುಗಳನ್ನು ಸಹಿಸದೇ ಕಾಶ್ಮೀರಕ್ಕೆ ಹೋಗಿದ್ದಾರೆ. ಕೇಂದ್ರ ಸರಕಾರವನ್ನು ದೂರುವ ಮೊದಲು ರಾಜ್ಯ ಸರಕಾರದ ತಪ್ಪುಗಳ ತನಿಖೆ ಆಗಬೇಕು.

ಶಿರಸಿ-ಕುಮಟಾ ರಸ್ತೆ 2 ವರ್ಷದಲ್ಲಿ ಮುಗಿಯಬೇಕಿತ್ತು. 6 ವರ್ಷವಾದರೂ ಮುಗಿದಿಲ್ಲ. ಅರಣ್ಯ ಇಲಾಖೆ 20 ಅಡಿ ಜಾಗ ಕೊಟ್ಟಿದ್ದರೆ ದ್ವಿಪಥ ಮುಗಿದು ಹೋಗುತ್ತಿತ್ತು. ಹೊನ್ನಾವರ ಬಂದರು ಕಾಮಗಾರಿ ನಿಂತು 4 ವರ್ಷಗಳಾದವು. ಕೇಂದ್ರ ಮತ್ತು ರಾಜ್ಯ ಸರಕಾರದ ಪರಸ್ಪರ ಸಹಕಾರವಿಲ್ಲದೆ ಯಾವುದೇ ಯೋಜನೆಯನ್ನು ಕಾಲಕ್ಕೆ ಸರಿಯಾಗಿ ಮುಗಿಸುವುದು ಸಾಧ್ಯವಿಲ್ಲ. ಪರಸ್ಪರ ಆರೋಪ ಹೊರಿಸುವುದನ್ನು ಬಿಟ್ಟು ಒಟ್ಟಾಗಿ ಕೆಲಸ ಮಾಡಿದ್ದರೆ ಹಲವು ನಿರಪರಾಧಿಗಳ ಜೀವ ಉಳಿದು ಅವರ ಕುಟುಂಬದ ಶಾಪ ತಪ್ಪುತ್ತಿತ್ತು. ಐಆರ್‌ಬಿ ವಿಳಂಬಕ್ಕೆ ತನಿಖೆ ನಡೆದರೆ ಸತ್ಯ ಹೊರಬರುತ್ತದೆ.

ಇದನ್ನೂ ಓದಿ:Hill Collapse ಉಳುವರೆಯಲ್ಲಿ ಉಳಿದದ್ದು ಮನೆ ನೆಲಗಟ್ಟು !

-ಜೀಯು

Advertisement

Udayavani is now on Telegram. Click here to join our channel and stay updated with the latest news.

Next