ಹೊಸದಿಲ್ಲಿ: ಸಂಸತ್ತಿನಲ್ಲಿ ಭಾರಿ ಭದ್ರತಾ ಲೋಪದ ಬಗ್ಗೆ ಗುರುವಾರದ ಸದನದಲ್ಲಿ ಕೋಲಾಹಲಗಳು ಉಂಟಾಗಿದ್ದು “ಅಶಿಸ್ತಿನ ನಡವಳಿಕೆ” ಗಾಗಿ ಐವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಸಂಸದರಲ್ಲಿ ಡೀನ್ ಕುರಿಯಾಕೋಸ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿಎನ್ ಪ್ರತಾಪನ್ ಸೇರಿದ್ದಾರೆ. ಡಿಸೆಂಬರ್ 22 ರಂದು ಮುಕ್ತಾಯಗೊಳ್ಳಲಿರುವ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಎಲ್ಲಾ ಐವರನ್ನು ಅಮಾನತುಗೊಳಿಸಲಾಗಿದೆ.
ಪ್ರತಿಪಕ್ಷ ಸದಸ್ಯರ ವಿರುದ್ಧ ಶಿಸ್ತು ಕ್ರಮದ ಪಟ್ಟಿಗೆ ಐವರು ಕಾಂಗ್ರೆಸ್ ಸಂಸದರ ಅಮಾನತು ಸೇರ್ಪಡೆಯಾಗಿದೆ. ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ:Shahi Idgah Case:ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ-ಮಸೀದಿ ಸರ್ವೆಗೆ ಹೈಕೋರ್ಟ್ ಅಸ್ತು
“ಲೋಕಸಭಾ ಸ್ಪೀಕರ್ ಅವರು ಸಂಸತ್ತಿನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಎಲ್ಲಾ ಮಟ್ಟದ ನಾಯಕರೊಂದಿಗೆ ಸಭೆ ನಡೆಸಿದರು. ಅವರ ಪರಿಹಾರಗಳನ್ನು ಆಲಿಸಿದರು. ನೀಡಿದ ಕೆಲವು ಸಲಹೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ, ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಬಾರದು” ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.