ಲಕ್ನೋ : ಉನ್ನಾವೋ ಗ್ಯಾಂಗ್ ರೇಪ್ ಕೇಸ್ ನಲ್ಲಿ ಕ್ಲೀನ್ ಚಿಟ್ ಪಡೆಯಲು ಒಂದು ಕೋಟಿ ರೂ. ಕೊಡಬೇಕು ಎಂದು ಜೈಲು ಪಾಲಾಗಿರುವ ಬಂಗರಮಾವು ಕ್ಷೇತ್ರದ ರೇಪ್ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ನ ಪತ್ನಿ ಸಂಗೀತಾ ಅವರಲ್ಲಿ ಬೇಡಿಕೆ ಮಂಡಿಸಿದ್ದ ಇಬ್ಬರು ನಕಲಿ ಸಿಬಿಐ ಅಧಿಕಾರಿ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೇಪ್ ಆರೋಪಿ ಬಿಜೆಪಿ ಶಾಸಕ ಸೆಂಗರ್ ಅವರನ್ನು ಪ್ರಕೃತ ಸೀತಾಪುರ ಜೈಲಿನಲ್ಲಿ ಇರಿಸಲಾಗಿದೆ.
ತಾವು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಶಾಸಕ ಸೆಂಗರ್ ಪತ್ನಿ ಸಂಗೀತಾ ಅವರಿಂದ 1 ಕೋಟಿ ರೂ. ಕೇಳಿದ್ದ ಇಬ್ಬರು ಬಂಧಿತ ವ್ಯಕ್ತಿಗಳನ್ನು ಗೋಸಾಯಿಗಂಜ್‌ನ ಆಲೋಕ್ ದ್ವಿವೇದಿ ಮತ್ತು ಆತನ ಸಹವರ್ತಿಯಾಗಿರುವ ದೇವರಿಯಾ ನಿವಾಸಿ ವಿಜಯ ರಾವತ್ ಎಂದು ಗುರುತಿಸಲಾಗಿದೆ.
ರೇಪ್ ಆರೋಪಿ ಬಿಜೆಪಿ ಶಾಸಕ ಸೆಂಗರ್‌ನ ಪತ್ನಿ ಸಂಗೀತಾ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದು, ‘ಇಬ್ಬರು ವ್ಯಕ್ತಿಗಳು ತಾವು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ನನ್ನ ಪತಿಗೆ ರೇಪ್ ಕೇಸ್‌ನಲ್ಲಿ ಕ್ಲೀನ್ ಚಿಟ್ ದೊರಕಿಸಿಕೊಡಲು 1 ಕೋಟಿ ರೂ. ಕೊಡಬೇಕೆಂದು ಕೇಳಿದ್ದಾರೆ’ ಎಂಬುದಾಗಿ ಮೊನ್ನೆ ಬುಧವಾರ ದೂರು ನೀಡಿದ್ದರು ಎಂದು ಗಾಜಿಪುರ ಎಸ್‌ಎಚ್‌ಓ ಸುಜೀತ್ ಕುಮಾರ್ ರಾಯ್ ಹೇಳಿದ್ದಾರೆ.
ಸಂಗೀತಾ ಅವರ ದೂರಿನ ಆಧಾರದಲ್ಲಿ ಮಾಹಿತಿ ಕಲೆಹಾಕಿ ನಕಲಿ ಸಿಬಿಐ ಅಧಿಕಾರಿಗಳನ್ನು ನಾವು ಬಂಧಿಸಿದೆವು ಎಂದು ಎಸ್‌ಎಚ್‌ಓ ರಾಯ್ ತಿಳಿಸಿದ್ದಾರೆ.
ಬಂಧಿತ “ನಕಲಿ ಸಿಬಿಐ ಅಧಿಕಾರಿ’ ದ್ವಿವೇದಿಯನ್ನು ಪ್ರಶ್ನಿಸಿದಾಗ ಆತ “ನಾನು ಅವಧ್ ವಿವಿಯ ವಿಜ್ಞಾನ ಪದವೀಧರ. ಬ್ರೈಟ್ ಸ್ಟೂಡೆಂಟ್ ಆಗಿದ್ದೆ; ಆದರೆ ನನಗೆ ಯಾವುದೇ ಉದ್ಯೋಗ ಸಿಗಲಿಲ್ಲ. ಶಾಸಕ ಸೆಂಗರ್ ಸಿರಿವಂತ ಕುಟುಂಬದವರೆಂದು ಭಾವಿಸಿದ್ದೆ. ಹಾಗಾಗಿ ಅವರಿಂದ ಕೋಟಿಗೂ ಕಡಿಮೆ ಇಲ್ಲದ ಹಣವನ್ನು ಸುಲಿಗೆ ಮಾಡಬಹುದು ಎಂದು ಲೆಕ್ಕಾಚಾರ ಹಾಕಿದ್ದೆ; ಆ ಪ್ರಕಾರ ನಾನು ಸೆಂಗರ್ ಪತ್ನಿ ಸಂಗೀತಾ ಅವರಿಗೆ ಕರೆ ಮಾಡಿ ನಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡೆ. ಮೇ 5ರಂದು ನಾನು ಆಕೆಗೆ ಮೊದಲ ಕರೆ ಮಾಡಿದೆ; ಅನಂತರ ಪುನಃ ಮೇ 6ರಂದು ಎರಡನೇ ಕರೆ ಮಾಡಿದೆ’ ಎಂದು ಬಾಯಿಬಿಟ್ಟಿದ್ದಾನೆ ಎಂದು ಎಸ್‌ಎಚ್‌ಓ ರಾಯ್ ಹೇಳಿದರು.