ಹಳ್ಳಿಯಲ್ಲಿ ಕೆಲಸ, ಕಾರ್ಯವಿಲ್ಲದೆ ಉಂಡಾಡಿ ಗುಂಡನಾಗಿ ತಿರುಗಿಕೊಂಡಿರುವ ನಾಯಕ (ಅಭಿ) ಒಂದು ಕಡೆ. ಅದೇ ಹಳ್ಳಿಯಲ್ಲಿ ಸಿಗರೇಟ್ ಸೇದುತ್ತಾ, ಮಧ್ಯದ ಅಮಲು ತಲೆಗೇರಿಸಿಕೊಂಡು ತಿರುಗುವ ಪೋಲಿ ಇನ್ನೊಂದು ಕಡೆ. ಅಲ್ಲಿವರೆಗೂ ಆ ಊರಿನಲ್ಲಿ ಇಬ್ಬರೂ ಕಂಡಿರದ ಶ್ರೀಮಂತ ಕುಟುಂಬದ ಸಸ್ಯಾ ಎಂಬ ಚೆಲುವೆಯೊಬ್ಬಳು ಇಬ್ಬರ ಕಣ್ಣಿಗೂ ಏಕಕಾಲಕ್ಕೆ ಬೀಳುತ್ತಾಳೆ.
ಆಕೆಯ ಕೈ ಹಿಡಿದು ಸುಂದರ ಸಂಸಾರ ಕಟ್ಟುವ ಕನಸಿನಲ್ಲಿ ನಾಯಕ ಅವಳ ಹಿಂದೆ ಬಿದ್ದರೆ, ಅದೇ ಖಳನಾಯಕ ಇವಳನ್ನು ಮದುವೆಯಾದರೆ ಲೈಫ್ ಸೆಟಲ್ ಮಾಡಿಕೊಳ್ಳಬಹುದು ಎಂಬ ಆಲೋಚನೆಯಲ್ಲಿ ಅವಳ ಹಿಂದೆ ಬೀಳುತ್ತಾನೆ. ಈ ಹಿಂಬಾಲಿಸುವ ಆಟದಲ್ಲಿ ನಾಯಕ-ಖಳನಾಯಕನ ನಡುವೆ ಒಂದಷ್ಟು ಹೊಡೆದಾಟ, ರಕ್ತಸಿಕ್ತ ಕಾದಾಟ. ಇನ್ನು ಎಷ್ಟು ಹೊತ್ತು ಈ ಗುದ್ದಾಟ ನೋಡಬೇಕು ಎಂದು ಪ್ರೇಕ್ಷಕರು ಕೈ, ಕೈ ಹಿಸುಕಿಕೊಳ್ಳುವ ಹೊತ್ತಿಗೆ, ಸೆಂಚುರಿ ಗೌಡರ ಆಗಮನವಾಗುತ್ತದೆ. ಖಳನಾಯಕ ಮರೆಯಾಗಿ ಇಡೀ ತೆರೆಯ ಮೇಲೆ ನಾಯಕನೇ ಆವರಿಸಿಕೊಳ್ಳುತ್ತಾನೆ.
ಅಲ್ಲಿಯವರೆಗೆ ನಾಯಕನಾಗಿ ಕಾಣುತ್ತಿದ್ದ ಹುಡುಗ, ನಂತರ ಖಳನಾಯಕನಂತೆ ವರ್ತಿಸಲು ಶುರು ಮಾಡುತ್ತಾನೆ. ತೆರೆಮುಂದೆ ಕೂತ ಪ್ರೇಕ್ಷಕರು “ಅಯ್ಯೋ.. ಇದೇನಾಗುತ್ತಿದೆ?’ ಅಂತ ತಲೆಕೆಡಿಸಿಕೊಳ್ಳುವ ಹೊತ್ತಲ್ಲಿ, “ಮಧ್ಯಂತರ’ ಬಂದು ಪ್ರೇಕ್ಷಕ ಕೊಂಚ ನಿರಾಳ. ಇದು “ಮೈನಸ್ ತ್ರಿ ಪ್ಲಸ್ ಒನ್’ ಚಿತ್ರದ ಫಸ್ಟ್ ಹಾಫ್ನಲ್ಲಿ ಕಾಣುವ ದೃಶ್ಯ. ಒಂದು ಸರಳ ಕಥೆಯನ್ನು ಎಷ್ಟೊಂದು ಕ್ಲಿಷ್ಟವಾಗಿ, ಅರ್ಥವಿಲ್ಲದೇ ಹೇಳಬಹುದೊ, ಅಷ್ಟನ್ನೂ ಹೇಳಿದ್ದಾರೆ ನಿರ್ದೇಶಕರು.
ಇದರ ಪರಿಣಾಮ ಎಷ್ಟರ ಮಟ್ಟಿಗಿದೆ ಎಂದರೆ, ಪ್ರೇಕ್ಷಕ ಕೆಲ ಹಂತಗಳಲ್ಲಿ ನಿರ್ದೇಶಕರಿಗೇ ಇದು ಅರ್ಥವಾಗಿಲ್ಲ ಎಂದು ಸ್ಪಷ್ಟವಾಗಿ ಹೇಳುವಷ್ಟರ ಮಟ್ಟಿಗಿದೆ! ಇನ್ನು ಚಿತ್ರದ ಟೈಟಲ್‌ಗೂ, ಚಿತ್ರದ ಕಥಾ ಹಂದರಕ್ಕೂ, ಬರುವ ಪಾತ್ರಗಳಿಗೂ ಇರುವ ಸಾಮ್ಯತೆ ಚಿತ್ರ ಮಾಡಿದವರಿಗೆ ಮಾತ್ರ ಗೊತ್ತು. ಚಿತ್ರದಲ್ಲಿ ಒಂದಕ್ಕೊಂದು ಸಂಬಂಧ, ತರ್ಕವನ್ನು ಹುಡುಕುತ್ತ ಹೋದರೆ, ಅದು ಸಿಗುವಷ್ಟರೊಳಗೆ ಚಿತ್ರವೇ ಮುಗಿದಿರುತ್ತದೆ. ಒಟ್ಟಾರೆ ಪ್ರೇಕ್ಷಕ ಇಡೀ ಚಿತ್ರದಲ್ಲಿ ತಾಳ್ಮೆ ಕಳೆದುಕೊಳ್ಳುವಂತೆ ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಎನ್ನಬಹುದು.
ಯಾವುದೇ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಅದನ್ನು ಚಿತ್ರ ಮಾಡುವ ಪ್ರಕ್ರಿಯೆಗೆ ಇಳಿದಾಗ, ಕಥೆಯಲ್ಲಿ ಬರುವ ಅನೇಕ ಚಿಕ್ಕ ಚಿಕ್ಕ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತೆರೆಮೇಲೆ ಸೆರೆಹಿಡಿಯಬೇಕು. ಹೀಗಾದಾಗ ಮಾತ್ರ ಚಿತ್ರದ ಪ್ರತಿಯೊಂದು ಸಂಗತಿಗಳೂ ನೋಡುಗರನ್ನು ಚಿತ್ರದ ಆಳಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ ಈ ಚಿತ್ರದಲ್ಲಿ ಅದ್ಯಾವುದನ್ನೂ ನಿರೀಕ್ಷಿಸುವಂತಿಲ್ಲ.
ಇನ್ನು, ಪಾತ್ರದ ಬಗ್ಗೆ ಹೇಳುವುದಾದರೆ, “ತಿಥಿ’ ಚಿತ್ರದ ನಟ ಅಭಿ, ಸೆಂಚುರಿ ಗೌಡ ಅವರ ಮ್ಯಾನರಿಸಂನಲ್ಲಿ ಯಾವುದೇ ಬದಲಾವಣೆಯಿಲ್ಲ. ಕೆಲವು ಪಾತ್ರಗಳನ್ನು ಕಥೆಗೆ ಬೇಕೆಂದೆ ತುರುಕಿದಂತೆ ಭಾಸವಾಗುತ್ತದೆ. ಇನ್ನು ಚಿತ್ರದ ನಾಯಕಿ ಸಸ್ಯಾ, ಹಿರಿಯ ನಟ ರಾಮಕೃಷ್ಣ, ಪದ್ಮಾ ವಾಸಂತಿ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಮಾಡಿದ್ದಾರೆ. ಸಂಗೀತ ನಿರ್ದೇಶಕ ಎ.ಟಿ.ರವೀಶ್ ಅವರ ಎರಡು ಹಾಡುಗಳು ಗುನುಗುವಂತಿವೆ. ಆದರೆ, ಹಾಡುಗಳ ಹಿಂದೆ ಕಾಣುವ ಭೀಕರ ದೃಶ್ಯಗಳು ನೋಡುಗರು ಎಲ್ಲವನ್ನೂ ಮರೆಯುವಂತೆ ಮಾಡಿಬಿಡುತ್ತೆ. ಛಾಯಾಗ್ರಹಣ ಬಗ್ಗೆ ಹೇಳದಿರುವುದೇ ಒಳಿತು.
ಚಿತ್ರ: ಮೈನಸ್ ತ್ರಿ ಪ್ಲಸ್ ಒನ್
ನಿರ್ಮಾಣ: ಸತ್ಯನಾರಾಯಣಚಾರ್ ಎನ್. ವಿಶ್ವಕರ್ಮ
ನಿರ್ದೇಶನ: ರಮೇಶ್ ಯಾದವ್
ತಾರಾಗಣ: ಅಭಿ, ಸೆಂಚುರಿ ಗೌಡ, ಸಸ್ಯಾ, ರಾಮಕೃಷ್ಣ, ಪದ್ಮಾ ವಾಸಂತಿ ಇತರರು.
* ಜಿ.ಎಸ್. ಕಾರ್ತಿಕ ಸುಧನ್