ನವದೆಹಲಿ: ನಿರೀಕ್ಷೆ ನಿಜವಾಗಿದೆ. ಶುಕ್ರವಾರವಷ್ಟೇ ಭಾರತೀಯ ಕ್ರಿಕೆಟಿಗೆ ಗುಡ್‌ಬೈ ಹೇಳಿದ, ಅಂಡರ್-19 ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ಉನ್ಮುಕ್ತ್ ಚಂದ್ ಅಮೆರಿಕದಲ್ಲಿ ಆಡುವುದು ಅಧಿಕೃತವಾಗಿ ದೃಢಪಟ್ಟಿದೆ. ಅವರು 2021ರ ಮೈನರ್ ಲೀಗ್ ಕ್ರಿಕೆಟ್‌ನಲ್ಲಿ (ಎಂಎಲ್‌ಸಿ) ಸಿಲಿಕಾನ್ ವ್ಯಾಲಿ ಸ್ಟ್ರೈಕರ್ ತಂಡದ ಪರ ಆಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಇದಕ್ಕೂ ಮಿಗಿಲಾದ ವಿಶೇಷವೆಂದರೆ, ಶನಿವಾರ ರಾತ್ರಿಯೇ ಉನ್ಮುಕ್ತ್ ಚಂದ್ ಮೊದಲ ಪಂದ್ಯ ಆಡಲಿಳಿದದ್ದು!ಮಾರ್ಗನ್ ಹಿಲ್ ಔಟ್‌ಡೋರ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಈ ಮುಖಾಮುಖೀಯಲ್ಲಿ ಅವರ ತಂಡ ಸೋಕಲ್ ಲ್ಯಾಶಿಂಗ್ಸ್ ವಿರುದ್ಧ ಆಡಿತು.
ಇದನ್ನೂ ಓದಿ:ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ 9, 10 , ಪಿಯುಸಿ ತರಗತಿ ಪ್ರಾರಂಭ
ರಾಷ್ಟ್ರೀಯ ಟಿ20 ಲೀಗ್:
ಟೊಯೋಟಾ ಮೈನರ್ ಲೀಗ್ ಕ್ರಿಕೆಟ್ ಚಾಂಪಿಯನ್‌ಶಿಪ್ ಅಮೆರಿಕದ ರಾಷ್ಟ್ರೀಯ ಟಿ20 ಪಂದ್ಯಾವಳಿಯಾಗಿದ್ದು, ಕಳೆದ ಬೇಸಗೆಯಲ್ಲಿ ಆರಂಭಗೊಂಡಿತ್ತು. ಅಮೆರಿಕದ 27 ನಗರಗಳ ತಂಡಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ. 26 ತಾಣಗಳಲ್ಲಿ 200ಕ್ಕೂ ಹೆಚ್ಚು ಪಂದ್ಯಗಳು ನಡೆಯಲಿವೆ. 400ಕ್ಕೂ ಅಧಿಕ ಆಟಗಾರರು ಇದರಲ್ಲಿ ಆಡಲಿದ್ದಾರೆ.
ಮುಂದೆ ಚಂದ್ ಸ್ಯಾನ್ ಫ್ರಾನ್ಸಿಸ್ಕೊ ಬೇ ಏರಿಯಾದಲ್ಲಿ ವಾಸ್ತವ್ಯ ಹೂಡಲಿದ್ದು, ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್‌ನೊಂದಿಗೆ ಬಹು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಅಮೆರಿಕದ ನೂತನ ಪೀಳಿಗೆಗೆ ಕ್ರಿಕೆಟ್ ಪ್ರೀತಿ ಹುಟ್ಟುವಂತೆ ಮಾಡುವುದು ಈ ಲೀಗ್‌ನ ಉದ್ದೇಶ.