Advertisement

ಬಸ್ ನಿಲ್ದಾಣ ಆವರಣ ಗೋಡೆ ಅವೈಜ್ಞಾನಿಕ ನಿರ್ಮಾಣ

08:35 AM Jun 23, 2020 | Suhan S |

ದೇವದುರ್ಗ: ಪಟ್ಟಣದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣ ಕಾಮಗಾರಿಗೆ ಹಿಡಿದ ಗ್ರಹಣ ಆರೇಳು ವರ್ಷವಾದರೂ ಬಿಡುತ್ತಿಲ್ಲ. ಇನ್ನೊಂದೆಡೆ ಗುತ್ತಿಗೆದಾರರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದಿಲ್ಲೊಂದು ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು, ಇದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಕೋಟ್ಯಂತರ ರೂ. ವೆಚ್ಚದ ನೂತನ ಬಸ್‌ ನಿಲ್ದಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಗುತ್ತಿಗೆದಾರರು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ಆದರೂ ಉದ್ಘಾಟನೆ ಮುನ್ನವೇ ನಿಲ್ದಾಣದಲ್ಲಿ ಬಸ್‌ಗಳ ಓಡಾಟ ಆರಂಭವಾಗಿದೆ. ಇದೀಗ ಬಸ್‌ ನಿಲ್ದಾಣದ ಆವರಣ ಗೋಡೆ ನಿರ್ಮಿಸುತ್ತಿದ್ದು, ಇದು ಕಳಪೆ ಆಗಿದೆ ಎಂಬ ಅಪಸ್ವರ ಕೇಳಿಬರುತ್ತಿದೆ. ಬಸ್‌ ನಿಲ್ದಾಣ ಪಕ್ಕವೇ ರಾಜಕಾಲುವೆ ಇದ್ದು, ಇದರ ತಡೆಗೋಡೆ ಶಿಥಿಲಗೊಂಡು ಕಲ್ಲುಗಳು ಕಿತ್ತಿ ಬೀಳುತ್ತಿವೆ. ಇದರ ಮೇಲೆಯೇ ಬಸ್‌ ನಿಲ್ದಾಣದ ಆವರಣ ಗೋಡೆ ನಿರ್ಮಿಸಲಾಗುತ್ತಿದೆ.

ಪಟ್ಟಣದ ವಿವಿಧ ವಾರ್ಡ್‌ಗಳಿಂದ ನಿತ್ಯ ಹರಿದು ಬರುವ ಕೊಳಚೆ ನೀರು, ಮಳೆ ನೀರಿನ ರಭಸಕ್ಕೆ ರಾಜಕಾಲುವೆ ತಡೆಗೋಡೆ ಸಿಮೆಂಟ್‌ ಉದುರಿ, ಅಲ್ಲಲ್ಲಿ ಕಲ್ಲುಗಳಲ್ಲಿ ಬಿರುಕು ಬಿಟ್ಟಿದೆ. ಗಟ್ಟಿ ಇಲ್ಲದ ತಳಪಾಯದ ಮೇಲೆಯೇ ಗುತ್ತಿಗೆದಾರರು ಬಸ್‌ ನಿಲ್ದಾಣ ಆವರಣ ಗೋಡೆ ನಿರ್ಮಿಸುತ್ತಿದ್ದಾರೆ. ಇನ್ನು ಆವರಣ ಗೋಡೆಗೆ ಸರಿಯಾಗಿ ಕ್ಯೂರಿಂಗ್‌ ಮಾಡುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು ಅನುಮಾನಕ್ಕೆಡೆ ಮಾಡಿದೆ.

ಆರೇಳು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿರುವ ಬಸ್‌ ನಿಲ್ದಾಣ ಕಾಮಗಾರಿ ಬಗ್ಗೆ ಸ್ಥಳೀಯ ಜನಪ್ರತಿನಿಧಿ  ಗಳು ಗಮನಹರಿಸದಿರುವುದರಿಂದ ಅಧಿಕಾರಿಗಳು, ಗುತ್ತಿಗೆದಾರರು ಆಡಿದ್ದೇ ಆಟ ಎಂಬಂತಾಗಿದೆ. ಇನ್ನಾದರೂ ಸಂಬಂಧಿಸಿದ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸಬೇಕೆಂದು ಕರವೇ ತಾಲೂಕು ಅಧ್ಯಕ್ಷ ಬಸವರಾಜ ಗೋಪಾಳಪುರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next