Advertisement
ಡಿಆರ್‌ಡಿಒ ಮಹತ್ವಾಕಾಂಕ್ಷಿ ಯೋಜನೆ ಮಾನವ ರಹಿತ ಏರ್‌ಕ್ರಾಫ್ಟ್ ‘ರುಸ್ತುಮ್-2’ ಬೆನ್ನಲ್ಲೇ, ಅದೇ ಮಾದರಿಯಲ್ಲಿ ಮತ್ತೂಂದು ಮಾನವ ರಹಿತ ಯುದ್ಧವಿಮಾನ ಅಭಿವೃದ್ಧಿ ಪಡಿಸಲು ಸಿದ್ಧತೆ ನಡೆಸಿದೆ. ಅಂದುಕೊಂಡರೆ ಎಲ್ಲವೂ ನಡೆದರೆ 2020ರಿಂದ ಇದರ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2023ಕ್ಕೆ ಪರೀಕ್ಷಾ ಪ್ರಯೋಗ ನಡೆಸುವ ಗುರಿ ಹೊಂದಿದೆ.
Related Articles
Advertisement
ಮಾನವ ರಹಿತ ಯುದ್ಧ ವಿಮಾನ ತಯಾರಿಕೆ ಕಾರ್ಯದಲ್ಲಿ 200 ವಿಜ್ಞಾನಿಗಳು ಮತ್ತು ತಂತ್ರಜ್ಞರು ತೊಡಗಿಸಿಕೊಳ್ಳಲಿದ್ದು, ಅಮೆರಿಕ ಸೇರಿ ಇತರೆ ರಾಷ್ಟ್ರಗಳು ನಿರ್ಮಿಸಿರುವ ಮಾನವ ರಹಿತ ಯುದ್ಧ ವಿಮಾನಗಳಿಗಿಂತ ವಿಭಿನ್ನ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಯುದ್ಧ ವಿಮಾನ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಇದು 24 ಗಂಟೆಗಳ ಕಾಲ ನಭದಲ್ಲಿ ತಿರುಗಾಟ ನಡೆಸಲಿದ್ದು, ಕಂಟ್ರೋಲ್ ರೂಮ್ ಮೂಲಕ ಯುದ್ಧ ವಿಮಾನ ನಿರ್ವಹಣೆ ನಡೆಯಲಿದೆ.
ಎಚ್ಎಎಲ್, ಬಿಇಎಲ್ ಸಹಕಾರ: ಮಾನವ ರಹಿತ ಯುದ್ಧ ವಿಮಾನವನ್ನು ತಯಾರಿಸಲು ಡಿಆರ್‌ಡಿಒ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಎಚ್ಎಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನ ಸಹಕಾರ ಪಡೆಯಲಿದ್ದು, ಯುದ್ಧ ವಿಮಾನ ತಯಾರಿಕೆಗೆ ಬೇಕಾದ ಅಗತ್ಯ ಮೂಲ ಸೌಕರ್ಯ ಸಂಗ್ರಹಣೆಯಲ್ಲಿ ಡಿಆರ್‌ಡಿಒ ನಿರತವಾಗಿದೆ. ಆರಂಭಿಕವಾಗಿ ನಾಲ್ಕು ಮಾನವ ರಹಿತ ಯುದ್ಧ ವಿಮಾನ ಅಭಿವೃದ್ಧಿ ಪಡಿಸಲು ನಿರ್ಧರಿಸಿದೆ.
ಏನೆಲ್ಲ ವಿಶೇಷತೆ ಒಳಗೊಂಡಿದೆ ಮಾನವ ರಹಿತ ಯುದ್ಧ ವಿಮಾನ?: ಡಿಆರ್‌ಡಿಒ ನಿರ್ಮಿಸಲು ಉದ್ದೇಶಿಸಿರುವ ಮಾನವ ರಹಿತ ಯುದ್ಧ ವಿಮಾನದಲ್ಲಿ ಅತ್ಯಾಧುನಿಕ ಎಲೆಕ್ಟ್ರೋ ಆಪ್ಟಿಕ್ ಕ್ಯಾಮೆರಾ ಅಳವಡಿಸಲಿದ್ದು, ಇದು 5 ಕಿ.ಮೀ. ಎತ್ತರ ಮತ್ತು 40 ಕಿ.ಮೀ. ದೂರದ ವಸ್ತುವನ್ನು ಕಂಡು ಹಿಡಿಯುವ ಸಾಮರ್ಥ್ಯ ಹೊಂದಿದೆ. ನೆರೆ ರಾಷ್ಟ್ರಗಳ ಅನುಮಾನಾಸ್ಪದ ಡ್ರೋನ್, ವಿಮಾನಗಳು ಗಡಿ ದಾಟಿ ಬಂದರೆ, ತಕ್ಷಣವೇ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಲಿದೆ ಹಾಗೂ ನಭದಲ್ಲಿಯೇ ಹೊಡೆದುರುಳಿಸುವ ಶಕ್ತಿ ಹೊಂದಿರಲಿದೆ. ವಿಮಾನದಲ್ಲಿ ರೆಡಾರ್ ಅಳವಡಿಸಲಿದ್ದು, ಪ್ರತಿಕ್ಷಣವೂ ಮಿಷನ್ ಕಮಾಂಡರ್‌ಗೆ ಮಾಹಿತಿ ನೀಡಲಿದೆ. ಕ್ಷಿಪಣಿ, ಶಸ್ತ್ರಾಸ್ತ್ರಗಳು, ಬಾಂಬ್‌ಗಳನ್ನು ಸರಾಗವಾಗಿ ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಯುದ್ಧದ ಸಂದರ್ಭದಲ್ಲಿ ಶತ್ರುಗಳ ಮೇಲೆ ದಾಳಿ ಮಾಡಲಿದೆ. ಈ ಮಾನವ ರಹಿತ ಯುದ್ಧ ವಿಮಾನ 12 ಟನ್ ತೂಕ ಹೊಂದಿರಲಿದ್ದು, ಗಂಟೆಗೆ 400 ಕಿ.ಮೀ ವೇಗದಲ್ಲಿ ಸಂಚರಿಸಲಿದೆ.
ಕಂಟ್ರೋಲ್ ಸ್ಟೇಷನ್ ನಿರ್ಮಾಣ: ಮಾನವ ರಹಿತ ಯುದ್ಧ ವಿಮಾನ ನಿರ್ವಹಣೆಗೆ ಬೆಂಗಳೂರಿನ ಡಿಆರ್‌ಡಿಒನಲ್ಲಿ ಕಂಟ್ರೋಲ್ ಸ್ಟೇಷನ್ ನಿರ್ಮಾಣವಾಗಲಿದೆ. ಈ ಸ್ಟೇಷನ್‌ನಲ್ಲಿ ಒಬ್ಬ ಪೈಲೆಟ್, ಮಿಷನ್ ಕಮಾಂಡರ್, ಪೇಲೋಡ್ ಆಪರೇಟರ್, ಇಮೇಜ್ ಅನಾಲಿಸ್ಟ್ ಕೆಲಸ ನಿರ್ವಹಿಸಲಿದ್ದಾರೆ. ವಿಮಾನ ಟೇಕ್‌ಆಫ್ ವೇಳೆ ಹೆಚ್ಚುವರಿ ಪೈಲೆಟ್ ನೇಮಿಸಲಾಗಿರುತ್ತದೆ. ಯುದ್ಧದ ಸಂದರ್ಭದಲ್ಲಿ ಕಂಟ್ರೋಲ್ ಸ್ಟೇಷನ್ ಅನ್ನು ಬೇರೆಡೆಗೆ ವರ್ಗಾಹಿಸಬಹುದು ಎಂದು ಡಿಆರ್‌ಡಿಒ ವಿಜ್ಞಾನಿ ಸಿದ್ದಪ್ಪಾಜಿ ಬಸವರಾಜು ಉದಯವಾಣಿಗೆ ತಿಳಿಸಿದ್ದಾರೆ.
ಡಿಆರ್‌ಡಿಒ ಹಲವು ಯುದ್ಧ ವಿಮಾನಗಳನ್ನು ಅಭಿವೃದ್ಧಿ ಪಡಿಸಿದ್ದು, ಪ್ರಸ್ತುತ ಮಾನವ ರಹಿತ ಯುದ್ಧ ವಿಮಾನ ನಿರ್ಮಾಣಕ್ಕೆ ಕೈ ಹಾಕಲಾಗಿದೆ. 2020ರ ಏಪ್ರಿಲ್ ವೇಳೆಗೆ ನಿರ್ಮಾಣ ಆರಂಭವಾಗ ಲಿದ್ದು, ಮೂರ್‍ನಾಲ್ಕು ವರ್ಷಗಳಲ್ಲಿ ಮುಗಿಯಲಿದೆ. ಈ ವಿಮಾನ ಸೇನಾ ಪಡೆಗೆ ಸೇರಿದರೆ ಸೇನೆಯ ಬಲ ಹೆಚ್ಚಾಗಲಿದೆ.
-ಸಿದ್ದಪ್ಪಾಜಿ ಬಸವರಾಜು, ಡಿಆರ್‌ಡಿಒ ವಿಜ್ಞಾನಿ
-ಸಿದ್ದಪ್ಪಾಜಿ ಬಸವರಾಜು, ಡಿಆರ್‌ಡಿಒ ವಿಜ್ಞಾನಿ
ರಾಜ್ಯದಲ್ಲಿಯೇ ಪರೀಕ್ಷೆ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ರಕ್ಷಣಾ ಇಲಾಖೆಯ 4,290 ಎಕರೆ ಭೂಮಿ ಇದ್ದು, 2 ಕಿ.ಮೀ. ಉದ್ದದ ರನ್ ವೇ ನಿರ್ಮಿಸಲಾಗಿದೆ. ಡಿಆರ್‌ಡಿಒ ತಯಾರಿಸಲು ಉದ್ದೇಶಿಸಿರುವ ಮಾನವ ರಹಿತ ಯುದ್ಧ ವಿಮಾನದ ಮೊದಲ ಪರೀಕ್ಷಾರ್ಥ ಪ್ರಯೋಗ 2023ರಲ್ಲಿ ನಡೆಯಲಿದ್ದು, ಎರಡನೇ ಪ್ರಯೋಗ ರಾಜಸ್ತಾನದ ಗಡಿ ಭಾಗದಲ್ಲಿ ನಡೆಯಲಿದೆ. ಈ ಹಿಂದೆ ‘ರುಸ್ತುಮ್ – 2’ ಏರ್‌ಕ್ರಾಫ್ಟ್ನ ಪರೀಕ್ಷಾ ಪ್ರಯೋಗ ಚಳ್ಳಕೆರೆಯಲ್ಲಿ ನಡೆಸಲಾಗಿತ್ತು.
-ಮಂಜುನಾಥ ಗಂಗಾವತಿ