Advertisement

ಚಿಕ್ಕಲ್‌ ಗುಡ್ಡ –ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ನಡೆ

03:30 PM Dec 07, 2022 | Team Udayavani |

ಕಾರ್ಕಳ: ಕಾರ್ಕಳ ಮೂಲಕ ಹಾದು ಹೋಗುವ ಚಿಕ್ಕಲ್‌ ಗುಡ್ಡ-ಪಡುಬಿದ್ರಿ ರಾಜ್ಯ ಹೆದ್ದಾರಿಯ ಬೈಪಾಸ್‌ ರಸ್ತೆಯಲ್ಲಿ ಹೆಜ್ಜೆಹೆಜ್ಜೆಗೂ ರಸ್ತೆ ವಿಭಾಜಕ ಕೆಡವಿ ಅವೈಜ್ಞಾನಿಕ ಪ್ರವೇಶಗಳನ್ನು ಮಾಡಿ ಕೊಂಡಿರುವುದು ಕಂಡುಬಂದಿದೆ. ಇದು ಲೋಕೋಪಯೋಗಿ ಇಲಾಖೆಯ ಕಣ್ಣಳತೆಯಲ್ಲೆ ನಡೆಯುತ್ತಿದ್ದರೂ ಇಲಾಖೆ ಮಾತ್ರ ಸಂಬಂಧವೇ ಇಲ್ಲವೆನ್ನುವಂತೆ ಕಣ್ಮುಚ್ಚಿ ಕುಳಿತಿದೆ.

Advertisement

ಚಿಕ್ಕಲ್‌ ಗುಡ್ಡ-ಪಡುಬಿದ್ರಿ ರಾಜ್ಯ ಹೆದ್ದಾರಿ ಕಾರ್ಕಳ ಮುಖ್ಯ ಪೇಟೆಯನ್ನು ಪ್ರವೇಶಿಸಿದೆ ಜೋಡು ರಸ್ತೆಯಿಂದ ಮುಂದಕ್ಕೆ ಬಂಡಿಮಠ ಜಂಕ್ಷನ್‌ನಿಂದ ಕವಲೊಡೆದು ಸರ್ವಜ್ಞ ವೃತ್ತದ ಮೂಲಕ ಬೈಪಾಸ್‌ ಆಗಿ ಹಾದು ಹೋಗಿದೆ. ಬಂಗ್ಲೆಗುಡ್ಡೆ ಜಂಕ್ಷನ್‌ನಿಂದ ಬೈಪಾಸ್‌ ಸರ್ಕಲ್‌ ತನಕ ಸುಮಾರು 5 ಕಿ. ಮೀ ವ್ಯಾಪ್ತಿಯಲ್ಲಿ ಸುಮಾರು 15 ಕಡೆ ರಸ್ತೆ ವಿಭಾಜಕ ಪ್ರವೇಶಗಳು ತಲೆಎತ್ತಿವೆ.

15 ಕಡೆಯ ವಿಭಾಜಕ ಪ್ರವೇಶಗಳ ಪೈಕಿ ನಿಸರ್ಗ ವಸತಿ ನಿಲಯದಿಂದ ಸ್ವಲ್ಪ ಮುಂದಕ್ಕೆ ತಿಂಗಳ ಹಿಂದೆಯಷ್ಟೇ ವಿಭಾಜಕ ತೆರವುಗೊಳಿಸಿ ಪ್ರವೇಶ ಮಾಡಿಕೊಳ್ಳಲಾಗಿದೆ. ಅದಾದ ಬೆನ್ನಲ್ಲೇ 2 ದಿನಗಳ ಹಿಂದೆ ಶಿವತಿಕೆರೆ ದೇವಸ್ಥಾನದ ಪಕ್ಕದಲ್ಲೇ ಈಶರ್‌ ಪೆಟ್ರೋಲ್‌ ಪಂಪ್‌ ಬಳಿ ಮತ್ತೆ ವಿಭಾಜಕ ಅಗೆದು ಮತ್ತೂಂದು ಪ್ರವೇಶ ದಾರಿ ಮಾಡಲಾಗಿದೆ. ಇಲ್ಲಿ ಪ್ರವೇಶಗಳನ್ನು ನಿರ್ಮಿಸುವ ವೇಳೆ ಲೋಕೋ ಪಯೋಗಿ ಇಲಾಖೆಯಿಂದ ಅನುಮತಿ ಪಡೆಯದೆ ಇರುವುದು ಬೆಳಕಿಗೆ ಬಂದಿದೆ.

ಬೈಪಾಸ್‌ ಸರ್ಕಲ್‌ನಿಂದ ಬಂಗ್ಲೆಗುಡ್ಡೆ ಜಂಕ್ಷನ್‌ ವ್ಯಾಪ್ತಿಯಲ್ಲಿ ಬೈಪಾಸ್‌ ಸರ್ಕಲ್‌, ಭವಾನಿ ಮಿಲ್‌, ಕುಂಟಾಡಿ ಪಾಸ್‌ ರೋಡ್‌, ಆನೆಕೆರೆ ಬಸದಿ ಪಾಸ್‌ ರೋಡ್‌, ಶಿವತಿಕೆರೆ ದೇವಸ್ಥಾನ ಪಾಸಿಂಗ್‌ ರೋಡ್‌, ಗ್ಯಾರೇಜ್‌, ಅತ್ತೂರು ಚರ್ಚ್‌, ಬಿಬಿಎಂ ಕಾಲೇಜು ಕ್ರಾಸಿಂಗ್‌, ರೋಟರಿ ಆಸ್ಪತ್ರೆ, ಸರ್ವಜ್ಞ ವೃತ್ತ, ಹಾಗೂ ಬಂಗ್ಲೆಗುಡ್ಡೆ ಜಂಕ್ಷನ್‌ನಿಂದ ಸ್ವಲ್ಪ ಮುಂದಕ್ಕೆ ಹೀಗೆ ಅಲ್ಲಲ್ಲಿ ರಸ್ತೆ ಪ್ರವೇಶಗಳಿವೆ.

ಕೆಲವೆಡೆ 10 ಮೀ ಕೂಡ ಇಲ್ಲ!
ಆಸ್ಪತ್ರೆ, ಶಾಲೆ, ಸೇವಾ ರಸ್ತೆಗಳು ಹಾದು ಹೋಗುವ ಕಡೆಗಳ ಸ್ಥಳಗಳಲ್ಲಿ ವಿಭಾಜಕ ಪ್ರವೇಶ ನೀಡುವಂತೆ ಹೆದ್ದಾರಿ ನಿಯಮದಲ್ಲಿದೆ. ಅದಲ್ಲದೆ ಇಂಧನ ಕೇಂದ್ರಗಳಿಗೆ ಪ್ರವೇಶಿ ಒದಗಿಸಲು ಅದರದ್ದೇ ಆದ ನಿಯಮಾವಳಿಗಳಿವೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗೆ ಪ್ರತ್ಯೇಕ ನಿಯಮಾವಳಿಗಳಿದ್ದು, ಕನಿಷ್ಠ ಒಂದು ಪ್ರವೇಶದಿಂದ ಇನ್ನೊಂದು ಪ್ರವೇಶಕ್ಕೆ ಕನಿಷ್ಠ 500 ಮೀ.ನಿಂದ 300ರಷ್ಟಾದರೂ ಅಂತರ ಇರಬೇಕಿದೆ. ಆದರಿಲ್ಲಿ ಒಂದು ಪ್ರವೇಶದಿಂದ ಇನ್ನೊಂದು ಪ್ರವೇಶಕ್ಕೆ ಕೆಲವೆಡೆ 10 ಮೀ. ಕೂಡ ಇಲ್ಲದಿರುವುದು ಕಂಡು ಬರುತ್ತಿದೆ.

Advertisement

ಅಪಾಯಗಳಿಗೆ ಆಹ್ವಾನ!
ಮೊದಲೇ ರಾಜ್ಯ ಹೆದ್ದಾರಿ. ಇಲ್ಲಿ ವಾಹನಗಳ ವೇಗವೂ ಹೆಚ್ಚೇ ಇರುತ್ತದೆ. ಬಂಗ್ಲೆಗುಡ್ಡೆ ಜಂಕ್ಷನ್‌ನಿಂದ ಬೈಪಾಸ್‌ ಸರ್ಕಲ್‌ ತನಕ ವಾಹನಗಳು ವೇಗವಾಗಿ ಓಡಾಡುತ್ತವೆ. ರಸ್ತೆಯುದ್ದಕ್ಕೂ ಪ್ರವೇಶ ಸ್ಥಳಗಳು ಹೆಜ್ಜೆಹೆಜ್ಜೆಗೂ ಇರುವುದರಿಂದ ಅಲ್ಲಲ್ಲಿ ದಾಟು ತ್ತಿರುತ್ತಾರೆ. ಈ ಸ್ಥಳಗಳಲ್ಲಿ ಸಂಚಾರ ಸುರಕ್ಷತೆ ಗಳಿರು ವುದಿಲ್ಲ. ಅವಾಗೆಲ್ಲ ಮೈಯೆಲ್ಲ ಕಣ್ಣಾಗಿಸಿಕೊಂಡು ಓಡಾಡಬೇಕು, ಅಡ್ಡಾಡಬೇಕು. ವೇಗ ನಿಯಂ ತ್ರಣದ ಸುರಕ್ಷತೆ ಕ್ರಮಗಳು ಇಲ್ಲ. ಅಲ್ಲಲ್ಲಿನ ಪ್ರವೇಶಗಳು ಅವಘಡಗಳಿಗೆ ಆಹ್ವಾನ ನೀಡುತ್ತಿರುತ್ತದೆ.

ಸದಾಶಯಕ್ಕಿಂತ ಅಪಾಯವೇ ಹೆಚ್ಚು ರಾಜ್ಯ ಹೆದ್ದಾರಿಗಳಲ್ಲಿ ಶಾಲೆ, ಕಾಲೇಜುಗಳು ಆಸ್ಪತ್ರೆ ಪಾದಚಾರಿಗಳು ರಸ್ತೆ ದಾಟುವಿಕೆ ಪ್ರಮಾಣ ಜಾಸ್ತಿ ಇರುವ ಪ್ರದೇಶಗಳು ಸಹಿತ ಸೂಕ್ಷ್ಮ ಪ್ರದೇಶಗಳಲ್ಲಿ ವಾಹನಗಳ ವೇಗ ನಿಯಂತ್ರಿಸಲು ಸ್ಪೀಡ್‌ ಬ್ರೇಕರ್‌, ಬ್ಯಾರಿಕೇಡ್‌ ಅಳವಡಿಸಲಾಗುತ್ತದೆ. ಆದರಿಲ್ಲಿ ಕೆಲವೆಡೆ ಬ್ಯಾರಿಕೇಡ್‌ಗಳನ್ನು ಇರಿಸಲಾಗಿದ್ದರೂ ಅಲ್ಲಲ್ಲಿ ಪ್ರವೇಶ ದಾರಿಗಳಿರುವುದರಿಂದ ವಾಹನ ಸವಾರರಿಗೆ ಇದು ಸದಾಶಯಕ್ಕಿಂತ ಅಪಾಯಕ್ಕೆ ಹೆಚ್ಚು ಆಹ್ವಾನ ನೀಡುವಂತಿದೆ.

ಸಚಿವರ ಕಚೇರಿ ಪಕ್ಕದಲ್ಲೇ ಪ್ರವೇಶವಿಲ್ಲ ಉಳಿದೆಡೆ ಸಾಧ್ಯವಾಗಿದ್ದು ಹೇಗೆ? 
ರಾಜ್ಯ ಹೆದ್ದಾರಿ ಬೈಪಾಸ್‌ ರಸ್ತೆಯಲ್ಲಿ ಹೆದ್ದಾರಿ ಇಲಾಖೆ, ಸಾರಿಗೆ ನಿಯಂತ್ರಣದ ಯಾವುದೇ ನಿಯಮಗಳ ಪಾಲನೆ ಆಗದೆ ಪ್ರವೇಶಗಳನ್ನು ಹೊಂದಿರುವುದು ಕಂಡು ಬರುತ್ತಿದೆ. ವಿವಿಧೆಡೆ ಹೆದ್ದಾರಿ, ಸಾರಿಗೆ ನಿಯಂತ್ರಣ ಉಲ್ಲಂ ಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಹೆದ್ದಾರಿಯಲ್ಲಿ ಬಂಗ್ಲೆಗುಡ್ಡೆ ಜಂಕ್ಷನ್‌ನಿಂದ ಸ್ವಲ್ಪ ಮುಂದಕ್ಕೆ ಸಚಿವರ ವಿಕಾಸ ಕಚೇರಿಯಿದೆ. ಅಲ್ಲಿ ಕೂಡ ಪ್ರವೇಶಕ್ಕೆ ಅವಕಾಶವಿಲ್ಲದೆ ತುಸು ದೂರದಲ್ಲಿದೆ. ಹೀಗಿರುವಾಗ ಇದೇ ಹೆದ್ದಾರಿಯ ಮುಂದಿನ ಹಲವೆಡೆಗಳಲ್ಲಿ ಸಾರ್ವಜನಿಕರೇ ತಮಗೆ ಇಷ್ಟ ಬಂದಲ್ಲಿ ಪ್ರವೇಶಗಳನ್ನು ಇಲಾಖೆಯ ಅನುಮತಿ ಪಡೆಯದೆ ನಿರ್ಮಿಸಿಕೊಳ್ಳುತ್ತಿದ್ದು ಲೋಕೋಪಯೋಗಿ ಇಲಾಖೆ ಗಮನಕ್ಕೆ ಬಾರದೆ ಇದು ನಡೆಯಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಹೆದ್ದಾರಿಯಲ್ಲಿ ಪ್ರವೇಶಗಳನ್ನು ಮಾಡಿಕೊಳ್ಳುವ ಮುಂಚಿತ ಸಂಬಂಧ ಪಟ್ಟವರು ಇಲಾಖೆಯ ಅನುಮತಿ ಪಡೆದಿಲ್ಲ. ನಿಯಮ ಉಲ್ಲಂಘಿಸಿ ಈ ರೀತಿ ಪ್ರವೇಶಗಳನ್ನು ಸ್ವತಃ ನಿರ್ಮಿಸಿಕೊಂಡಲ್ಲಿ ಅದನ್ನು ಬಂದ್‌ಗೊಳಿಸಿ ಸಂಬಂಧಿಸಿದವರಿಗೆ ನೋಟಿಸ್‌ ನೀಡಲಾಗುವುದು.
-ಭುವನೇಶ್ವರ್‌, ಎಇಇ
ಲೋಕೋಪಯೋಗಿ ಇಲಾಖೆ ಕಾರ್ಕಳ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next