Advertisement

ಮಣ್ಣಿನ ಪದರ ತೆಳುವಾಗಿ ಪಶ್ಚಿಮ ಘಟ್ಟದಲ್ಲಿ ಭೂಕುಸಿತ

02:50 AM Aug 09, 2020 | Hari Prasad |

ಬೆಂಗಳೂರು: ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮತ್ತೆ ಮತ್ತೆ ಭೂಕುಸಿತಗಳು ಸಂಭವಿಸಲು ನಿರಂತರ ಮಳೆಯ ಜತೆಗೆ ಮಣ್ಣಿನ ಪದರ ತೆಳುವಾಗುತ್ತಿರುವುದು ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Advertisement

ಆ ಭಾಗದಲ್ಲಿ ಅವೈಜ್ಞಾನಿಕ ಅಭಿವೃದ್ಧಿ, ಭೂಮಿಯ ಬಳಕೆ ಕ್ರಮದಲ್ಲಿ ಬದಲಾವಣೆ, ಸದೃಢ ಬೇರುಗಳನ್ನು ಹೊಂದಿರುವ ಮರಗಳು ಇರುವಲ್ಲಿ ತೋಟಗಾರಿಕೆ ಬೆಳೆಯ ಮರಗಳು ತಲೆ ಎತ್ತುತ್ತಿರುವುದರಿಂದ ಭೂಕುಸಿತದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡದ ಬೆಳ್ತಂಗಡಿ, ಚಾರ್ಮಾಡಿ, ಸುಳ್ಯ, ಸಂಪಾಜೆ ಆಸುಪಾಸು, ಕೊಡಗು, ಚಿಕ್ಕಮಗಳೂರು ಸೇರಿದಂತೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪ್ರತೀ ವರ್ಷ ಭೂಕುಸಿತಕ್ಕೆ ಅನೇಕ ಕಾರಣಗಳನ್ನು ತಜ್ಞರು ಗುರುತಿಸಿದ್ದಾರೆ. ನಿರಂತರ ಮಳೆೆ, ನೈಸರ್ಗಿಕ ಅರಣ್ಯ ನಾಶ ಕಾರಣವಾಗಿದೆ.

ವರ್ಷದಿಂದ ವರ್ಷಕ್ಕೆ ಒಂದೇ ಪ್ರದೇಶದಲ್ಲಿ ಮಳೆ ಹೆಚ್ಚಾದಂತೆ ಭೂಕುಸಿತ ಆಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಪ್ರವಾಸೋದ್ಯಮ ಹೆಸರಿನಲ್ಲಿ ರೆಸಾರ್ಟ್‌ ಗಳು ತಲೆಎತ್ತುತ್ತಿವೆ. ಇದಕ್ಕೆ ಸರಕಾರ ಕಡಿವಾಣ ಹಾಕಬೇಕು ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣ ಕಾರ್ಯಪಡೆಯ ಮಾಜಿ ಅಧ್ಯಕ್ಷ ಡಾ| ಎಸ್‌. ಚಂದ್ರಶೇಖರ್‌ ಹೇಳಿದ್ದಾರೆ.

ಸಮಿತಿ ಎಚ್ಚರಿಸಿತ್ತು
2020ರ ಜೂನ್‌, ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಭಾರೀ ಮಳೆಯಾಗುವುದರಿಂದ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ. ಗುಡ್ಡ, ಬೆಟ್ಟಗಳಲ್ಲಿ ಭಾರೀ ಭೂಕುಸಿತದಿಂದ ಕೆಳಭಾಗ, ಬೆಟ್ಟದ ಮಧ್ಯೆ ವಾಸಿಸುವ ವನವಾಸಿಗಳು, ರೈತರು ಪ್ರಾಣ ಕಳೆದುಕೊಳ್ಳುವ ಎಲ್ಲ ಸಾಧ್ಯತೆಗಳು ಇವೆ. ಹೀಗಾಗಿ ನೈಸರ್ಗಿಕ ವಿಕೋಪ ಪರಿಹಾರ ಅಥವಾ ಪುನರ್‌ ವಸತಿ ಹಾಗೂ ಪೂರ್ವಭಾವಿ ಸಿದ್ಧತೆಗಳು ತುರ್ತಾಗಿ ಆಗಬೇಕು ಎಂದು ಪಶ್ಚಿಮ ಘಟ್ಟದಲ್ಲಿ ಭೂಕುಸಿತ ಮುನ್ನೆಚ್ಚರಿಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವೇ ನೇಮಿಸಿದ್ದ ಭೂಕುಸಿತ ಅಧ್ಯಯನ ಸಮಿತಿ ಜೂನ್‌ ತಿಂಗಳಲ್ಲೇ ಎಚ್ಚರಿಸಿತ್ತು.

Advertisement

ಕೊಡಗಿನಲ್ಲಿ ಯಂತ್ರಗಳನ್ನು ಬಳಸಿಕೊಂಡು ಬೆಟ್ಟಗುಡ್ಡಗಳನ್ನು ನೆಲಸಮ ಮಾಡುವುದಕ್ಕೆ ಅಂಕುಶ ಬೀಳಬೇಕು. ಒಂದು ಪ್ರದೇಶವು ತಡೆದುಕೊಳ್ಳಲು ಸಾಧ್ಯವಾಗದಷ್ಟು ದೊಡ್ಡ ಪ್ರಮಾಣದಲ್ಲಿ ಅನಧಿಕೃತ ಪ್ರವಾಸೋದ್ಯಮ ಬೆಳೆದುಬಿಟ್ಟಿದೆ. ಹೀಗಾಗಿಯೇ ಭೂ ಕುಸಿತವಾಗುತ್ತಿದೆ.
– ಅಚ್ಚಂಡಿರ ಪವನ್‌ ಪೆಮ್ಮಯ್ಯ, ಅಧ್ಯಕ್ಷ, ಕೊಡಗು ರಕ್ಷಣಾ ವೇದಿಕೆ

Advertisement

Udayavani is now on Telegram. Click here to join our channel and stay updated with the latest news.

Next