Advertisement

Malpe ಅನಿಯಮಿತ ವಿದ್ಯುತ್‌ ಕಡಿತ: ಕರಗುತ್ತಿದೆ ಮಂಜುಗಡ್ಡೆ ; ಮೀನುಗಾರಿಕೆಗೆ ಪೆಟ್ಟು

12:05 AM Nov 26, 2023 | Team Udayavani |

ಮಲ್ಪೆ: ರಾಜ್ಯದ ಆರ್ಥಿಕತೆಯಲ್ಲಿ ಬಹುದೊಡ್ಡ ಪಾಲು ಮೀನುಗಾರಿಕೆಗೆ ಪೂರಕವಾದ ಮಂಜುಗಡ್ಡೆ ಸ್ಥಾವರಗಳು ಇದೀಗ ವಿದ್ಯುತ್‌ ಕೊರತೆಯಿಂದಾಗಿ ನಲುಗುತ್ತಿವೆ.

Advertisement

ವಿದ್ಯುತ್‌ ಇರುವಾಗ ಗಡ್ಡೆ ಕಟ್ಟಿದ ಬ್ಲಾಕ್‌ಗಳು ವಿದ್ಯುತ್‌ ಹೋಗುತ್ತಿದ್ದಂತೆ ಕರಗುತ್ತಿವೆ. ಇದರಿಂದಾಗಿ ವಿದ್ಯುತ್‌ ಬಳಕೆಯೂ ಅಧಿಕವಾಗುತ್ತಿದೆ. ಇದೀಗ ನಿರಂತರವಾಗಿ ವಿದ್ಯುತ್‌ ಕಡಿತಗೊಳ್ಳುವುದರಿಂದ ವಿದುತ್ತನ್ನೇ ಅವಲಂಭಿಸಿರುವ ಸ್ಥಾವರಗಳಿಗೆ ತುಂಬಲಾರದ ನಷ್ಟ ಉಂಟಾಗುತ್ತಿದೆ.

ಕರಾವಳಿಯಲ್ಲಿ 160 ಘಟಕ
ಕರ್ನಾಟಕ ಕರಾವಳಿ ಯಲ್ಲಿ 160 ಮಂಜುಗಡ್ಡೆ ತಯಾರಿಕ ಘಟಕಗಳಿವೆ. ಅದರಲ್ಲಿ ಅತೀ ಹೆಚ್ಚು ಇರುವುದು ಉಡುಪಿ ಜಿಲ್ಲೆಯಲ್ಲಿ. ಉಡುಪಿಯಲ್ಲಿ 79 ಐಸ್‌ಪ್ಲಾಂಟ್‌ಗಳಿದ್ದರೆ, ದಕ್ಷಿಣ ಕನ್ನಡದಲ್ಲಿ 46 ಹಾಗೂ ಉತ್ತರ ಕನ್ನಡದಲ್ಲಿ 35 ಘಟಕಗಳಿವೆ. ಇದೀಗ ಅನಿಯಮಿತವಾಗಿ ವಿದ್ಯುತ್‌ ಕಡಿತವಾಗುವುದರಿಂದ ತಯಾರಾದ ಮಂಜುಗಡ್ಡೆಯಲ್ಲಿ ಶೇ. 50ರಷ್ಟು ಕರಗಿ ಹೋಗುತ್ತಿದೆ. ಒಂದು ಗಂಟೆ ಕರೆಂಟ್‌ ಹೋದರೆ ಮತ್ತೆ ಅದೇ ಸ್ಥಿತಿಗೆ ಪರಿವರ್ತನೆಯಾಗಲು ಮತ್ತೆ 2 ಗಂಟೆ ವಿದ್ಯುತ್‌ ಉಪಯೋಗಿಸಬೇಕಾಗುತ್ತದೆ. ಇದರಿಂದ ವಿದ್ಯುತ್‌ ಬಳಕೆ ಜಾಸ್ತಿಯಾಗುತ್ತಿದೆ.

2.75 ರೂ. ರಿಯಾಯತಿ ಬೇಕು
ಮಂಜುಗಡ್ಡೆ ಉತ್ಪಾದನೆಗೆ ಶೇ. 80ರಷ್ಟು ಬಳಕೆಯಾಗುವುದು ವಿದ್ಯುತ್‌. 2010ರಲ್ಲಿ ಪ್ರತೀ ಯುನಿಟ್‌ಗೆ 1 ರೂ. ರಿಯಾಯಿತಿ ಸಿಗುತ್ತಿದ್ದು, ಪ್ರಸ್ತುತ ವಿದ್ಯುತ್‌ ದರ ಯುನಿಟ್‌ಗೆ 7.40 ಆಗಿದೆ. ಇದೀಗ ಸರಕಾರ ಪ್ರತೀ ಯುನಿಟ್‌ಗೆ (ವರ್ಷಕ್ಕೆ ಎರಡು ಲಕ್ಷ ಯುನಿಟ್‌ ) 1.75 ರೂ. ರಿಯಾಯಿತಿ ನೀಡುತ್ತಿದ್ದು, ವಿದ್ಯುತ್‌ ದರ ಏರಿಕೆಯಾದರೂ ಅದಕ್ಕೆ ಅನುಗುಣವಾಗಿ ರಿಯಾಯಿತಿ ಧನ ಮಾತ್ರ ಕಳೆದ 5-6 ವರ್ಷದಿಂದ ಏರಿಕೆಯಾಗಿಲ್ಲ. ಈ ಬಗ್ಗೆ ಸಚಿವರಲ್ಲಿ ಮನವಿಯನ್ನು ಮಾಡಲಾಗಿದೆ. ಕನಿಷ್ಠ 2.75 ರೂ. ರಿಯಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಇಡಲಾಗಿದೆ ಎಂದು ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲಕರ ಸಂಘದ ಅಧ್ಯಕ್ಷ ರಾಜೇಂದ್ರ ಸುವರ್ಣ ಹೇಳಿದ್ದಾರೆ.

ಕೇರಳ ಮತ್ತು ಗೋವಾದಲ್ಲಿ ವಿದ್ಯುತ್‌ ಬೆಲೆ ಇಲ್ಲಿಗಿಂತ 2 ರೂ. ಕಡಿಮೆ ಇದೆ. ಅಲ್ಲಿ ರಿಯಾಯಿತಿ ಜಾಸ್ತಿ ಇರುವುದರಿಂದ ಅಲ್ಲಿನ ಐಸ್‌ ಪ್ಲಾಂಟ್‌ಗಳಿಗೆ ಕಡಿಮೆ ವೆಚ್ಚದಲ್ಲಿ ಮಂಜುಗಡ್ಡೆ ಉತ್ಪಾದನೆ ಸಾಧ್ಯವಾಗುತ್ತದೆ. ಕೇರಳ ಮತ್ತು ಗೋವಾದಲ್ಲಿ ಕಡಿಮೆ ದರಕ್ಕೆ ಮಂಜುಗಡ್ಡೆ ಸಿಗುತ್ತಿದೆ ಎನ್ನಲಾಗುತ್ತದೆ.

Advertisement

ಮೀನಿನ ದರವೂ ಇಳಿಕೆ?
ಕರ್ನಾಟಕದ ಕರಾವಳಿಯಿಂದ ಗೋವಾ, ಕೇರಳಕ್ಕೆ ಮೀನು ಸಾಗಿಸುವ ಲಾರಿಗಳು ಬರುವಾಗ ಮಂಜುಗಡ್ಡೆ ತುಂಬಿಸಿಕೊಂಡು ಬರುತ್ತವೆ. ಉಳಿದ ಬೇಡಿಕೆಯನ್ನಷ್ಟೇ ಇಲ್ಲಿಯವರು ಪೂರೈಸುತ್ತಾರೆ. ಹೀಗಿರುವಾಗ ವಿದ್ಯುತ್‌ ಕಡಿತ ಮತ್ತಷ್ಟು ಕೆಟ್ಟ ಪರಿಣಾಮ ಬೀರಿದೆ. ಮಂಜುಗಡ್ಡೆ ಕಡಿಮೆಯಾಗಿರುವುದರಿಂದ ಬೆಲೆಬಾಳುವ ಮೀನಿನ ದರವೂ ಇಳಿಯುವಂತಾಗಿದೆ.

ವಿದ್ಯುತ್‌ ಕಡಿತದಿಂದ ಮಂಜುಗಡ್ಡೆ ಘಟಕಗಳಿಗೆ ತೊಂದರೆಯಾಗಿದೆ. ಪ್ರಸ್ತುತ ಸರಕಾರ ಈಗಿರುವ ವಿದ್ಯುತ್‌ ಯುನಿಟ್‌ಗೆ 1.75 ರೂ. ರಿಯಾಯಿತಿಯನ್ನು 2.75 ರೂ. ಗೆ ಏರಿಸಬೇಕು. ಆಗ ನಷ್ಟ ಭರಿಸಲು ಸಾಧ್ಯ. ಸರಕಾರ ಈಗಾಗಲೇ ಪ್ರೋತ್ಸಾಹ ನೀಡುತ್ತಿದೆ. ಆದರೆ ಸಾಕಾಗುತ್ತಿಲ್ಲ.
-ಉದಯಕುಮಾರ್‌,
ಕಾರ್ಯದರ್ಶಿ, ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲಕರ ಸಂಘ

ಮೀನುಗಾರರು ಹಿಡಿದ ಮೀನಿಗೆ ಮಂಜುಗಡ್ಡೆ ಕ್ಲಪ್ತ ಸಮಯದಲ್ಲಿ ಪೂರೈಸದೇ ಇದ್ದರೆ ಉತ್ತಮ ದರ್ಜೆಯ ಮೀನುಗಳು ಹಾಳಾಗಿ ಮೀನಿನ ಗೊಬ್ಬರ ಕಾರ್ಖಾನೆಗೆ ಕಡಿಮೆ ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದೆ. ಮಂಜುಗಡ್ಡೆ ಕಾರ್ಖಾನೆಗಳು ಇರುವ ಪ್ರದೇಶದಲ್ಲಿ ನಿರಂತರ ವಿದ್ಯುತ್‌ ಪೂರೈಕೆ ಮಾಡಬೇಕು.
– ವಿಜಯ್‌ ಸುವರ್ಣ,
ಅಧ್ಯಕ್ಷರು, ಮಂಜುಗಡ್ಡೆ ಮಾಲಕರ ಸಂಘ, ಮಲ್ಪೆ

-ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next