Advertisement

ಶ್ರೀಕಾಂತ್‌ : ಹೊಸ ಮಗ್ಗುಲಿನ ಹರಿಕಾರ

12:11 PM Nov 04, 2017 | |

ಬ್ಯಾಡ್ಮಿಂಟನ್‌ನ ಪ್ರತಿಷ್ಠಿತ ಸೂಪರ್‌ ಸೀರೀಸ್‌ ಟೂರ್ನಿಗಳಲ್ಲಿ ಫ್ರೆಂಚ್‌ ಓಪನ್‌ ಹಾಗೂ ಡೆನ್ಮಾರ್ಕ್‌ ಓಪನ್‌ಗಳನ್ನು ಒಂದರ ಹಿಂದೊಂದರಂತೆ ಗೆದ್ದು ಹೈದರಾಬಾದ್‌ನ ಶಂಶದಾಬಾದ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಭಾರತದ ಅಪೂರ್ವ ಪ್ರತಿಭೆ ಕಿಡಂಬಿ ಶ್ರೀಕಾಂತ್‌ರನ್ನು ತಬ್ಬಿಕೊಳ್ಳಲು ಅಭಿಮಾನಿಗಳು ಎದುರಾಗಲಿಲ್ಲ. ಆಟೋಗ್ರಾಫ್ಗಾಗಿ ಯಾರೂ ದುಂಬಾಲು ಬೀಳಲಿಲ್ಲ. ಸೆಲ್ಫಿಗಾಗಿ ಯಾವ ತರುಣಿಯೂ ಪ್ಲೀಸ್‌ ಎಂದಿದ್ದೂ ಕಾಣಲಿಲ್ಲ. ತೀರಾ ಹತ್ತಿರದ ಸ್ನೇಹಿತರು, ಬಂಧು ಬಾಂಧವರು ಮತ್ತು ಅಪ್ಪ ಅಮ್ಮ ಮಾತ್ರ ಅಲ್ಲಿದ್ದರು. ವರ್ಷದಲ್ಲಿ ನಾಲ್ಕು ಸೂಪರ್‌ ಸೀರೀಸ್‌ ಪ್ರಶಸ್ತಿಗಳನ್ನು ಪಡೆದ ಬ್ಯಾಡ್ಮಿಂಟನ್‌ ಆಟಗಾರನನ್ನು ಏರ್‌ಪೋರ್ಟ್‌ನಲ್ಲಿ ಕೆಲವರು ಗುರ್ತಿಸುವಲ್ಲಿಯೂ ವಿಫ‌ಲರಾದರು. ಹೌದು, ಭಾರತದಲ್ಲಿ ಮಾತ್ರ ಹೀಗಾಗುತ್ತೆ, ಕ್ರಿಕೆಟ್‌ ಮೋಡಿಯಲ್ಲಿ ಇತರ ಆಟಗಾರರನ್ನು ಗುರ್ತಿಸುವುದು ಸ್ವಲ್ಪ ತಡವಾಗುತ್ತದೆ. ಇದೇ ಆಟದ ಸೈನಾ ನೆಹ್ವಾಲ್‌, ಪಿ.ಎ.ಸಿಂಧು ತಾರೆಯರಾಗಿ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ. ಶ್ರೀಕಾಂತ್‌ರನ್ನು ನಾವು ವಿಸ್ತ್ರತವಾಗಿ ಪರಿಚಯಿಸಬೇಕು. ಆತನ ಸಾಧನೆಗೆ ಅಭಿಮಾನ ಪಡಬೇಕು. ಆಗ ನೋಡಿ…

Advertisement

 ಖುದ್ದು ಶ್ರೀಕಾಂತ್‌ ಇದನ್ನೇ ಹೇಳುತ್ತಾರೆ. ಚಾಂಪಿಯನ್‌ ಸ್ವಾಗತ ಸಿಗದಿರುವುದಕ್ಕೆ ಹಲವು ಕಾರಣಗಳಿರುತ್ತವೆ. ಆಗಮನದ ಮಾಹಿತಿ ಸಿಕ್ಕಿಲ್ಲದಿರುವುದು, ತೀರಾ ಬೆಳಗಿನ ಜಾವ ಬಂದಿಳಿದಿದ್ದಿರಬಹುದು. ಅಷ್ಟಕ್ಕೂ ಆಟ ಮತ್ತು ಆಟಗಾರ ಒಂದೇಟಿಗೆ ಅಭಿಮಾನಿಗಳನ್ನು ಸೆಳೆಯುವುದಿಲ್ಲ. ಇದಕ್ಕೆ ಸಮಯ ಬೇಕಾಗುತ್ತದೆ. ಇಂದು ಪ್ರಕಾಶ್‌ ಪಡುಕೋಣೆ, ಅಪರ್ಣಾ ಪೊಪಟ್‌ರಿಂದ ಗೋಪಿಚಂದ್‌, ಸೈನಾ, ಸಿಂಧುವರೆಗೆ ತಾರಾಪಟ್ಟ ಪಡೆದ ಪ್ರಕ್ರಿಯೆ ನಿಧಾನ. ಕಾಯುವುದರಲ್ಲಿಯೇ ಜಾಣ್ಮೆಯಿದೆ!

 ಇನ್ನೂ ಶ್ರೀಕಾಂತ್‌ ಅಪರಿಚಿತ!
 ಏಕೋ ಗೊತ್ತಿಲ್ಲ, ಶ್ರೀಕಾಂತ್‌ರ ಈ ಸ್ಪಷ್ಟನೆಯ ನಂತರವೂ ಅವರಿಗೆ ಸಿಗಬೇಕಾದ ಮಾನ್ಯತೆಯನ್ನು ಭಾರತೀಯ ಕ್ರೀಡಾಕ್ಷೇತ್ರ ನೀಡಿಲ್ಲ ಎಂದೇ ಹೇಳಬೇಕು. 2011ರ ಕಾಮನ್‌ವೆಲ್ತ್‌ ಯೂತ್‌ ಗೇಮ್ಸ್‌ನ ಮಿಕ್ಸೆಡ್‌ ಡಬಲ್ಸ್‌ನಲ್ಲಿನ ಬೆಳ್ಳಿ, ಡಬಲ್ಸ್‌ನಲ್ಲಿ ಕಂಚಿನ ಪದಕದ ಮೂಲಕ ಗಮನ ಸೆಳೆದ ಶ್ರೀಕಾಂತ್‌ 2013ರ ಥಾಯ್ಲೆಂಡ್‌ ಓಪನ್‌ ಗ್ರಾಂಡ್‌ ಫಿಕ್ಸ್‌ ಗೋಲ್ಡ್‌ ಟೂರ್ನಮೆಂಟ್‌ನಲ್ಲಿ ಅವತ್ತಿನ ವಿಶ್ವದ ನಂ.8 ಹಾಗೂ ಪ್ರಶಸ್ತಿಯ ಫೇವರಿಟ್‌ ಆಗಿದ್ದ ಬೊನ್ಸಾಕ್‌ ಪೊನ್ಸಾನಾ ಅವರನ್ನು ಮಣಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆವತ್ತು ಕ್ರೀಡಾ ಜಗತ್ತು ಶ್ರೀಕಾಂತ್‌ ಅವರನ್ನು ಅಚ್ಚರಿಯಿಂದ ನೋಡಿತ್ತು. ಅದೇ ವರ್ಷ ಒಲಂಪಿಯನ್‌ ಪಾರುಪಳ್ಳಿ ಕಶ್ಯಪ್‌ರನ್ನು ಮಣಿಸಿ ರಾಷ್ಟ್ರೀಯ ಪ್ರಶಸ್ತಿ ಪಡೆದರೂ ಪುಟ್ಟ ಅನುಮಾನ ಉಳಿದಿತ್ತು. 2014ರಲ್ಲಿ ಒಲಂಪಿಕ್‌ ಚಾಂಪಿಯನ್‌ ಲಿನ್‌ ಡಾನ್‌ ಅವರನ್ನು ಅವರದೇ ನಾಡಿನ ಚೈನಾ ಓಪನ್‌ ಸೂಪರ್‌ ಸೀರೀಸ್‌ ಪ್ರೀಮಿಯರ್‌ನಲ್ಲಿ ಪರಾಭವಗೊಳಿಸಿದ ನಂತರವೂ ಅವರ ಪ್ರತಿಭೆಯ ಬಗ್ಗೆ ಶಂಕೆೆ ಉಳಿದಿದ್ದರೆ “ಛೆ ಎಂದು ಅನುಮಾನ ಪಡುವವರ ಮೇಲಷ್ಟೇ ಹೇಳಬಹುದು!

ಭಾರತೀಯ ಬ್ಯಾಡ್ಮಿಂಟನ್‌ನ ಪರ್ವ ಕಾಲವಿದು. 2017ರಲ್ಲಂತೂ ಹಿಂದಿನ ಶ್ರಮಗಳು ಫ‌ಲ ಕೊಡುತ್ತಿವೆ. ಸ್ವತಃ ಶ್ರೀಕಾಂತ್‌ ಆಸ್ಟ್ರೇಲಿಯನ್‌ ಓಪನ್‌, ಇಂಡೋನೇಷ್ಯಾ ಓಪನ್‌, ಡೆನ್ಮಾರ್ಕ್‌ ಓಪನ್‌ ಹಾಗೂ ಫ್ರೆಂಚ್‌ ಓಪನ್‌ ಗೆದ್ದಿದ್ದಾರೆ. ಈ ರೀತಿ ನಾಲ್ಕು ಸೂಪರ್‌ ಸೀರೀಸ್‌ ಪ್ರಶಸ್ತಿ ಗೆದ್ದ ಇನ್ನೊಬ್ಬ ಭಾರತೀಯನಿಲ್ಲ. ಇದರ ಜೊತೆಗೆ ಶ್ರೀಕಾಂತ್‌ ಚೈನಾ ಓಪನ್‌, ಇಂಡಿಯಾ ಓಪನ್‌ ಕೂಡ ಗೆದ್ದಿದ್ದಾರೆ. ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌, ಸ್ವಿಸ್‌ ಓಪನ್‌, ಥಾಯ್ಲೆಂಡ್‌ ಓಪನ್‌ ಎಂಬಂತಹ ಮೂರು ಗ್ರಾಂಡ್‌ ಫಿಕ್ಸ್‌ ಗೋಲ್ಡ್‌ ಟೂರ್ನಿಗಳಲ್ಲೂ ಜಯಭೇರಿ ಬಾರಿಸಿದ್ದಾರೆ. ವರ್ಷಾರಂಭದಲ್ಲಿ 15ನೇ ಶ್ರೇಯಾಂಕದಲ್ಲಿದ್ದವರು ಈಗ ವಿಶ್ವದ ದ್ವಿತೀಯ ಕ್ರಮಾಂಕಿತ! ಅಗ್ರ ಪಟ್ಟದ ಕನಸಿಗೆ ಅವರದು ಸಿದ್ಧ ಉತ್ತರ. ಪ್ರಶಸ್ತಿಗಳನ್ನು ಗೆಲ್ಲುವುದತ್ತ ಗಮನ ಹರಿಸಿದರೆ ಅಗ್ರ ಪಟ್ಟ ತಾನಾಗಿಯೇ ಹಿಂಬಾಲಿಸಿಕೊಂಡು ಬರುತ್ತದೆ…

ಆಕ್ರಮಣವೇ ಬತ್ತಳಿಕೆ ಅಸ್ತ್ರ!
ಗೋಪಿಚಂದ್‌ ಅಕಾಡೆಮಿಯ ಪ್ರತಿಷ್ಠಿತ ವಿದ್ಯಾರ್ಥಿ 24 ವರ್ಷದ ಶ್ರೀಕಾಂತ್‌ರ ಆಟದ ಬಗ್ಗೆ ಅವರ ಹಿರಿಯ ಆಟಗಾರರ ವಿಶ್ಲೇಷಣೆ ಒಂದು ಸ್ಪಷ್ಟ ಚಿತ್ರಣ ನೀಡುತ್ತದೆ. ಅಪರ್ಣಾ ಪೊಪಟ್‌ ಗಮನಿಸಿದಂತೆ, ಶ್ರೀಕಾಂತ್‌ ಈ ಹಿಂದೆ ಡಬಲ್ಸ್‌ಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು ಅವರ ಸ್ಮ್ಯಾಷ್‌ಗಳ ಪ್ರಖರತೆಯನ್ನು ಹೆಚ್ಚಿಸಿದೆ. ಹೇಳಿ ಕೇಳಿ ಶ್ರೀಕಾಂತ್‌ರ ಆಟವೇ ಆಕ್ರಮಣಕಾರಿ. ಡೆನ್ಮಾರ್ಕ್‌ ಓಪನ್‌ ನೆನಪಿಸಿಕೊಳ್ಳಿ, ಎದುರಾಳಿ ಆರಡಿ ನಾಲ್ಕಿಂಚು ಎತ್ತರದ ವಿಕ್ಟರ್‌ ಅಕ್ಸೆಲ್‌ಸನ್‌. ಈ ದೈತ್ಯನ ಎದುರು ಮೊದಲ ಸೆಟ್‌ನ್ನು ಶ್ರೀಕಾಂತ್‌ 21-14ರಲ್ಲಿ ಸೋತಾಗ ಒಂದು ಅಭಿಪ್ರಾಯ ಮೂಡಿತ್ತು, ಇದು ಬೇಗ ಮುಗಿಯುವ ಪಂದ್ಯ! ಬಳಿಕ ಗೇರ್‌ ಬದಲಿಸಿದ ಶ್ರೀಕಾಂತ್‌ ನೆಟ್‌ ಬಳಿ ತಮ್ಮ ಬತ್ತಳಿಕೆಯ ಸ್ಮ್ಯಾಷ್‌ಗಳನ್ನು ಸಿಡಿಸತೊಡಗಿದಾಗ ಎರಡನೇ ಗೇಮ್‌ ಸ್ಕೋರ್‌ 22-20. ಮೂರನೇ ಗೇಮ್‌ನಲ್ಲೂ ವಿಕ್ಟರ್‌ 21-7ರಿಂದ ಶರಣಾದರು!

Advertisement

 ಭಾರತೀಯರಲ್ಲಿ ಇತ್ತೀಚಿನ ದಿನಗಳಲ್ಲಿ ಕಿಲ್ಲರ್‌ ಇನ್ಸ್‌ಸ್ಟಿಂಕ್ಟ್ ಚಿಗುರಿದೆ. ಕ್ರಿಕೆಟಿಗರಿಗೆ ಐಪಿಎಲ್‌ ಚುಚ್ಚುಮದ್ದು ಕಾರಣವಿರಬಹುದು. ಇತರ ಆಟದಲ್ಲಿ ಅಕಾಡೆಮಿಗಳ ಕೋಚ್‌ಗಳು ಗೆಲ್ಲುವ ನಂಬಿಕೆಯನ್ನು ಮೊದಲು ತುಂಬುತ್ತಿರುವುದಿರಬಹುದು. ಶ್ರೀಕಾಂತ್‌ ಯಾವ ಸಿಗ್ಗೂ ಇಲ್ಲದೆ, ಚೀನಾದ ಪ್ರಾಬಲ್ಯದ ಕಾಲ ಮುಗಿಯಿತು ಕಣ್ರೀ. ಲೀ ಚಾಂಗ್‌ ವೀ, ಚೆನ್‌ ಲಾಂಗ್‌, ಲಿನ್‌ ಡಾನ್‌ರನ್ನೂ ನಾವು ಸೋಲಿಸಬಲ್ಲೆವು ಎಂಬ ಅಭಿಮತ ವ್ಯಕ್ತಪಡಿಸುತ್ತಿರುವುದು ಅವರಲ್ಲಿ ದಟ್ಟವಾಗಿರುವ ಆತ್ಮವಿಶ್ವಾಸಕ್ಕೆ ಸಾಕ್ಷಿ. ಅದಿದ್ದರೆ ಅರ್ಧ ಪಂದ್ಯ ಗೆದ್ದಂತೆ!

 ಇದೆಲ್ಲದರ ನಡುವೆ ಶ್ರೀಕಾಂತ್‌ ಗಮನಿಸಬೇಕಾದ ಅಂಶಗಳು ಇವೆ. ಅವರ ಆಟ ಇನ್ನೂ ನಿಧಾನ ಗತಿಯ ಅಂಕಣಗಳಿಗೆ ಹೊಂದುವಂತಿಲ್ಲ. ಗಾಳಿಯಲ್ಲಿ ಹಾರಾಡುವ ಷಟಲ್‌ಗ‌ೂ ಅಂಕಣದ ಗುಣಮಟ್ಟಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಮೂಡಬಹುದಾದರೂ ಕೆಲವು ಸ್ಟೇಡಿಯಂಗಳ ಆಂತರಿಕ ವಾತಾವರಣದಲ್ಲಿ ಕಾದು ನೋಡುವ ಆಟ ಆಡಬೇಕಾಗುತ್ತದೆ. ಇದನ್ನು ಸೋನ್‌ ವಾನ್‌ ಹೋ ಶ್ರೀಕಾಂತರನ್ನು ಕೆಡುಗಿ ದೃಢಪಡಿಸಿದ್ದಾರೆ. ಚೈನಾದ ಎಡಗೈ ಆಟಗಾರ ಟಿಯಾನ್‌ ಹುವಾಯ್‌ ಇವತ್ತಿಗೂ ಶ್ರೀಕಾಂತ್‌ಗೆ ಕಬ್ಬಿಣದ ಕಡಲೆ.

-ಮಾ.ವೆಂ.ಸ.ಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next