ಕಾಶ್ಮೀರಕ್ಕೆ ಹೋಗುವ ಹಣ, ಯೋಜನೆಗಳ ಸ್ಥಿತಿಗತಿ ಹೇಗಿದೆ? ಯೋಜನೆಗಳೆಲ್ಲ ಏಕೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ? ನಿರುದ್ಯೋಗ ಸಮಸ್ಯೆಯೇಕೆ ಕಡಿಮೆಯಾಗುತ್ತಿಲ್ಲ?
ಕಾಶ್ಮೀರ ಕಣಿವೆಯಲ್ಲಿ ಮತ್ತೂಮ್ಮೆ ಉಗ್ರ ಸಂಘಟನೆಗಳು ನಮ್ಮ ಭದ್ರತಾಪಡೆಗಳ ಮೇಲೆ, ಭಾರತೀಯ ಸಾರ್ವಭೌಮತೆಯ ಮೇಲೆ ದಾಳಿಯನ್ನು ಮುಂದುವರಿಸಿವೆ. ಸೋಮವಾರ ನಡೆದ ಘಟನೆ ಇನ್ನೊಂದು ಉದಾಹರಣೆಯಷ್ಟೆ. ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ್ದರೆನ್ನಲಾದ ಮೂವರು ಉಗ್ರರು ಮತ್ತು ಭಾರತೀಯ ಭದ್ರತಾ ಪಡೆಗಳ ನಡುವೆ ಸುಮಾರು 7 ಗಂಟೆಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆಯಿತು. ಈ ಮೂವರು ಉಗ್ರರನ್ನೂ ನಮ್ಮ ಸೇನೆ ಸದೆಬಡಿದಿದೆ. ಆದರೆ ತದನಂತರ ನಡೆದ ಸ್ಫೋಟದಲ್ಲಿ ಆರು ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಎಂದಿನಂತೆ ತಕ್ಷಣ ಪಾಕಿಸ್ತಾನಿ ರಾಜಕಾರಣಿಗಳು, ಕಾಶ್ಮೀರದ ಪ್ರತ್ಯೇಕತಾವಾದಿಗಳು.. ಪೊಲೀಸರು ಮತ್ತು ಸೈನಿಕರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಂತೂ ಭಾರತೀಯ ಸೇನೆಯೇ ಈ ಬಾಂಬ್ ಇಟ್ಟದ್ದು ಎನ್ನುವ ಕಲ್ಪನೆ ಮೂಡುವಂಥ ನಕಲಿ ಚಿತ್ರಗಳನ್ನು ಹರಿಬಿಡಲಾಯಿತು. ಇದೆಲ್ಲದರ ಪರಿಣಾಮವಾಗಿ ಘಟನೆ ನಡೆದ ಕುಲಗಾಮ್ ಪ್ರದೇಶದಲ್ಲಿ ಸೇನೆ-ಪೊಲೀಸ್ ಇಲಾಖೆಯ ವಿರುದ್ಧವೇ ಪ್ರತಿಭಟನೆಗಳು ನಡೆದವು.
ಇದು ಕಾಶ್ಮೀರದ ದಿನನಿತ್ಯದ ಚಿತ್ರಣವಾಗಿಬಿಟ್ಟಿದೆ. ಪಾಕ್ ಪ್ರೇರಿತ ಉಗ್ರರು ಅಥವಾ ಪಾಕಿಸ್ತಾನಿ ಪೋಷಿತ ಪ್ರತ್ಯೇಕತಾವಾದಿಗಳಿಂದಾಗಿ ನಿತ್ಯವೂ ಸೈನಿಕರು-ಪೊಲೀಸರು ಪ್ರಾಣ ಕಳೆದುಕೊಳ್ಳುತ್ತಾರೆ. ಅಮಾಯಕ ನಾಗರಿಕರೂ ಸಾವನ್ನಪ್ಪುತ್ತಾರೆ. ಜನರು ಆಕ್ರೋಶದಿಂದ ಬೀದಿಗಿಳಿಯುತ್ತಾರೆ. ಈ ಆಕ್ರೋಶವನ್ನೇ ಆಯುಧ ಮಾಡಿಕೊಳ್ಳುವ ಪ್ರತ್ಯೇಕತಾವಾ ದಿಗಳು ಗುಂಪುಗಳಲ್ಲಿ ನುಸುಳಿ ಸೈನಿಕರ ಮೇಲೆ ಕಲ್ಲೆಸೆಯುತ್ತಾರೆ. ಮತ್ತೆ ಲಾಠಿ ಚಾರ್ಜ್, ಗಾಳಿಯಲ್ಲಿ ಗುಂಡು…ಸಾವುಗಳು…ಈ ವಿಷ ಸರಪಳಿ ನಿಲ್ಲುತ್ತಲೇ ಇಲ್ಲ. ದುರಂತವೆಂದರೆ, ಈ ಘಟನೆಗಳಿಂದಾಗಿ ರಾಜ ಕೀಯದ ಬದಲು ಮಾನವೀಯ ದೃಷ್ಟಿಯಿಂದ ನೋಡುವುದಕ್ಕೆ ಸಾಧ್ಯ ವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವುದು.
ಕಾಶ್ಮೀರದಲ್ಲಿನ ದಶಕಗಳ ಅಶಾಂತಿಯಲ್ಲಿ ಪಾಕಿಸ್ತಾನವೇ ಪ್ರಮುಖ ಪಾತ್ರಧಾರಿ ಎನ್ನುವುದು ತಿಳಿದಿರುವ ಸಂಗತಿಯೇ. ಪಾಕಿಸ್ತಾನಿ ಸರ್ಕಾರ ಮತ್ತು ಪಾಕ್ ಸೇನೆಯ ಪ್ರಮುಖ ನೀತಿಯಲ್ಲಿ ಕಾಶ್ಮೀರವೇ ಪ್ರಮುಖ ಸ್ಥಾನ ಪಡೆದುಬಿಟ್ಟಿದೆ. ಕಾಶ್ಮೀರವನ್ನು ತನ್ನದೆಂದು ವಾದಿಸುವ ಪಾಕಿಸ್ತಾನ, ಯುವಕರಿಗೆ ಧರ್ಮದ ನಶೆಯೇರಿಸಿ ಭಾರತದ ವಿರುದ್ಧ ಎತ್ತಿಕಟ್ಟುತ್ತದೆ. ಪಾಕಿಸ್ತಾನದ ಈ ಆಟದಲ್ಲಿ ದಾಳಿವಾಗಿ ಬದಲಾಗುವುದು ಹುರಿಯತ್ ಮತ್ತು ಇನ್ನಿತರೆ ಪ್ರತ್ಯೇಕತಾವಾದಿ ಗುಂಪುಗಳ ನಾಯಕರು. ಸತ್ಯವೇನೆಂದರೆ, ಇವರ ಪ್ರತ್ಯೇಕತೆಯ ಘೋಷಣೆ ಕೇವಲ ಪಾಕ್‌ನಿಂದ ಹಣ ವಸೂಲು ಮಾಡುವ ತಂತ್ರವಾಗಿ ಉಳಿದಿದೆ. ಕಾಶ್ಮೀರ ಪಾಕಿಸ್ತಾನಕ್ಕೂ ಸೇರಿದ್ದಲ್ಲ ಎಂದು ವಾದಿಸುತ್ತಾ, ಅದೇ ಉಸಿರಲ್ಲೇ ಪಾಕ್ ಸರ್ಕಾರದಿಂದ ಸಕಲೈಶ್ವರ್ಯವನ್ನೂ ಆಸ್ವಾದಿಸುತ್ತಿದ್ದಾರೆ ಈ ಪ್ರತ್ಯೇಕತಾವಾದಿ ನಾಯಕರು. ಹೀಗಾಗಿ, ಭಾರತ ಮೊದಲು ಪ್ರತ್ಯೇಕತಾವಾದಿಗಳನ್ನು ಕಟ್ಟಿಹಾಕುವ ಕೆಲಸ ಮಾಡಬೇಕಿದೆ. ಶ್ಲಾಘನೀಯ ಸಂಗತಿ ಎಂದರೆ ಮೋದಿ ಸರ್ಕಾರ ಬಂದ ನಂತರದಿಂದ ಕಾಶ್ಮೀರದಲ್ಲಿ ಕಲ್ಲು ತೂರಾಟ ಪ್ರಕರಣಗಳು ಗಣನೀಯವಾಗಿ ತಗ್ಗಿವೆ.
ಇಂದು ನಿರುದ್ಯೋಗ ಸಮಸ್ಯೆ ಕಾಶ್ಮೀರವನ್ನು ಕಾಡುತ್ತಿದೆ. ಪ್ರವಾಸೋದ್ಯಮದ ಮೇಲೆ ಬದುಕು ಕಟ್ಟಿಕೊಂಡಿರುವವರು ಕಂಗಾಲಾಗುತ್ತಿದ್ದಾರೆ. ಅಲ್ಲಿ ವಿಕಾಸದ ಚರ್ಚೆಯೇ ಇಲ್ಲ. ಕೇಂದ್ರ ಸರ್ಕಾರವೂ ಉಗ್ರ ದಮನವನ್ನೇ ಆದ್ಯತೆಯಾಗಿಸಿಕೊಂಡಿದೆ (ಇದು ಅನಿವಾರ್ಯ ಸಹ). ಹೀಗಾಗಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿ ಇರುವುದು ರಾಜ್ಯ ಸರ್ಕಾರದ ಹೆಗಲ ಮೇಲೆ.
ಕಾಶ್ಮೀರಕ್ಕೆ ಹೋಗುವ ಹಣ, ಯೋಜನೆಗಳ ಸ್ಥಿತಿಗತಿ ಹೇಗಿದೆ? ಯೋಜನೆಗಳೆಲ್ಲ ಏಕೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ? ನಿರುದ್ಯೋಗ ಸಮಸ್ಯೆಯೇಕೆ ಕಡಿಮೆಯಾಗುತ್ತಿಲ್ಲ? ಕಾಶ್ಮೀರಿ ನಾಯಕರು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರಾ ಎನ್ನುವ ಪ್ರಶ್ನೆ ಇದರಿಂದ ಹುಟ್ಟಿಕೊಳ್ಳುತ್ತದೆ. ಒಟ್ಟಲ್ಲಿ ಅತ್ತ ಪ್ರತ್ಯೇಕತಾವಾದಿಗಳು, ಉಗ್ರವಾದಿಗಳು, ಐಎಸ್‌ಐ, ಧರ್ಮಾಂಧರು ಒಂದೆಡೆ…ಮಗದೊಂದೆಡೆ ಸಮಸ್ಯೆಯ ಅರಿವಿದ್ದರೂ ಪರಿಹರಿಸದೇ ಹಾಯಾಗಿರುವ ಕಾಶ್ಮೀರಿ ರಾಜಕಾರಣಿಗಳು…ಇವೆಲ್ಲದರ ನಡುವೆ ಸಿಲುಕಿ ಸಾಮಾನ್ಯ ಜನರ ಜೀವನ ಅಧೋಗತಿಯತ್ತ ಸಾಗುತ್ತಿರುವುದು ದುರಂತ.