Advertisement

ಬಗೆಹರಿಯದ ಕಸ ವಿಲೇವಾರಿ ಸಮಸ್ಯೆ

08:44 PM Jan 13, 2020 | Lakshmi GovindaRaj |

ಸಕಲೇಶಪುರ: ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫ‌ಲರಾಗಿರುವ ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಪಟ್ಟಣದ ಜಾತ್ರೆ ಮೈದಾನದಲ್ಲಿರುವ ವರ್ತಕರು ಹಾಗೂ ಕಾರ್ಮಿಕರು ಅಲ್ಲಿ ತಂದು ಹಾಕುವ ಕಸದಿಂದ ನಿತ್ಯ ಮೂಗು ಮುಚ್ಚಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

Advertisement

ಪಟ್ಟಣದ ತ್ಯಾಜ್ಯವನ್ನು ಮಳಲಿ ಘನತ್ಯಾಜ್ಯ ಘಟಕದಲ್ಲೇ ವಿಲೇವಾರಿ ಮಾಡುವಂತೆ 2016ರಲ್ಲಿ ಹೈಕೋರ್ಟ್‌ ಸೂಚಿಸಿತ್ತು. ಆದರೆ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರು ಮಳಲಿ ಗ್ರಾಮದ ಘನತ್ಯಾಜ್ಯ ಘಟಕದಲ್ಲಿ ಪಟ್ಟಣದ ತ್ಯಾಜ್ಯ ವಿಲೇವಾರಿಗೆ ನಿರಂತರ ಹಸ್ತಕ್ಷೇಪ ನಡೆಸಿದ ಫ‌ಲವಾಗಿ ಪುರಸಭೆ ಅಧಿಕಾರಿಗಳು ತಮ್ಮ ಅಧಿಕಾರ ಚಲಾಯಿಸಲು ವಿಫ‌ಲರಾಗಿದ್ದರು.

ಖಾಲಿ ನಿವೇಶನದಲ್ಲಿ ಕಸ ಹಾಕಲು ವಿರೋಧ: ಪಟ್ಟಣದ ವಿವಿಧೆಡೆ ಖಾಲಿ ಇರುವ ನಿವೇಶನಗಳಲ್ಲಿ ಕಸ ವಿಲೇವಾರಿ ನಡೆಸುತ್ತಿದ್ದರು. ಖಾಲಿ ನಿವೇಶನಗಳಲ್ಲಿ ಕಸ ವಿಲೇವಾರಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಅಂತಿಮವಾಗಿ ಲಕ್ಷ್ಮೀಪುರಂ ಬಡಾವಣೆಯ ಹೇಮಾವತಿ ನದಿ ದಂಡೆಯಲ್ಲಿ ಕಸ ವಿಲೇವಾರಿ ನಡೆಸಲಾಗುತ್ತಿತ್ತು.

ಆದರೆ, ಇಲ್ಲಿ ತ್ಯಾಜ್ಯ ವಿಲೇವಾರಿ ನಡೆಸುವುದರಿಂದ ನದಿ ಕಲುಷಿತಗೊಳ್ಳುತ್ತದೆ ಎಂದು ಆರೋಪಿಸಿದ ಸಂಘಟನೆಗಳು ಪುರಸಭೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ತಾತ್ಕಾಲಿಕವಾಗಿ ಪಟ್ಟಣದ ತ್ಯಾಜ್ಯವನ್ನು ಹಾಸನದ ಅಗಿಲೆ ಘನತ್ಯಾಜ್ಯ ಘಟಕಕ್ಕೆ ಸಾಗಿಸುವ ಯೋಜನೆ ರೂಪಿಸಿದ್ದರು.

ಸಕಾಲಕ್ಕೆ ವಿಲೇವಾರಿಯಾಗದ ಕಸ: ಈ ಹಿನ್ನೆಲೆಯಲ್ಲಿ ಕಸವನ್ನು ಪಟ್ಟಣದ ಸುಭಾಷ್‌ ಮೈದಾನದ ಪಕ್ಕದ ಜಾತ್ರೆ ಮೈದಾನದಲ್ಲಿ ತಂದು ಸುರಿಯಲಾಗುತ್ತಿದ್ದು ಇಲ್ಲಿಂದ ಹಾಸನದ ಅಗಿಲೆ ಘಟಕಕ್ಕೆ ಟಿಪ್ಪರ್‌ಗಳ ಮೂಲಕ ಕಸವನ್ನು ಕಳುಹಿಸಲಾಗುತ್ತಿದೆ. ಕೆಲವೊಮ್ಮೆ ಎರಡು, ಮೂರು ದಿನಕ್ಕೊಮ್ಮೆ ಕಸ ವಿಲೇವಾರಿ ಮಾಡುವುದರಿಂದ ಇಲ್ಲಿ ಕೆಲಸ ಮಾಡುವ ವರ್ತಕರು ಹಾಗೂ ಕಾರ್ಮಿಕರು ಕಸದ ವಾಸನೆಯಿಂದ ಮೂಗು ಮುಚ್ಚಿಕೊಂಡು ಕೆಲಸ ಮಾಡಬೇಕಾಗಿದೆ.

Advertisement

ಸೊಳ್ಳೆ, ನೊಣಗಳ ಹಾವಳಿ: ಕಸದ ಸಮಸ್ಯೆ ನಿವಾರಿಸುವಂತೆ ಎರಡು ಬಾರಿ ಪ್ರತಿಭಟನೆ ಮಾಡಿದರೂ ¿ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ತಂದು ಹಾಕುತ್ತಿರುವ ಕಸದಿಂದ ಅಪಾಯಕಾರಿ ಸೊಳ್ಳೆಗಳು ಹಾಗೂ ಇನ್ನಿತರ ಕ್ರಿಮಿ ಕೀಟಗಳು ಉತ್ಪತ್ತಿಯಾಗುತ್ತಿದ್ದು, ಇದರಿಂದ ಇಲ್ಲಿನ ಗ್ಯಾರೇಜ್‌ ಲೈನ್‌ನ ಕೆಲಸಗಾರರು ಡೆಂ à ಮೊದಲಾಸ ರೋಗಗಳಿಂದ ಬಳಲುತ್ತಿದ್ದಾರೆ.

ದನಕರುಗಳು ಈ ಕಸದ ರಾಶಿಯಲ್ಲಿ ಆಹಾರ ಹುಡುಕಿಕೊಂಡು ಪ್ಲಾಸ್ಟಿಕ್‌ ತಿಂದು ಸಾವಿಗೀಡಾಗುತ್ತಿವೆ. ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಬದಲು ಇಲ್ಲಿಯ ಜನಪ್ರತಿನಿಧಿಗಳು ಅಧಿಕಾರಿಗಳು ಕಾಲ ಹರಣ ಮಾಡುತ್ತ ಪಟ್ಟಣದ ಹೃದಯ ಭಾಗದಲ್ಲಿ ಈ ರೀತಿ ಕಸವನ್ನು ತಂದು ಹಾಕುತ್ತಿರುವುದರಿಂದ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.

ಕಸದ ಸಮಸ್ಯೆ ನಿವಾರಣೆ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಅತಿ ಶೀಘ್ರದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲಾಗುತ್ತದೆ.
-ಸ್ಟೀಫ‌ನ್‌ ಪ್ರಕಾಶ್‌, ಪುರಸಭೆ ಮುಖ್ಯಾಧಿಕಾರಿ

ಪುರಸಭೆ ಅಧಿಕಾರಿಗಳು ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು.
-ಮಹಮದ್‌ ಆಲಿ, ಗ್ಯಾರೇಜ್‌ ಮಾಲೀಕ

* ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next