ಹುಮನಾಬಾದ: ಕುಡಿವ ನೀರಿನ ಸಮಸ್ಯೆ ಬಗೆಹರಿಸದ ಹಿನ್ನೆಲೆಯಲ್ಲಿ ಸೀತಾಳಗೇರಾ ಗ್ರಾಪಂ ಜೆ.ಇ ರಾಜು, ಪಿಡಿಒ ಸವಿತಾ, ಗ್ರಾಪಂ ಅಧ್ಯಕ್ಷೆ ಕಸ್ತೂರಬಾಯಿ ಸೇರಿದಂತೆ ಇತರೆ ನಾಲ್ಕು ಜನ ಸದಸ್ಯರನ್ನು ಗ್ರಾಮಸ್ಥರು ಬಸವಣ್ಣ ದೇವಸ್ಥಾನದಲ್ಲಿ ಕೂಡಿ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ.
ನಿಂಬೂರ್ ಗ್ರಾಮದಲ್ಲಿ ಕಳೆದೊಂದು ತಿಂಗಳಿಂದ ನೀರು ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಈ ಕುರಿತು ಅನೇಕ ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಹೇಳಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮದಲ್ಲಿನ ಸಮಸ್ಯೆ ಬಗೆಹರಿಯಬೇಕೆಂದು ಮಂಗಳವಾರ ಬೆಳಗ್ಗೆ ಗ್ರಾಮಸ್ಥರೆಲ್ಲ ಸೇರಿ ಸೀತಾಳಗೇರ ಗ್ರಾಪಂಗೆ ತೆರಳಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ನಿಂಬೂರ್ ಗ್ರಾಮಸ್ಥರು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆ ತಂದು ಬಸವಣ್ಣ ದೇವಸ್ಥಾನದಲ್ಲಿ ಕೂಡಿ ಹಾಕಿ ಸಮಸ್ಯೆ ಬಗೆಹರಿಸಿದ ನಂತರವೇ ಗ್ರಾಮದಿಂದ ಬಿಡುವುದಾಗಿ ಪಟ್ಟು ಹಿಡಿದಿದ್ದರು. ಘಟನೆ ಮಾಹಿತಿ ಪಡೆದ ಹಳ್ಳಿಖೇಡ (ಬಿ) ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಗ್ರಾಮಕ್ಕೆ ಭೇಟಿ ನೀಡಿದ ತಾಪಂ ಇಒ ಮುರಗೆಪ್ಪ ಜನರ ಸಮಸ್ಯೆ ಆಲಿಸಿದರು.
ಗ್ರಾಮದಲ್ಲಿ ಜೆಜೆಎಂ ಯೋಜನೆ ಕಾಮಗಾರಿ ನಡೆಯುತ್ತಿದೆ. ಪಂಚಾಯಿತಿ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿ ಕಾಮಗಾರಿ ಆರಂಭಿಸಬೇಕಿತ್ತು. ಕಾಮಗಾರಿ ಆರಂಭಗೊಂಡ ಹಿನ್ನೆಲೆಯಲ್ಲಿ ಟ್ಯಾಂಕರ್ ನೀರು ಪೂರೈಸಲಾಗಿದ್ದು, ಜನರಿಗೆ ಸೂಕ್ತವಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂದು ದೂರಿದ್ದಾರೆ.
ಅಲ್ಲದೇ ನೀರು ಸರಬರಾಜು ಮಾಡುವ ವ್ಯಕ್ತಿ ವಿರುದ್ಧವೂ ಜನರು ಆರೋಪಿಸಿದ್ದಾರೆ. ಇದೀಗ ಗ್ರಾಮದಲ್ಲಿನ ಟ್ಯಾಂಕರ್‌ಗೆ ನೀರು ತುಂಬಿಸುವ ಕೆಲಸ ಆರಂಭಗೊಂಡಿದ್ದು, ಬುಧವಾರದಿಂದ ಜನರಿಗೆ ನೀರು ಪೂರೈಕೆಯಾಗುತ್ತದೆ. ಅಲ್ಲದೇ, ಮುಂದಿನ ಒಂದು ವಾರದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ.
ಪಂಚಾಯಿತಿ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸುವಂತೆ ತಿಳಿಸಲಾಗಿದೆ ಎಂದು ತಾಪಂ ಇಒ ಮಾಹಿತಿ ನೀಡಿದ್ದಾರೆ. ನಂತರ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಸದಸ್ಯರನ್ನು ಬಿಡುಗಡೆ ಮಾಡಿ ಕಳುಹಿಸಿದ್ದಾರೆ.