Advertisement

ಬೇಡದ ವಿವಾದ: ಸುಮ್ಮನೆ ಗೂಬೆ ಕೂರಿಸೋದು ಬಿಟ್ಟುಬಿಡಿ!

09:51 AM Aug 04, 2017 | |

ಆತ ಗುರುದ್ರೋಹಿ ಎಂದರು ಗುರುಪ್ರಸಾದ್‌. ಆತ ಮುಂಚಿನ ತರಹ ಇಲ್ಲ, ಬಹಳ ದೊಡ್ಡವನಾಗಿ ಬಿಟ್ಟಿದ್ದಾನೆ ಅಂತ ಓಂಪ್ರಕಾಶ್‌ ರಾವ್‌ ಆರೋಪಿಸಿದರು. ಇನ್ನು ಧನಂಜಯ್‌ ಅದೃಷ್ಟ ಸರಿ ಇಲ್ಲ, ಆತನನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಗೆಲ್ಲುವುದಿಲ್ಲ ಎಂದು ಗಾಂಧಿನಗರದವರು ದೂರ ಇಟ್ಟರು. ಇವೆಲ್ಲಾ ಧನಂಜಯ್‌ ವಿಷಯದಲ್ಲೇ ಯಾಕಾಗುತ್ತಿದೆ ಎಂಬ ಪ್ರಶ್ನೆ ಬರಬಹುದು. ಆ ಬಗ್ಗೆ ಧನಂಜಯ್‌ ಸಹ ಯೋಚಿಸಿದ್ದಿದೆ. ಅವರ ಪ್ರಕಾರ, ಇಲ್ಲಿ ಬರೀ ನಟರಾಗಿದ್ದರಷ್ಟೇ ಸಾಲದು, ಬಿಝಿನೆಸ್‌ಮ್ಯಾನ್‌ ಸಹ ಆಗಿರಬೇಕು ಎನ್ನುತ್ತಾರೆ ಅವರು. ಅದಕ್ಕೆ ಉದಾಹರಣೆಯಾಗಿ ತಮಿಳು ನಟ ವಿಜಯ್‌ ಸೇತುಪತಿ ಅವರ ಹೆಸರು ತೆಗೆಯುತ್ತಾರೆ.

Advertisement

“ತಮಿಳಿನಲ್ಲಿ ವಿಜಯ್‌ ಸೇತುಪತಿ ಎಂಬ ನಟ ಇದ್ದಾರೆ, ಗೊತ್ತಿರಬಹುದು. ಅವರ ವೃತ್ತಿ ಜೀವನವನ್ನ ಕ್ಲೋಸ್‌ ಆಗಿ ಫಾಲೋ ಮಾಡುತ್ತಿದ್ದೀನಿ. ಅವರು ಸತತವಾಗಿ ಚಿತ್ರಗಳ ಮೇಲೆ ಚಿತ್ರ ಮಾಡುತ್ತಿದ್ದಾರೆ ಮತ್ತು ವಿಭಿನ್ನ ಪಾತ್ರಗಳನ್ನ ಮಾಡುತ್ತಿದ್ದಾರೆ. ಇಂಥದ್ದೇ ಪಾತ್ರ ಬೇಕು ಅಂತ ಕೂತಿಲ್ಲ. ಏನು ವಿಭಿನ್ನವಾಗಿ ಸಿಗುತ್ತದೋ ಅದನ್ನ ಮಾಡುತ್ತಿದ್ದಾರೆ. ಅವರು ಬರೀ ನಟನೆ ಮಾಡುತ್ತಾರೆ, ಬೇರೆ ಮಾಡಲ್ಲ. ಇಲ್ಲಿ ಬರೀ ನಟನೆ ಮಾಡಿದರೆ ಸಾಲದು ಅಂತ ನನಗೆ ಅರ್ಥವಾಗಿದೆ. ಅದಕ್ಕಿಂತ ಹೆಚ್ಚಾಗಿ ಒಬ್ಬ ಬಿಝಿನೆಸ್‌ಮ್ಯಾನ್‌ ಆಗಿರಬೇಕು ಅಂತ ನನಗೆ ಈಗೀಗ ಅನಿಸ್ತಿದೆ. ನನಗೆ ನಟನೆ ಮಾಡೋದು ಕಷ್ಟ ಅನಿಸುತ್ತಿಲ್ಲ. ಚಿಕ್ಕ ಹುಡುಗನಿಂದ ಮಾಡುತ್ತಾ ಬಂದಿದ್ದೇನೆ. ಆದರೆ, ಈಗೀಗ ವ್ಯವಹಾರದಲ್ಲಿ ಪಳಗುತ್ತಿದ್ದೀನಿ’ ಎನ್ನುತ್ತಾರೆ ಧನಂಜಯ್‌.

ಗುರುಪ್ರಸಾದ್‌ ಯಾಕೆ ಹಾಗೆಂದರು, ಓಂಪ್ರಕಾಶ್‌ ರಾವ್‌ ಯಾಕೆ ಹೀಗೆಂದರು ಮತ್ತು ಗಾಂಧಿನಗರದವರು ಏನೆಂದರು ಎಂಬ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರೋದೇ ಬೆಸ್ಟು ಎನ್ನುತ್ತಾರೆ ಧನಂಜಯ್‌. “ನಾನು ಹೇಳ್ಳೋದು ಇಷ್ಟೇ. ದೇವರು ಆಗೋಕೆ ಹೋಗಬೇಡಿ, ಮೊದಲು ಮನುಷ್ಯರಾಗಿ ಅಂತ. ಇಷ್ಟಕ್ಕೂ ನಾನು ಯಾರು? ಬದುಕು ಕಟ್ಟಿಕೊಳ್ಳೋಕೆ ಪರದಾಡುತ್ತಿರುವ ಒಬ್ಬ ನಟ. ಒಂದಿಷ್ಟು ಒಳ್ಳೆಯ ಕೆಲಸ ಮಾಡಬೇಕು, ಸಾಧಿಸಬೇಕು ಅಂತ ಬಂದಿರೋದು ನಾನು. ಇಲ್ಲಿ ಎಷ್ಟೆಲ್ಲಾ ಕಲಿಯೋದಿದೆ, ಎಷ್ಟೆಲ್ಲಾ ಕ್ರಿಯಾಶೀಲವಾಗಿ ಬದುಕೋಕೆ ಸಾಧ್ಯವಿದೆ. ಅದು ಬಿಟ್ಟು, ಯಾಕೆ ಹೀಗೆ ಮಾಡ್ತಾರೆ ಅರ್ಥವಾಗುವುದಿಲ್ಲ. ನಾನು ಏನು ಅಲ್ಲದ ಸಂದರ್ಭದಲ್ಲಿ ನನಗೆ ಮೊದಲು ಅಡ್ವಾನ್ಸ್‌ ಕೊಟ್ಟಿದ್ದು ಓಂಪ್ರಕಾಶ್‌ ರಾವ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. 

ಆ ನಂತರ ಬೇರೆ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ಬೇರೆ ಸಿನಿಮಾಗಳು ಶುರುವಾದವೇ ಹೊರತು, ಓಂಪ್ರಕಾಶ್‌ ರಾವ್‌ ಸಿನಿಮಾ ಶುರು ಮಾಡಲಿಲ್ಲ. ಅವರು ಮುಂದೂಡುತ್ತಾ ಬಂದರು. ಬಹುಶಃ ನಾನೊಂದು ಹಿಟ್‌ ಕೊಡಲಿ ಅಂತ ಕಾಯುತ್ತಿದ್ದರೇನೋ? ಕೊನೆಗೊಂದು ದಿನ ಅಡ್ವಾನ್ಸ್‌ ಬೇಕು ಎಂದರು. ಖುದ್ದು ಅವರ ಮನೆಗೆ ಹೋಗಿ ಅಡ್ವಾನ್ಸ್‌ ಕೊಟ್ಟು ಬಂದೆ. ಏಕೆಂದರೆ, ನೈತಿಕವಾಗಿ ನನ್ನ ಕಡೆಯಿಂದ ತಪ್ಪಿರಬಾರದು ಎಂಬ ಕಾರಣಕ್ಕೆ. ಇದೆಲ್ಲಾ ಮುಗಿದು ಒಂದು ವರ್ಷದ ನಂತರ ಅವರು ಯಾವ ಕಾರಣಕ್ಕೆ ಇದನ್ನು ಕೆದಕಿದರೋ ಗೊತ್ತಿಲ್ಲ. ಈ ವಿಷಯದ ಕುರಿತು ನನಗೆ ಮಾತಾಡೋಕೆ ಇಷ್ಟವಿಲ್ಲ. ಆದರೂ ಸತ್ಯ ಮತ್ತು ಸತ್ವವಿದ್ದರೆ ಹೆದರುವುದಕ್ಕೆ ಕಾರಣವಿಲ್ಲ ಎಂದು ನಂಬಿದೋನು ನಾನು. ನನ್ನಲ್ಲಿ ಸತ್ಯ ಮತ್ತು ಸತ್ವ ಎರಡೂ ಇದೆ. ಹಾಗಾಗಿ ಭಯವಿಲ್ಲ’ ಎನ್ನುತ್ತಾರೆ ಧನಂಜಯ್‌.

ಇನ್ನು ತನ್ನ ಅದೃಷ್ಟ ಚೆನ್ನಾಗಿಲ್ಲದ ಕಾರಣ ಚಿತ್ರ ಓಡುವುದಿಲ್ಲ ಎಂಬ ವಿಷಯಕ್ಕೆ ಧನಂಜಯ್‌ ನಗುತ್ತಾರೆ. “ಅದೃಷ್ಟ ಇದ್ದಿದ್ದರಿಂದಲೇ ನಾನು ಇಲ್ಲಿಯವರೆಗೂ, ಯಾವುದೇ ಗಾಡ್‌ಫಾದರ್‌ ಇಲ್ಲದೆ ಬಂದಿದ್ದೇನೆ. ಇಷ್ಟೆಲ್ಲಾ ಕೆಟ್ಟ ಅನುಭವಗಳನ್ನ ದಾಟಿ ನಿಂತಿದ್ದೇನೆ. ಜನರ ಪ್ರೀತಿ ಮತ್ತು ಅಭಿಮಾನವನ್ನ ಸಂಪಾದಿಸಿದ್ದೀನಿ. ಒಂದು ಚಿತ್ರ ಗೆಲ್ಲೋಕೆ ಹೀರೋ ಅದೃಷ್ಟ ಒಂದೇ ಕಾರಣವಲ್ಲ. ಅದಕ್ಕೆ ನೂರೆಂಟು ಕಾರಣವಿದೆ. ಇಷ್ಟಕ್ಕೂ ಚಿತ್ರ ಎಂದರೆ ನಿರ್ದೇಶಕನ ಮಾಧ್ಯಮ ಎನ್ನುತ್ತಾರಲ್ಲಾ, ಹಾಗಾದರೆ ಗೆಲ್ಲಿಸಿ ತೋರಿಸಲಿ. ಅದು ಬಿಟ್ಟು ಬೇರೆಯವರ ಮೇಲೆ ಹೊಣೆ ಹಾಕುವುದಲ್ಲ. ಒಂದು ಚಿತ್ರದ ಮೇಲೆ ಒಬ್ಬ ನಟನ ಹಿಡಿತ ಇರುವುದಿಲ್ಲ. ಒಬ್ಬ ನಿರ್ಮಾಪಕ ಹೇಗೆ ನಿರ್ದೇಶಕನನ್ನು ನಂಬಿರುತ್ತಾನೋ, ನಟ ಕೂಡಾ ಅದೇ ತರಹ ನಂಬಿರುತ್ತಾರೆ. ನಿರ್ದೇಶಕರು ತಮ್ಮ ಕೆಲಸವನ್ನು ಮಾಡುವುದು ಬಿಟ್ಟು, ಬೇರೆಯವರ ಮೇಲೆ ತಪ್ಪು ಹಾಕುವುದು ಎಷ್ಟು ಸರಿ. ದೊಡ್ಡವನಾಗಿದ್ದಾನೆ, ಅವನು ಐರನ್‌ ಲೆಗ್ಗು ಅಂತೆಲ್ಲಾ ಬೇರೆಯವರ ಮೇಲೆ ಗೂಬೆ ಕೂರಿಸುವುದು ತಪ್ಪು. ನಿಜ ಹೇಳಬೇಕೆಂದರೆ, ನಾನು ಇದುವರೆಗೂ ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೇನೆ. ಬಹಳ ಒಳ್ಳೆಯ ಅನುಭವವಾಗುವುದರ ಜೊತೆಗೆ ಕೆಟ್ಟ ಅನುಭವವೂ ಆಗಿದೆ. ಆದರೆ, ನಾನು ಇದುವರೆಗೂ ಮಾತಾಡಿಲ್ಲ. ನನಗೆ ಎಲ್ಲರ ಬಗ್ಗೆ ಗೌರವ ಇದೆ. ಯಾವತ್ತೂ ಯಾರಿಗೂ ತೊಂದರೆ ಕೊಟ್ಟಿಲ್ಲ. ಅವರು ಹೇಳಿದಂತೆ ಕೆಲಸ ಮಾಡಿ ಬಂದಿದ್ದೇನೆ. ಏನು ಕೊಟ್ಟರೋ, ಅದನ್ನು ತಗೊಂಡಿದ್ದೇನೆ. ಹಾಗಿದ್ದೂ ಕೆಲವರು ಯಾಕೆ ಗೂಬೆ ಕೂರಿಸುತ್ತಾರೋ ಗೊತ್ತಿಲ್ಲ’ ಎನ್ನುತ್ತಾರೆ ಧನಂಜಯ್‌.

Advertisement

ಧನಂಜಯ್‌ ಹೇಳುವಂತೆ ಕಲಾವಿದರನ್ನು ಹಾಳು ಮಾಡುವುದೇ ಈ ವ್ಯವಸ್ಥೆಯಂತೆ. “ಪ್ರತಿಯೊಬ್ಬ ಕಲಾವಿದನೂ ಚಿತ್ರರಂಗಕ್ಕೆ ಬರುವುದು ಡಾ. ರಾಜಕುಮಾರ್‌ ಆಗಬೇಕು, ವಿಷ್ಣುವರ್ಧನ್‌, ಶಂಕರ್‌ ನಾಗ್‌, ರಜನಿಕಾಂತ್‌ ತರಹ ಆಗಬೇಕು ಅಂತಲೇ  ಚಿತ್ರರಂಗಕ್ಕೆ ಬರುತ್ತಾರೆ. ಮುಗ್ಧವಾಗಿರುವವರು ಸಹ ಕೊನೆಗೊಮ್ಮೆ ಆ್ಯಟಿಟ್ಯೂಡ್‌ ಜಾಸ್ತಿ ಇದೆ ಎಂಬ ಆರೋಪ ಹೊರಬೇಕಾಗುತ್ತದೆ. ಕಲಾವಿದರ ಮುಗ್ಧತೆಯನ್ನು ಸಾಯಿಸುವುದೇ ಈ ವ್ಯವಸ್ಥೆ. ಇಲ್ಲಿರುವವರೇ ಅವನು ಹಾಗಂತೆ, ಹೀಗಂತೆ ಅಂತ ಹೇಳಿ ಬೇರೆ ತರಹ ಪ್ರೊಜೆಕ್ಟ್ ಮಾಡುತ್ತಾರೆ. ನಮ್ಮತನವನ್ನು ಕಳೆದುಕೊಳ್ಳಬಾರದು ಅಂತ ಪ್ರತಿ ದಿನ ಒದ್ದಾಡುವಂತಹ ಪರಿಸ್ಥಿತಿ ಬರುತ್ತದೆ. ಇದು ನನ್ನೊಬ್ಬನ ಕಥೆಯಲ್ಲ. ಪ್ರತಿಯೊಬ್ಬ ಕಲಾವಿದನ ಕಥೆಯೂ ಹೌದು. ಈಗ ನನ್ನದೇ ಉದಾಹರಣೆ ತೆಗೆದುಕೊಂಡರೆ, ಓಂಪ್ರಕಾಶ್‌ ರಾವ್‌ ಅವರು ಮುಗಿದು ಹೋದ ವಿಚಾರವೊಂದನ್ನು ಒಂದು ವರ್ಷದ ನಂತರ ಯಾಕೆ ತೆಗೆದರು. ಅವರ ತಪ್ಪನ್ನು ಮುಚ್ಚಿಕೊಳ್ಳೋಕೆ ಹಾಗೆ ಮಾಡಿದರಾ? ಅವರಿಗೆ ಅದರಿಂದ ಏನಾದರೂ ಖುಷಿ ಸಿಗುತ್ತದಾ? ಗೊತ್ತಿಲ್ಲ. ಅದರಿಂದ ಅವರ ಸಮಸ್ಯೆಗಳೇನಾದರೂ ಬಗೆಹರಿಯುತ್ತೆ ಅನ್ನೋದಾದರೆ ಮಾತಾಡಲಿ. ಅದರಿಂದ ಏನೂ ಆಗುವುದಿಲ್ಲ. ಅದು ಎರಡು ದಿನದ ಪ್ರಚಾರ ಅಷ್ಟೇ. ಒಂದೊಳ್ಳೆಯ ಕೃತಿ ಕೊಡುವ ಶಕ್ತಿ ಇರುವವರು ಯಾಕೆ ಹಾಗೆ ಮಾಡಬೇಕು. ನನಗೆ ಆ ಭಯ ಇಲ್ಲ. ನನ್ನ ಚಿತ್ರಗಳು ಸೋತಿರಬಹುದು. ಆದರೆ, ಒಳ್ಳೆಯ ಕೃತಿ ಕೊಟ್ಟಿರುವ ಸಂತೋಷವಿದೆ. ಮುಂದೆಯೂ ಕೊಡುತ್ತೀನಿ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಧನಂಜಯ್‌.

ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next