ಕೂಡ್ಲಿಗಿ: ತಾಲೂಕಿನ ಶಿವಪುರದಲ್ಲಿ ಅಭಿವೃದ್ಧಿ ಮರೀಚಿಕೆ ಎನ್ನುವಂತಾಗಿದೆ. ಸುರಿದ ಮಳೆಗೆ ಮನೆಗ ಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆಪಡು ವಂತಾಗಿದೆ. ಗ್ರಾಮದಲ್ಲಿ ಚರಂಡಿ ಒಡೆದು ಆಗಾಗ ಸಾರ್ವಜನಿಕ ರಸ್ತೆಗಳಲ್ಲಿ ಹರಿದು ಅಸಹ್ಯ ಹುಟ್ಟಿಸುವುದು ಈಗ ಸಾಮಾನ್ಯವಾಗಿದೆ. ಮನೆಗೆ ಮಳೆನೀರು ಬಂದರೆ ಸಾಕಷ್ಟು ನಷ್ಟ ಸಂಭವಿಸುತ್ತದೆ.
ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಮೇಲಿಂದ ಮೇಲೆ ಇಲ್ಲಿ ಸಮಸ್ಯೆ ಆಗುತ್ತಿದೆ. ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಿ, ಅತಿಕ್ರಮಣವನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿದು ಹೋಗಲು ಅವಕಾಶ ಮಾಡಿಕೊಡಬೇಕು. ಶಿವಪುರ ಗ್ರಾಮದ ದುಃಸ್ಥಿತಿಯನ್ನು ಬರೀ ಪರಿಶೀಲಿಸಿ ಹೋದರೆ ಯಾವುದೇ ಪರಿಹಾರ ದೊರಕುವುದಿಲ್ಲ.
ಸತತ ಮೂರು ತಾಸು ರಸ್ತೆ ಸಂಚಾರ ಬಂದ್ ಆಗಿತ್ತು. ಹೊಳೆಯಂತೆ ಹರಿದ ನೀರು ಮುಂದೆ ಹೋಗದೆ ಮನೆಗಳತ್ತ ನುಗ್ಗುತ್ತಿತ್ತು. ನಿಂತ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಕಾಯಿಲೆಗಳಿಗೆ ಒಳಗಾಗಗಬೇಕಾಗಿದೆ ಎಂದು ಶಿವಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈ ಸಮಸ್ಯೆ ಬಗ್ಗೆ ಅರಿವು ಇದೆ. ಈ ರಸ್ತೆಯಲ್ಲಿ ಓಡಾಡುತ್ತಿರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ರಸ್ತೆ ಮತ್ತು ನೀರು ಗೊತ್ತಾಗದೆ ಜನ ಬೀಳುವ ಸಂಭವ ಕೂಡಾ ಇದೆ. ನೀರು ಸರಾಗವಾಗಿ ಹೋಗಲು ಚರಂಡಿ ನಿರ್ಮಾಣ ಮಾಡುತ್ತಾರೆ. ಆದರೆ ಚರಂಡಿಯ ತ್ಯಾಜ್ಯ ನೀರು ರಸ್ತೆಯ ಮೇಲೆ ಬರುತ್ತದೆ. ಪಕ್ಕದಲ್ಲಿಯೇ ವಿದ್ಯುತ್ ಕಂಬಗಳು ಇವೆ. ಅವುಗಳು ಜನರ ಮೇಲೆ ಬಿದ್ದರೆ ಯಾರು ಹೊಣೆ ಎಂದು ಗುರುಮೂರ್ತಿ ಶೆಟ್ರಾ ಮತ್ತು ಸಿದ್ದಲಿಂಗಪ್ಪ ಪ್ರಶ್ನಿಸುತ್ತಾರೆ. ಒಮ್ಮೆ ಮಳೆ ಬಂದರೆ ಸಾಕು ನೀರು ನಿಂತು ಮೂರು ತಾಸು ರಸ್ತೆ ಬಂದ್ ಆಗುತ್ತದೆ. ನೀರು ಎಲ್ಲ ಹರಿದು ಹೋದ ನಂತರ ಸಂಚಾರ ಆರಂಭವಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿಯವರು ಇತ್ತ ಕಡೆ ಗಮನಹರಿಸಿ ಶೀಘ್ರದಲ್ಲಿ ಕಾಮಗಾರಿ ಕೈಗೊಂಡು ನಿವಾಸಿಗಳಲ್ಲಿ ನೆಮ್ಮದಿ ಮೂಡಿಸಬೇಕು ಎನ್ನುತ್ತಾರೆ ಸ್ಥಳೀಯರು.
ಶಿವಪುರ ಮತ್ತು ಹೊಸಹಳ್ಳಿ ಎರಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ, ತರಾತುರಿಯಲ್ಲಿ ಮಾಡಿರುವುದರಿಂದ ರಸ್ತೆ ಮೇಲೆ ಬೀಳುವ ಮಳೆ ನೀರು ನೇರವಾಗಿ ಚರಂಡಿ ಬಂದು ತುಂಬಿ ಹಳ್ಳವಾಗಿ ಮಾರ್ಪಟ್ಟು ಗ್ರಾಮದಲ್ಲಿ ವಾಸಿಸುವವರ ಮನೆಗಳಿಗೆ ಚರಂಡಿ ನೀರು ಮತ್ತು ಮಳೆಯ ನೀರು ನುಗ್ಗುತ್ತವೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿ ಇತ್ತ ಗಮನಹರಿಸಬೇಕು. –
ಗುಳಿಗಿ ವಿರೇಶ, ತಾಲೂಕು ಪಂಚಾಯಿತಿ ನಾಮನಿರ್ದೇಶಿತ ಸದಸ್ಯ