Advertisement
ಭಾಷೆ ಈಗ ಬರೀ ಸಂವಹನದ ಮಾಧ್ಯಮವಾಗಿ ಉಳಿದಿಲ್ಲ. ಅದು ರಾಜಕೀಯ ಅಸ್ತ್ರವಾಗಿ, ಭಾವನೆಗಳನ್ನು ಕೆಣಕುವ ಶಸ್ತ್ರವಾಗಿಯೂ ಬಳಕೆಯಾಗುತ್ತದೆ. ಭಾಷೆಯ ಬಗ್ಗೆ ತುಸು ಹೆಚ್ಚೇ ಅಭಿಮಾನ ಇರುವ ತಮಿಳುನಾಡಿನಲ್ಲಂತೂ ಹಿಂದಿ ಎಂಬ ಶಬ್ದ ಕೇಳಿದ ಕೂಡಲೇ ಕಿಡಿ ಹೊತ್ತಿಕೊಳ್ಳುವ ವಾತಾವರಣವಿದೆ. ಈಗೀಗ ಬೆಂಗಳೂರಿನಲ್ಲೂ ಈ ಮಾದರಿಯ ಪ್ರತಿಕ್ರಿಯೆ ವ್ಯಕ್ತವಾಗುವುದನ್ನು ಕಾಣಬಹುದು.
ರಾಷ್ಟ್ರೀಯ ಭಾಷೆಯ ಅಗತ್ಯ ನಮಗಿದೆಯೇ? ಹಾಗೊಂದು ವೇಳೆ
ರಾಷ್ಟ್ರೀಯ ಭಾಷೆ ಬೇಕೆಂದರೆ ಹಿಂದಿಯೇ ಏಕೆ ಆಗಬೇಕೆಂಬ
ಪ್ರಶ್ನೆಗಳಿಗೆಲ್ಲ ಸರ್ವಸಮ್ಮತವಾದ ಉತ್ತರವನ್ನು ಕಂಡುಕೊಳ್ಳುವುದು
ಅಸಾಧ್ಯ. ಹೆಚ್ಚಿನ ರಾಜ್ಯಗಳಲ್ಲಿ ಹಿಂದಿ ಭಾಷೆ ಬಳಕೆಯಲ್ಲಿದೆ. ಹೆಚ್ಚು ಜನರು ಮಾತನಾಡುವ ಭಾಷೆಯಾಗಿರುವುದರಿಂದ ಅದನ್ನು ರಾಷ್ಟ್ರದ ಅಧಿಕೃತ ಭಾಷೆಯಾಗಿ ಪರಿಗಣಿಸಬೇಕೆಂಬ ವಾದ ಒಪ್ಪತಕ್ಕದ್ದಲ್ಲ. ಏಕೆಂದರೆ ನಮ್ಮ ರಾಜ್ಯಗಳನ್ನು ವಿಂಗಡಿಸಿದ್ದೇ ಭಾಷೆಗಳ ಆಧಾರದ ಮೇಲೆ. ಆಯಾಯ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಭಾಷೆಗೆ ಪ್ರಾಧಾನ್ಯತೆ ನೀಡಬೇಕೆಂಬ ಆಶಯವೂ ರಾಜ್ಯಗಳ ಗಡಿ ನಿರ್ಣಯಿಸುವ ನಿರ್ಧಾರದ ಹಿನ್ನೆಯಲ್ಲಿತ್ತು. ಹೀಗಿರುವಾಗ ಹಿಂದಿಯನ್ನು ಮಾತ್ರ ಎತ್ತಿ ಹಿಡಿಯುವುದು ಏಕೆ ಎಂಬ ಪ್ರಶ್ನೆಯೂ ನ್ಯಾಯ ಸಮ್ಮತವೆ. ದೇಶದಲ್ಲಿರುವ ವಿವಿಧ ಪ್ರಾದೇಶಿಕ ಭಾಷೆಗಳ ಪರಿಚಯ ಎಲ್ಲರಿಗೂ ಆಗಬೇಕೆಂಬ ಉದ್ದೇಶದಿಂದ ಶಾಲೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಲಾಗಿದೆ. ಈ ಪ್ರಕಾರ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಜತೆಗೆ ಆಧುನಿಕ ಭಾರತೀಯ ಭಾಷೆಯಾಗಿ ದಕ್ಷಿಣದ ಒಂದು ಪ್ರಾದೇಶಿಕ ಭಾಷೆಯನ್ನು ಕಲಿಸಬೇಕು. ಅದೇ ರೀತಿ ದಕ್ಷಿಣದ ರಾಜ್ಯಗಳಲ್ಲಿ ಉತ್ತರದ ಒಂದು ಭಾಷೆಯನ್ನು ಕಲಿಸಬೇಕು. ದಕ್ಷಿಣದಲ್ಲಿ ಪ್ರಾಥಮಿಕ ಹಂತದಿಂದಲೇ ಹಿಂದಿಯನ್ನು ಕಲಿಸುತ್ತಾರೆ. ಆದರೆ ಉತ್ತರ ರಾಜ್ಯಗಳಲ್ಲಿ ದಕ್ಷಿಣದ ಭಾಷೆಯನ್ನು ಕಲಿಯುವವರು ಇಲ್ಲವೇ ಇಲ್ಲ ಎಂದರೂ ಸರಿಯಾಗುತ್ತದೆ. ಸಂಸ್ಕೃತ, ಅರೇಬಿಕ್‌ನಂಥ ಭಾಷೆಗಳನ್ನಾದರೂ ಕಲಿಯುತ್ತಾರೆ. ಆದರೆ ದಕ್ಷಿಣದ ಭಾಷೆಗಳನ್ನು ಕಲಿಯುವುದಿಲ್ಲ. ತ್ರಿಭಾಷಾ ಸೂತ್ರದಡಿ ಫ್ರೆಂಚ್ ಮತ್ತು ಜರ್ಮನ್‌ನಂಥ ವಿದೇಶಿ ಭಾಷೆಗಳನ್ನು ಕಲಿಸುವ ಶಾಲೆಗಳೂ ಇವೆ. ಹೀಗಾಗಿ ಈ ಸೂತ್ರ ನಿರೀಕ್ಷಿತ ಉದ್ದೇಶವನ್ನು ಸಾಧಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ತಜ್ಞರು ವಾದಿಸುತ್ತಿದ್ದಾರೆ.
Related Articles
Advertisement
ಇನ್ನು ಹಿಂದಿಯಿಂದ ರಾಷ್ಟ್ರೀಯ ಒಗ್ಗಟ್ಟು, ಭಾವೈಕ್ಯತೆ, ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬ ವಾದದಲ್ಲಿ ಹುರುಳಿಲ್ಲ. ಹಾಗೊಂದು ವೇಳೆ ಇದು ಸಾಧ್ಯವಾಗಿದ್ದರೆ ಉತ್ತರದ ಹಿಂದಿ ಭಾಷಿಕ ರಾಜ್ಯಗಳೆಲ್ಲ ಈಗ ಅಭಿವೃದ್ಧಿಗೂ, ಭಾವೈಕ್ಯತೆಗೂ ಮಾದರಿಯಾಗಬೇಕಿತ್ತಲ್ಲ. ಈ ರಾಜ್ಯಗಳ ಪರಿಸ್ಥಿತಿ ಪ್ರಸ್ತುತ ಇದಕ್ಕೆ ತದ್ವಿರುದ್ಧವಾಗಿರಲು ಏನು ಕಾರಣ? ಹೀಗೆ ಭಾಷೆಯ ಬಗ್ಗೆ ಮಾತನಾಡಿದರೆ ಉತ್ತರಕ್ಕಿಂತಲೂ ಹೆಚ್ಚು ಪ್ರಶ್ನೆಗಳೇ ಹುಟ್ಟಿಕೊಳ್ಳುತ್ತಿವೆ. ಭಾರತದ ಮಟ್ಟಿಗೆ ಭಾಷಾ ವಿವಾದವೆನ್ನುವುದು ಪರಿಹಾರವೇ ಇಲ್ಲದ ಸಮಸ್ಯೆ.
ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬರು ದಿನಕ್ಕೆ ಒಂದರಂತೆ ಪರಭಾಷೆಯ ಶಬ್ದವನ್ನು ಕಲಿಯಬೇಕು. ಇದರಿಂದ ಹೊಸದೊಂದು ಭಾಷೆಯನ್ನು ಕಲಿಯಲು ಸಾಧ್ಯವಾಗುವುದು ಮಾತ್ರವಲ್ಲದೆ ದೇಶದ ಬಹುತ್ವವನ್ನು ಇನ್ನೂ ಉತ್ತಮವಾಗಿ ಅರಿಯಲು ಸಾಧ್ಯ ಎಂದು ಹೇಳಿದ್ದರು. ಈ ಸಲಹೆ ಪಾಲಿಸಿದರೆ ಭಾಷೆಯ ವಿವಾದ ಬಗೆಹರಿದೀತೇನೊ.