Advertisement

ಅಭಿವೃದ್ಧಿ ಕಾಣದ ಮಾಂಜಾ ಸೇತುವೆ, ಸಂಪರ್ಕ ಕಡಿತದ ಭೀತಿ

01:00 AM Mar 06, 2019 | Harsha Rao |

ಅಜೆಕಾರು: ಮರ್ಣೆ ಗ್ರಾಮ ಪಂಚಾಯತ್‌ ಹಾಗೂ ಕಡ್ತಲ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸಂಪರ್ಕ ಕಲ್ಪಿಸುವ ಮಾಂಜಾ ಸೇತುವೆಯ ತಡೆಗೋಡೆ ಹಾಗೂ ಆಧಾರ ಸ್ತಂಭ ಕಳೆದ ಮಳೆಗಾಲ ಪ್ರಾರಂಭದಲ್ಲಿಯೇ ಕುಸಿದಿದ್ದರೂ ಇನ್ನೂ ದುರಸ್ತಿ ನಡೆಸಿಲ್ಲ.  

Advertisement

ಬಿರುಕು ಬಿಟ್ಟ ಆಧಾರ ಸ್ತಂಭ 
ಅಜೆಕಾರು ಕೈಕಂಬ ಮಾರ್ಗವಾಗಿ ಕುಕ್ಕುಜೆಯ ಮೂಡಬೆಟ್ಟು ದೊಂಡೇರಂಗಡಿ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ಈ ಸೇತುವೆಯು ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ.

ದಶಕಗಳ ಹಿಂದಷ್ಟೇ ನಿರ್ಮಾಣವಾದ ಈ ಸೇತುವೆಯ ನಡುವಿನ ಆಧಾರ ಸ್ತಂಭವು ಬಿರುಕು ಬಿಟ್ಟಿದೆ. ಕಳೆದ ವರ್ಷ ಇದಕ್ಕೆ ತೇಪೆ ಹಾಕಲಾಗಿತ್ತು. ಬಳಿಕ ಭಾರೀ ಮಳೆಯ ಸಂದರ್ಭ ಸೇತುವೆಯ ಒಂದು ಪಾರ್ಶ್ವದ ತಡೆಗೋಡೆ ಕುಸಿದು ಆಧಾರ ಸ್ತಂಭವು ಮತ್ತೆ ಬಿರುಕು ಬಿಟ್ಟಿತ್ತು. ಇದೀಗ ಆಧಾರ ಸ್ತಂಭದ ಕಬ್ಬಿಣದ ಸಲಾಕೆಗಳು ಹೊರಗೆ ಕಾಣುತ್ತಿವೆ.
ಕುಕ್ಕುಜೆ ಮೂಡಬೆಟ್ಟು ಪರಿಸರದ ಜನತೆ ಅಜೆಕಾರು, ಕಾರ್ಕಳ ಪೇಟೆಯನ್ನು ದಿನನಿತ್ಯದ ವ್ಯವಹಾರಕ್ಕಾಗಿ ಅವಲಂಭಿಸಿದ್ದು ಈ ಸೇತುವೆಯ ಮೂಲಕವೇ ನಿತ್ಯ ಸಂಚರಿಸುತ್ತಾರೆ. ಅಲ್ಲದೆ ಈ ಭಾಗದ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಇದೇ ಮಾರ್ಗವನ್ನು ಅವಲಂಬಿಸಿದ್ದು. ಸೇತುವೆ ಕುಸಿದರೆ ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದ್ದಾರೆ. ಮುಂದಿನ ಮಳೆಗಾಲದ ಒಳಗಡೆ ತಡೆಗೋಡೆ ದುರಸ್ತಿಯಾಗದಿದ್ದರೆ, ಸೇತುವೆ ಸಂಪೂರ್ಣನೀರು ಪಾಲಾಗಲಿದೆ. ಹಿಂದಿನ ಹಳೆ ಸೇತುವೆಯೂ ಮಳೆಗಾಲದಲ್ಲಿ ಕೊಚ್ಚಿಹೋಗಿ ಈ ಭಾಗದ ಜನತೆ ಹಲವು ವರ್ಷ ಸಂಚಾರಕ್ಕೆ ತೊಂದರೆ ಅನುಭವಿಸಬೇಕಾಗಿತ್ತು. ಪ್ರತಿಭಟನೆ, ಹೋರಾಟ ಬಳಿಕ ಈಗಿನ ಸೇತುವೆ ನಿರ್ಮಾಣವಾಗಿತ್ತು.   

ತುರ್ತು ದುರಸ್ತಿ ನಡೆಸಿ
ಮೂಡಬೆಟ್ಟು ಭಾಗದ ನೂರಾರು ನಿವಾಸಿಗಳಿಗೆ ಸೇತುವೆ ಸಂಪರ್ಕಕ್ಕೆ ಪ್ರಮುಖವಾಗಿದೆ. ಮಳೆಗಾಲದ ಒಳಗೆ ಕುಸಿದಿರುವ ಸೇತುವೆಯ ತಡೆಗೋಡೆ ಪುನರ್‌ ನಿರ್ಮಿಸಿ ಸ್ಥಳೀಯರಿಗೆ ಸಮಸ್ಯೆಯಾಗದಂತೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಬೇಕಿದೆ.
-ರಾಘವ ಕುಕ್ಕುಜೆ, ಸ್ಥಳೀಯರು

– ಜಗದಿಶ್‌ರಾವ್‌ ಅಂಡಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next