Advertisement
ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ 28 ಲೋಕಸಭಾ ಕ್ಷೇತ್ರಗಳಲ್ಲಿ 25 ಸ್ಥಾನಗಳಿಸಿರುವ ಬಿಜೆಪಿ, ಮೈತ್ರಿ ಪಕ್ಷಗಳ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡುತ್ತದೆ ಎಂಬ ಆತಂಕದಲ್ಲಿ ಸರ್ಕಾರ ಸಂಪುಟ ಪುನಾರಚನೆಗೆ ಕೈ ಹಾಕಿ, ನಂತರ ಬಿಜೆಪಿಗೆ ಮೊದಲ ಹೊಡೆತ ನೀಡಲು ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡಿದೆ. ಆ ಮೂಲಕ ತಕ್ಷಣಕ್ಕೆ ಇದ್ದ ಆತಂಕವನ್ನು ದೂರ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
Related Articles
Advertisement
ಬಿಜೆಪಿಗೆ ಭರವಸೆಯಾಗಿದ್ದ ಇಬ್ಬರು ಪಕ್ಷೇತರರಿಗೆ ಮಂತ್ರಿ ಸ್ಥಾನ ನೀಡಿರುವುದರಿಂದ ಮತ್ತಿಬ್ಬರು ಅತೃಪ್ತರನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ. ಅಲ್ಲದೇ ರಾಜ್ಯ ಸರ್ಕಾರ ಹಾಗೂ ಮೈತ್ರಿ ಪಕ್ಷಗಳ ನಾಯಕರ ಮೇಲೆ ಬಹುತೇಕ ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ ಇದ್ದರೂ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಿಲ್ಲ ಎನ್ನಲಾಗುತ್ತಿದೆ.
ಅಲ್ಲದೇ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಅಮರೇಗೌಡ ಬಯ್ನಾಪುರ, ಶರಣಬಸಪ್ಪ ದರ್ಶನಾಪುರರಂತಹ ಶಾಸಕರು ಸಂಪುಟದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಅಸಮಾಧಾನ ಹೊಂದಿದ್ದರೂ, ಪಕ್ಷ ತೊರೆಯಲು ಮನಸ್ಸು ಮಾಡುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ.
ಇನ್ನು ಕೆಲವು ಶಾಸಕರು ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಮತ್ತೆ ಆಯ್ಕೆಯಾಗಿ ಬರುವ ವಿಶ್ವಾಸ ಹೊಂದಿಲ್ಲ. ಅಲ್ಲದೇ ಬಿಜೆಪಿಗೆ ಯಾರನ್ನು ನಂಬಿ ಹೋಗಬೇಕು ಎನ್ನುವ ಆತಂಕವನ್ನೂ ಕೆಲವು ಶಾಸಕರು ಹೊಂದಿದ್ದಾರೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಅವರೇ ಆಪರೇಷನ್ ಕಮಲದ ನೇತೃತ್ವ ವಹಿಸಿ ಪಕ್ಷಕ್ಕೆ ಸೇರಿಸಿಕೊಂಡ ನಂತರ ಬಿಜೆಪಿ ರಾಷ್ಟ್ರೀಯ ನಾಯಕರು ಅವರನ್ನು ಕಡೆಗಣಿಸಿ ಬೇರೆ ಇನ್ಯಾರಿಗೋ ಅಧಿಕಾರ ನೀಡಿದರೆ, ಪಕ್ಷಾಂತರಿಗಳಾದವರಿಗೆ ಬಿಜೆಪಿಯಲ್ಲಿ ರಾಜಕೀಯ ಭವಿಷ್ಯ ಹೇಗಿರುತ್ತದೆ ಎಂಬ ಆತಂಕ ಕೂಡ ಕಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆಪರೇಷನ್‌ಗೆ ಬಿಜೆಪಿ ಹಿಂದೇಟು: ಬಿಜೆಪಿ ರಾಜ್ಯ ನಾಯಕರು ವಿಶೇಷವಾಗಿ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ತಕ್ಷಣವೇ ಅತೃಪ್ತರನ್ನು ಸೆಳೆದು ಮೈತ್ರಿ ಸರ್ಕಾರ ಪತನಗೊಳಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಆದರೆ, ಅದಕ್ಕೆ ಪೂರಕವಾಗಿ ಬಿಜೆಪಿಯ ರಾಷ್ಟ್ರೀಯ ನಾಯಕರು ಸ್ಪಂದಿಸುತ್ತಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಂಸತ್ ಅಧಿವೇಶನ ಆರಂಭವಾಗುವುದರಿಂದ ತಕ್ಷಣಕ್ಕೆ ಯಾವುದೇ ರೀತಿಯ ಆಪರೇಷನ್ ಕಮಲದ ಪ್ರಯತ್ನ ನಡೆಸದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ತಕ್ಷಣಕ್ಕೆ ಆಪರೇಷನ್ ಕಮಲ ಮಾಡಲು ಬಿಜೆಪಿ ರಾಷ್ಟ್ರೀಯ ನಾಯಕರ ನಿರಾಸಕ್ತಿ ಹಾಗೂ ನಿರೀಕ್ಷಿತ ಸಂಖ್ಯೆಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗದಿರುವುದರಿಂದ ಬಂಡಾಯ ನಾಯಕರು ಅಸಹಾಯಕರಾಗಿದ್ದು, ಮುಂದೇನು ಮಾಡಬೇಕೆಂಬ ಗೊಂದಲದಲ್ಲಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
* ಶಂಕರ ಪಾಗೋಜಿ