Advertisement

ಅನಗತ್ಯ ಗನ್‌ ಲೈಸೆನ್ಸ್‌ ರದ್ದು: ಐಜಿಪಿ

05:24 PM Jul 19, 2018 | |

ವಿಜಯಪುರ: ಭೀಮಾ ತೀರದ ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿರುವ ಪ್ರಕರಣದಿಂದ ಪೊಲೀಸ್‌ ಇಲಾಖೆಗೆ ತೀವ್ರ ಮುಜುಗುರವಾಗಿದೆ. ಘಟನೆಯಿಂದ ವೈಯಕ್ತಿಕವಾಗಿ ನನಗೂ ನೋವಾಗಿದೆ. ಆದರೆ ಎಲ್ಲ ರಂಗದಲ್ಲೂ ಇರುವಂತೆ ಒಳ್ಳೆಯ-ಕೆಟ್ಟ ಎಂಬುದು ಇದ್ದೇ ಇರುತ್ತದೆ. ತಪ್ಪುಯಾರೇ ಮಾಡಿದರೂ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಉತ್ತರ ವಲಯ ಐಜಿಪಿ ಅಲೋಕಕುಮಾರ ಹೇಳಿದರು.

Advertisement

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮಾ ತೀರದ ರೌಡಿಶೀಟರ್‌ ಧರ್ಮರಾಜ್‌ ಚಡಚಣ ಎನ್‌ಕೌಂಟರ್‌ ನಕಲಿ ಎಂದು ಮೃತನ ತಾಯಿ ವಿಮಲಾಬಾಯಿ ಅಧಿಕೃತವಾಗಿ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ. ದೂರು ನೀಡಿದ್ದರೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಒಂದೊಮ್ಮೆ ನಕಲಿ ಎನ್‌ಕೌಂಟರ್‌ ಎಂಬುದಕ್ಕೆ ಅಗತ್ಯ ದಾಖಲೆಗಳು ಲಭ್ಯವಾದಲ್ಲಿ ಇಲಾಖೆಯೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತದೆ ಎಂದರು.

ವಿಜಯಪುರ ಜಿಲ್ಲೆಯಲ್ಲಿ 2,300 ಗನ್‌ ಲೈಸೆನ್ಸ್‌ ನೀಡಲಾಗಿದೆ, ಭೀಮಾ ತೀರದ ಇಂಡಿ ಭಾಗದಲ್ಲಿಯೇ 1200 ಕ್ಕೂ ಹೆಚ್ಚು ಗನ್‌ ಲೈಸೆನ್ಸ್‌ ಕೊಡಲಾಗಿದೆ. ಭೀಮಾ ತೀರದಲ್ಲಿನ ಅಪರಾಧ ಕೃತ್ಯಗಳಿಗೆ ಲೈಸೆನ್ಸ್‌ ಹೊಂದಿದ ಗನ್‌ ಪ್ರಕರಣಗಳೂ ಕಾರಣವಾಗಿದೆ. ಆತ್ಮರಕ್ಷಣೆ ಹೆಸರಿನಲ್ಲಿ ಲೈಸೆನ್ಸ್‌ಗನ್‌ ಪಡೆದು, ಅವಕಾಶದ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತ ಕೃತ್ಯಗಳಿಗೆ ಕಡಿವಾಣ ಹಾಕಲು ಗನ್‌ ಲೈಸೆನ್ಸ್‌ ಯಾರಿಗೆ ಅವಶ್ಯಕತೆ ಇದೆ, ಯಾರಿಗೆ ಇಲ್ಲ ಎಂದು ಮಾಹಿತಿ ಸಂಗ್ರಹಿಸಿ, ಪಟ್ಟಿ ತಯಾರಿಸಲಾಗುತ್ತದೆ. ಅವಶ್ಯಕತೆ ಇಲ್ಲ ಎಂದು ಕಂಡು ಬದಂವರ ಗನ್‌ ಲೈಸೆನ್ಸ್‌ ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ವಿವರಿಸಿದರು.

ಭೀಮಾ ತೀರದಲ್ಲಿ 1959ರಿಂದಲೂ ರಕ್ತಸಿಕ್ತ ಅಧ್ಯಾಯಕ್ಕೆ ಬಂದೂಕು ಸಂಸ್ಕೃತಿ ಕಾಲಿಟ್ಟಿದ್ದು, ಅಪರಾಧಿಕ ಚಟುವಟಿಕೆಗಳು ಹೆಚ್ಚಲು ಅಕ್ರಮ ಪಿಸ್ತೂಲ್‌ ಬಳಕೆ ಪ್ರಮುಖ ಕಾರಣ. ಹೀಗಾಗಿ ಭವಿಷ್ಯದಲ್ಲಿ ಭೀಮಾ ತೀರದಲ್ಲಿ ರಕ್ತಸಿಕ್ತ ಅಧ್ಯಾಯಕ್ಕೆ ಶಾಶ್ವತ ಮುಕ್ತಿ ಹಾಡಲು ಪಣ ತೊಟ್ಟಿದ್ದೇವೆ. ಮುಂದಿನ ತಲೆಮಾರಿನ ಜನಾಂಗ ಅಪರಾಧ ಕೃತ್ಯಗಳಿಂದ ದೂರ ಇರಿಸಿ, ಭೀಮಾ ತೀರದ ನೆಲೆಗಳಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

ಭೀಮಾ ತೀರದ ಚಡಚಣ, ಉಮರಜ ಸೇರಿದಂತೆ ಪಟ್ಟಣ-ಹಳ್ಳಿಗಳಲ್ಲಿ ಅಪರಾಧ ಕೃತ್ಯ ತಡೆಗೆ ಜಾಗೃತಿ ಶಿಬಿರ ರೂಪಿಸಲಾಗುತ್ತಿದೆ. ಇದಕ್ಕಾಗಿ ಪ್ರಗತಿಪರ  ರ್ಯಕ್ರಮಗಳನ್ನು ಆಯೋಜಿಸಿ, ಜನ ಮಾನಸದಲ್ಲಿ ಅಪರಾಧ ಕೃತ್ಯಗಳಿಂದ ಆಗುವ ನಷ್ಟದ ಕುರಿತು ಪೊಲೀಸ್‌ ಇಲಾಖೆ ಸ್ಥಳೀಯ ಯುವ ಸಮುದಾಯಕ್ಕೆ ಮನವರಿಕೆ ಮಾಡಿಕೊಡಲಿದೆ ಎಂದರು.
 
ಇದರ ಆರಂಭದ ಭಾಗವಾಗಿ ಜು. 19ರಂದು ಉಮರಾಣಿ ಮಾತ್ರವಲ್ಲ ಚಡಚಣ, ಝಳಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾರ್ವಜನಿಕ ಜಾಗೃತಿ ಸಭೆ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುವ ಮೂಲಕ ಪೊಲೀಸ್‌ ಇಲಾಖೆಯನ್ನು ಜನಸ್ನೇಹಿ ಮಾಡಲಾಗುತ್ತದೆ ಎಂದರು. ಎಸ್ಪಿ ಪ್ರಕಾಶ ನಿಕ್ಕಂ, ಎಎಸ್‌ಪಿ ಆರ್‌. ಶಿವಕುಮಾರ, ಡಿವೈಎಸ್‌ಪಿ ಡಿ.ಅಶೋಕ ಇದ್ದರು.

Advertisement

ಹೆಲ್ಮೆಟ್‌ ಧರಿಸಲು ಅಲೋಕಕುಮಾರ ಸಲಹೆ
ವಿಜಯಪುರ: ಹೆಲ್ಮೇಟ್‌ ಇಲ್ಲದೇ ಚಾಲನೆ ಮಾಡುವುದರಿಂದ ಅಪಘಾತ ಸಂದರ್ಭದಲ್ಲಿ ಅಧಿಕ ಪ್ರಮಾಣದ ಜೀವ ಅಪಾಯವಾಗುತ್ತವೆ. ಪೊಲೀಸರ ಭಯಕ್ಕಾಗಿ, ದಂಡ ತಪ್ಪಿಸಿಕೊಳ್ಳಲು ಸಂಚಾರಿ ನಿಯಮ ಪಾಲಿಸುವ ಬದಲು ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ದ್ವಿಚಕ್ರ ಸವಾರರು ಹೆಲ್ಮೆಟ್‌, ಲಘು ವಾಹನ ಚಾಲಕರು ಸೀಟ್‌ ಬೆಲ್ಟ್ ಧರಿಸಿ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಅಲೋಕಕುಮಾರ ಸಲಹೆ ನೀಡಿದರು.

ಬುಧವಾರ ನಗರದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಆಟೋ ಚಾಲಕರಿಗೆ ಹಮ್ಮಿಕೊಂಡಿದ್ದ ಉಚಿತ ಕಣ್ಣು ತಪಾಸಣಾ ಶಿಬಿರ ಹಾಗೂ ಸಂಚಾರ ನಿಯಮಗಳ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
 
ದ್ವಿಚಕ್ರ ವಾಹನ ಅಪಘಾತಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್‌ ಇಲ್ಲದವರು ಹೆಚ್ಚಿನ ಅಪಾಯ ಎದುರಿಸಿದ್ದಾರೆ. ಅಪಘಾತ ಸಂಭವಿಸಿದಾಗ ತಲೆಗೆ ಪೆಟ್ಟು ಬಿದ್ದಾಗ ಜೀವಕ್ಕೆ ಅಪಾಯ ಹೆಚ್ಚು. ಹೀಗಾಗಿಯೇ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸುವುದು ಕಡ್ಡಾಯ ಮಾಡಲಾಗಿದೆ. ಮತ್ತೂಂದೆಡೆಕಾರು ಚಾಲಕರು ಸೀಟ್‌ ಬೆಲ್ಟ್ ಧರಿಸುವ  ಮೂಲಕ ಜೀವ ರಕ್ಷಿಸಿಕೊಳ್ಳಲು ಮುಂದಾಗಿ ಎಂದರು. ಮತ್ತೂಂದೆಡೆ ಯುವ ಸಮೂಹ ತ್ರಿಬಲ್‌ ರೈಡ್‌ ಮಾಡುವ ಕ್ರೇಜ್‌ ಹೆಚ್ಚುತ್ತಿದ್ದು, ಅಪಾಯದ ಅರಿವಿದ್ದರೂ ಕ್ರೇಜ್‌ಗಾಗಿ ನಡೆಸುವ ತ್ರಿಬಲ್‌ ರೈಡ್‌ ಹಾಗೂ ವ್ಹೀಲಿಂಗ್‌ನಿಂದ ಲೈಫ್‌ಗೆ ಬ್ರೇಕ್‌ ಹಾಕಿಕೊಳ್ಳುತ್ತಿದ್ದಾರೆ. ಹೀಗಾಗಿ ಅಪಾಯಕ್ಕೆ ಆಹ್ವಾನ ನೀಡುವ ಸಂಚಾರಿ ನಿಯಮ ವಿರೋಧಿ ಚಾಲನೆ ಮಾಡಬೇಡಿ ಎಂದು ಸಲಹೆ ನೀಡಿದರು.

ಜಿಲ್ಲಾ ಯುವ ಪರಿಷತ್‌ ಅಧ್ಯಕ್ಷ ಶರಣು ಸಬರದ, ಮಲ್ಲಿಕಾರ್ಜುನ ಭೃಂಗೀಮಠ, ಎಎಸ್‌ಪಿ ಆರ್‌. ಶಿವಕುಮಾರ ಮಾತನಾಡಿದರು. ನೇತ್ರತಜ್ಞ ಡಾ| ರಾಹುಲ್‌ ಕೆಂಭಾವಿ ನೇತೃತ್ವದಲ್ಲಿ ನೇತ್ರ ಪರೀಕ್ಷಾ ಶಿಬಿರ ನಡೆಯಿತು. ಡಿವೈಎಸ್‌ಪಿ ಡಿ.ಅಶೋಕ, ಸಿಪಿಐಗಳಾದ ಭೀಮನಗೌಡ ಬಿರಾದಾರ, ಶಂಕರಗೌಡ ಬಸನಗೌಡರ, ಆರ್‌.ಬಿ. ಚೌಧರಿ, ಸುನೀಲ ಕಾಂಬಳೆ, ಪಿಎಸ್‌ಐ ಎಂ.ಎನ್‌. ಸಿಂಧೂರ ಪಾಲ್ಗೊಂಡಿದ್ದರು. 

ಸಿಬ್ಬಂದಿ ಭರ್ತಿಗೆ ಅಗತ್ಯ ಕ್ರಮ ಬಸವನಬಾಗೇವಾಡಿ: ವಿಜಯಪುರ ಜಿಲ್ಲೆ ಪೊಲೀಸ್‌ ಇಲಾಖೆಯಲ್ಲಿ 260 ಸಿಬ್ಬಂದಿಗಳ ಕೊರತೆಯಿದ್ದು ಭರ್ತಿಗೆ ಮೇಲಾಧಿಕಾರಿಗಳಿಗೆ ಕೋರಲಾಗಿದೆ ಎಂದು ಉತ್ತರ ವಲಯದ ಐಜಿಪಿ ಅಲೋಕಕುಮಾರ ಹೇಳಿದರು.

ಪಟ್ಟಣಕ್ಕೆ ಪ್ರಥಮ ಬಾರಿ ಭೇಟಿ ನೀಡಿ ಪೊಲೀಸ್‌ ಠಾಣೆ ಆವರಣದಲ್ಲಿ ಸಸಿ ನೆಟ್ಟು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್‌ ಸಿಬ್ಬಂದಿಗೆ ವಸತಿ ಗೃಹ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮರಳು ದಂಧೆ ವ್ಯಾಪಕವಾಗಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. 

ಈ ಹಿಂದೆ ಬಸವನಬಾಗೇವಾಡಿ ತಾಲೂಕಿನಲ್ಲಿ ವಿಧಾನಸಭಾ ಚುನಾವಣೆ ಬಳಿಕ ವಿವಿ ಪ್ಯಾಟ್‌ ಪ್ರಕರಣ ರಾಜ್ಯವ್ಯಾಪಿ ಸುದ್ದಿಯಾಗಿತ್ತು. ಅದರ ಸಮಗ್ರ ತನಿಖೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮಾಡಿ ಅದರ ಸತ್ಯ ಬಯಲಿಗೆಳೆದಿದ್ದಾರೆ. ಅದು 2018ರ ವಿಧಾನಸಭಾ ಚುನಾವಣೆಯಲ್ಲಿ ಬಳಿಕೆಯಾದ ವಿವಿ ಪ್ಯಾಟ್‌ ಅಲ್ಲ. ಕೇವಲ ಬಾಕ್ಸ್‌ ಆಗಿದ್ದು ಈ ಕುರಿತು ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕೇಸ್‌ ದಾಖಲಿಸಲಾಗಿದೆ ಎಂದರು.

ಎಸ್‌ಪಿ ಪ್ರಕಾಶ ನಿಕ್ಕಂ, ಡಿವೈಎಸ್‌ಪಿ ಮಹೇಶ್ವರಗೌಡ, ಸಿಪಿಐ ಮಹಾದೇವ ಶಿರಹಟ್ಟಿ, ಮುದ್ದೇಬಿಹಾಳ ಸಿಪಿಐ ರವಿಕುಮಾರ ಕಪ್ಪತನವರ, ಬಸವನಬಾಗೇವಾಡಿ ಪಿಎಸ್‌ಐ ಶರಣಗೌಡ ಗೌಡರ, ಮನಗೂಳಿ ಪಿಎಸ್‌ಐ ಬಸವರಾಜ ಅವಟಿ ಸೇರಿದಂತೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next