ಕೊಪ್ಪಳ: ಕೆಲ ತಿಂಗಳಿಂದ ಜಿಲ್ಲಾ ಕೇಂದ್ರದಲ್ಲಿ ಸಂಚಾರಿ ನಿಯಮಗಳೇ ಪಾಲನೆಯಾಗುತ್ತಿಲ್ಲ. ಇದರಿಂದ ವಾಹನ ಸವಾರರಿಗೆ ಸಂಚಾರಿ ನಿಯಮದ ಭಯವೇ ಇಲ್ಲದಂತಾಗಿದೆ. ಯದ್ವಾ ತತ್ವಾ ವಾಹನಗಳ ಓಡಾಟಕ್ಕೂ ಬ್ರೇಕ್ ಇಲ್ಲದಂತಾಗಿದೆ. ನಗರದ ಎರಡು ವೃತ್ತಗಳಲ್ಲಿ ಸಿಗ್ನಲ್‌ಗಳು ಬಂದ್ ಆಗಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಈ ಬಗ್ಗೆ ಜಾಗೃತರಾಗಬೇಕಿದೆ.
ಹೌದು.. ಕೊಪ್ಪಳ ಜಿಲ್ಲೆ ದಿನೇ ದಿನೆ ಅಭಿವೃದ್ಧಿ ಕಾಣುತ್ತಿದೆ. ಜನದಟ್ಟಣೆಯೂ ಹೆಚ್ಚಾಗುತ್ತಿದೆ. ಈ ವೇಳೆ ಜಿಲ್ಲಾ ಪೊಲೀಸ್ ಇಲಾಖೆ ಸಂಚಾರಿ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿದೆ. ಆದರೆ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸಂಚಾರಿ ನಿಯಮ ಕೆಲವು ತಿಂಗಳಿಂದ ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದರಿಂದ ಜನತೆಗೆ ನಿಯಮದ ಭಯವೇ ಇಲ್ಲದಾಗಿದೆ.
ಈ ಹಿಂದೆ ಕೊಪ್ಪಳದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಕಾರ್ಯದಿಂದ ಸಿಗ್ನಲ್‌ಗಳಿಂದ ಸಂಚಾರಕ್ಕೆ ತೊಂದರೆಯಾಗಲಿದೆ ಎನ್ನುವ ಕಾರಣಕ್ಕೆ ಬಂದ್ ಮಾಡಲಾಗಿತ್ತು. ಪದೇ ಪದೆ ರಸ್ತೆಗಳ ದುರಸ್ತಿಯಿಂದಾಗಿ ನಿಯಮ ಪಾಲನೆಯಾಗುತ್ತಿರಲಿಲ್ಲ. ಈಗ ರಸ್ತೆ ಕಾರ್ಯ ಪೂರ್ಣಗೊಂಡಿದೆ. ಆದರೆ ನಿಯಮಗಳು ಪಾಲನೆ ಜಾರಿಯಾಗುತ್ತಿಲ್ಲ.
ಯದ್ವಾ ತದ್ವಾ ಬೈಕ್ ರೈಡ್: ಕೊಪ್ಪಳದ ಜವಾಹರ ರಸ್ತೆ, ರಾಷ್ಟ್ರೀಯ ಹೆದ್ದಾರಿ ರಸ್ತೆ ಸೇರಿದಂತೆ ಗವಿಮಠದ ರಸ್ತೆಯಲ್ಲಿ ಕೆಲ ಯುವಕರು ನಿಯಮ ಮೀರಿ ಭಾರಿ ಶಬ್ಧಗಳೊಂದಿಗೆ ಬೈಕ್‌ಗಳ ರೈಡ್ ಮಾಡುತ್ತಿದ್ದಾರೆ. ಯದ್ವಾ ತದ್ವಾ ವಾಹನಗಳ ಓಡಾಟದಿಂದಾಗಿ ಪಾದಚಾರಿಗಳು, ಇತರೆ ಬೈಕ್ ಸವಾರರು, ಮಹಿಳೆಯರು, ಶಾಲಾ-ಕಾಲೇಜು ಮಕ್ಕಳು ತುಂಬ ತೊಂದರೆ ಎದುರಿಸುತ್ತಿದ್ದಾರೆ. ಜಿಲ್ಲಾ ಸಂಚಾರಿ ಪೊಲೀಸ್ ಠಾಣೆ ಕಟ್ಟುನಿಟ್ಟಿನ ನಿಯಮ ಪಾಲನೆ ಜಾರಿ ಮಾಡುವುದು ಅಗತ್ಯವಾಗಿದೆ.
ವೃತ್ತದ ಸಿಗ್ನಲ್‌ಗಳಲ್ಲಿ ತಾಂತ್ರಿಕ ತೊಂದರೆ: ನಗರದ ಹೃದಯ ಭಾಗದಲ್ಲಿನ ಅಶೋಕ ವೃತ್ತ ಹಾಗೂ ಬಸವೇಶ್ವರ ವೃತ್ತದಲ್ಲಿನ ಸಂಚಾರಿ ಸಿಗ್ನಲ್‌ಗಳು ಕಳೆದ ಕೆಲ ತಿಂಗಳಿಂದ ಬಂದ್ ಆಗಿವೆ. ಅವುಗಳಲ್ಲಿ ತಾಂತ್ರಿಕ ಸಮಸ್ಯೆಯಿದೆ ಎಂದೆನ್ನುತ್ತಿದೆ. ಪೊಲೀಸ್ ಇಲಾಖೆ. ಅಲ್ಲದೇ, ಸಿಗ್ನಲ್ ಗಳಿಗೆ ಸೇಪ್ಟಿ ಬಾಕ್ಸ್ ಅವಶ್ಯ ಇದ್ದು, ಅವುಗಳ ಅಳವಡಿಕೆಗೆ ಸೂಕ್ತ ಸ್ಥಳವಕಾಶದ ಕೊರತೆಯಿದೆ. ರಾತ್ರಿ ವೇಳೆ ಕೆಲ ಕಿಡಿಗೇಡಿಗಳು ಓಪನ್ ಬಾಕ್ಸ್‌ಗಳನ್ನು ಕೆಡವುತ್ತಿದ್ದಾರೆ. ಹೀಗಾಗಿ ಅವುಗಳಿಗೆ ರಕ್ಷಣೆ ಇಲ್ಲದಂತಾಗುತ್ತಿದೆ. ಸಿಗ್ನಲ್ ಗಳು ಸರಿಯಾದ ಸಮಯಕ್ಕೆ ಸಿಗ್ನಲ್ ತೋರಿಸುತ್ತಿಲ್ಲ. ಕೆಲ ಸೆಕೆಂಡ್‌ಗಳಲ್ಲಿಯೂ ವ್ಯತ್ಯಾಸವಾಗಿ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಸಿಗ್ನಲ್ ಬಂದ್ ಮಾಡಿದೆ ಎಂದೆನ್ನುತ್ತಿದೆ.
ಸಿಗ್ನಲ್, ಸಿಸಿ ಟಿವಿ ಅಳವಡಿಕೆ ಅವಶ್ಯ: ಜಿಲ್ಲಾ ಕೇಂದ್ರದಲ್ಲಿ ಆಯಕಟ್ಟಿನ ಪ್ರದೇಶಗಳಲ್ಲಿ ಬೃಹದಾಕಾರದ ಸಿಗ್ನಲ್‌ಗಳು ಸೇರಿದಂತೆ ಅತ್ಯಾಧುನಿಕ ಸಿಸಿ ಕ್ಯಾಮರಾ ಅಳವಡಿಕೆ ಮಾಡುವುದು ಅವಶ್ಯಕತೆಯಿದೆ. ಮೆರವಣಿಗೆ, ರ್ಯಾಲಿ ಸೇರಿದಂತೆ ಇತರೆ ಜಾಥಾಗಳು ನಡೆದ ವೇಳೆ ಜಾಗೃತಿ ವಹಿಸಲು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಇಲಾಖೆ ನೇರ ಕಣ್ಣಿಡಬೇಕಿದೆ. ಈ ವೇಳೆ ವಿವಿಧ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡುವುದು ಅಗತ್ಯವಾಗಿದೆ. ರಾಜ್ಯದ ಹೈಟೆಕ್ ಸಿಟಿಗಳಲ್ಲಿ ಅಳವಡಿಕೆ ಮಾಡಿರುವ ಸಿಸಿ ಕ್ಯಾಮರಾ ಸೇರಿದಂತೆ ಸಿಗ್ನಲ್‌ಗಳು ಕೊಪ್ಪಳದಲ್ಲೂ ಅಳವಡಿಕೆಯಾಗಲಿ. ಸಂಚಾರಿ ನಿಯಮಗಳು ಪಾಲನೆಯಾಗಲಿ, ಜನರಲ್ಲೂ ನಿಯಮಗಳ ಪಾಲನೆ ಮಾಡುವಂತಾಗಲಿ ಎಂದು ಪ್ರಜ್ಞಾವಂತ ನಾಗರಿಕ ವಲಯ ಪೊಲೀಸ್ ಇಲಾಖೆಗೆ ಒತ್ತಾಯ ಮಾಡುತ್ತಿದೆ.
ನಗರದ ವೃತ್ತಗಳಲ್ಲಿನ ಸಿಗ್ನಲ್‌ಗಳಲ್ಲಿ ತಾಂತ್ರಿಕ ಸಮಸ್ಯೆಯಿದ್ದು, ಅವುಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಸಂಚಾರಿ ನಿಯಮಗಳ ಪಾಲನೆ ಕುರಿತಂತೆ ಈಗಾಗಲೇ ಸಂಚಾರಿ ಠಾಣೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ನಿಯಮ ಉಲ್ಲಂಘನೆ ಮಾಡಿ ಸಂಚಾರ ಮಾಡುವ ವ್ಯಕ್ತಿಗಳ ಮೇಲೆ ನಮ್ಮ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಬೇಕಾಬಿಟ್ಟಿ ರೈಡ್ ಮಾಡುವವರ ಮೇಲೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. –
ಅರುಣಾಂಗ್ಷು ಗಿರಿ, ಕೊಪ್ಪಳ ಎಸಿ
-ದತ್ತು ಕಮ್ಮಾರ