ಭಾರತದಲ್ಲಿ ಕ್ರಿಕೆಟ್ ಈಗ ಮೇರು ಸ್ಥಿತಿಯಲ್ಲಿದೆ. ಅದ್ಭುತ ಪ್ರತಿಭೆಗಳು ತಂಡ ಸೇರುತ್ತಿದ್ದಾರೆ. ಇನ್ನೂ ಹಲವು ಪ್ರತಿಭಾನ್ವಿತ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಕಾಯುತ್ತಿದ್ದಾರೆ. ಹಲವರು ಸುಲಭವಾಗಿ ಅವಕಾಶ ಪಡೆದರೆ, ಇನ್ನೂ ಕೆಲವರು ಎಷ್ಟು ಕಷ್ಟಪಟ್ಟರೂ ಅದೃಷ್ಟದ ಬಾಗಿಲು ತೆರೆಯಲು ಸಾಧ್ಯವಾಗಲ್ಲ. ಕೆಲವರು ಅವಕಾಶ ಪಡೆದರೂ ಅದೃಷ್ಟ ಕೈಹಿಡಿಯುವುದಿಲ್ಲ. ಅಂತಹ ಕೆಲ ಭಾರತೀಯ ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.
ವಾಸಿಂ ಜಾಫರ್
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುವ ವಾಸಿಂ ಜಾಫರ್ ಅವರು ದೇಶಿ ಕ್ರಿಕೆಟ್ ನ ಡಾನ್ ಬ್ರಾಡ್ಮನ್ ಎಂದೇ ಹೆಸರಾದವರು. ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ರನ್ ರಾಶಿ ಕಲೆಹಾಕಿದ ಜಾಫರ್ ಕಡೆಯದಾಗಿ ಭಾರತ ತಂಡದ ಪರ ಕಡೆಯದಾಗಿ ಆಡಿದಾಗ ಅವರಿಗೆ ಪ್ರಾಯ 30. ಅತೀ ಹೆಚ್ಚು ರಣಜಿ ಪಂದ್ಯವಾಡಿದ ಆಟಗಾರ, ಅತೀ ಹೆಚ್ಚು ರನ್, 57 ಶತಕ, 91 ಅರ್ಧಶತಕಗಳು ಜಾಫರ್ ಹೆಸರಿನಲ್ಲಿದೆ.
ಜಾಫರ್ ಭಾರತದ ಪರ 31 ಟೆಸ್ಟ್ ಪಂದ್ಯವಾಡಿದ್ದು, ಅದರಲ್ಲಿ 20 ಪಂದ್ಯಗಳನ್ನು ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾಗಳಲ್ಲಿ ಆಡಿದ್ದರು. ಭಾರತದಲ್ಲಿ ಇನ್ನೂ ಹೆಚ್ಚಿನ ಅವಕಾಶ ಸಿಕ್ಕಿದ್ದರೆ ಜಾಫರ್ ಸಾಧನೆ ಇನ್ನೂ ಹೆಚ್ಚಿನದಾಗಿರುತ್ತಿತ್ತು.
ಕರುಣ್ ನಾಯರ್
ವಿರೇಂದ್ರ ಸೆಹವಾಗ್ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಕರುಣ್ ನಾಯರ್. ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿದ್ದ ಕರುಣ್ ನಾಯರ್ ಮುಂದಿನ ಪಂದ್ಯದಲ್ಲೇ ಆಡುವ ಅವಕಾಶ ಪಡೆದಿರಲಿಲ್ಲ. ಈ ಇನ್ನಿಂಗ್ಸ್ ಒಂದು ಬಿಟ್ಟು ನಾಯರ್ ಬೇರೆ ಯಾವುದೇ ಇನ್ನಿಂಗ್ಸ್ ನಲ್ಲೂ ಪ್ರದರ್ಶನ ನೀಡಲಿಲ್ಲ. ಒಟ್ಟು ಆರು ಪಂದ್ಯವಾಡಿದ ಕರುಣ್ 374 ರನ್ ಗಳಿಸಿದರು. 2016ರ ಬಳಿಕ ಕರುಣ್ ಗೆ ತಂಡದಲ್ಲಿ ಅವಕಾಶವೇ ಸಿಗಲಿಲ್ಲ. ಇತ್ತೀಚಿಗೆ ಸಿಗದ ಅವಕಾಶಗಳ ಬಗ್ಗೆ ಕರುಣ್ ಟ್ವೀಟ್ ಮಾಡಿದ್ದು ಸುದ್ದಿಯಾಗಿತ್ತು.
ಸುಬ್ರಹ್ಮಣ್ಯಂ ಬದರಿನಾಥ್
ತಮಿಳುನಾಡಿನ ಈ ಪ್ರತಿಭಾನ್ವಿತ ಆಟಗಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಾಗಲೇ ಇಲ್ಲ. ಆರಂಭಿಕ ದಿನಗಳಲ್ಲಿ ಭಾರತ ತಂಡದಲ್ಲಿ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಅವರು ತಂಡದಲ್ಲಿ ಗಟ್ಟಿ ಸ್ಥಾನದಲ್ಲಿದ್ದರು. ಹೀಗಾಗಿ ಬದರಿನಾಥ್ ಗೆ ಅವಕಾಶ ಸಿಗಲಿಲ್ಲ. ನಂತರದ ದಿನಗಳಲ್ಲಿ ಐಪಿಎಲ್ ನಲ್ಲಿ ಮಿಂಚಿದ್ದರೂ ಬದರಿನಾಥ್ ಗೆ ಅದೃಷ್ಟ ಕೈಹಿಡಿಯಲಿಲ್ಲ. ಏಕೈಕ ಟಿ20 ಪಂದ್ಯವಾಡಿದ ಬದರಿನಾಥ್ ಅದರಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಭಾರತದ ಪರ ಎರಡು ಟೆಸ್ಟ್, ಏಳು ಏಕದಿನ ಮತ್ತು ಒಂದು ಟಿ20 ಪಂದ್ಯವಾಡಿದ್ದಾರೆ.
ಅಮಿತ್ ಮಿಶ್ರಾ
ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ 22 ಟೆಸ್ಟ್, 36 ಏಕದಿನ ಮತ್ತು 10 ಟಿ20 ಪಂದ್ಯಗಳಲ್ಲಿ ಆಡಿದರೂ ತಂಡದಿಂದ ಯಾಕೆ ಸ್ಥಾನ ಕಳೆದುಕೊಂಡರು ಎನ್ನುವುದೇ ನಿಗೂಢ. ತನ್ನ ಕೊನೆಯ ಟಿ20 ಪಂದ್ಯದಲ್ಲಿ 23 ರನ್ ನೀಡಿ 1 ವಿಕೆಟ್, ಕೊನೆಯ ಏಕದಿನ ಪಂದ್ಯದಲ್ಲಿ 28 ರನ್ ನೀಡಿ ಐದು ವಿಕೆಟ್ ಕಿತ್ತರೂ ನಂತರ ಅವಕಾಶ ಪಡೆಯಲಿಲ್ಲ. ಮಿಶ್ರಾ ತನ್ನ ಕೊನೆಯ ಪಂದ್ಯ ಮತ್ತು ಸರಣಿಯಲ್ಲಿ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು ಎಂದರೆ ನಂಬಲೇ ಬೇಕು.
ಬರಿಂದರ್ ಸ್ರಾನ್
ದೇಶಿ ಕ್ರಿಕೆಟ್ ನಲ್ಲಿ ಚಂಡೀಗಢ ಪರವಾಗಿ ಆಡುವ ಎಡಗೈ ವೇಗಿ ಬರಿಂದರ್ ಸ್ರಾನ್ ಅವರನ್ನು ಒಂದು ಕಾಲದಲ್ಲಿ ಜಹೀರ್ ಖಾನ್ ಅವರ ಉತ್ತರಾಧಿಕಾರಿ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿತ್ತು. ಕೇವಲ 8 ಲಿಸ್ಟ್ ಎ ಪಂದ್ಯಗಳ ನಂತರ ಬರಿಂದರ್ ಅವರನ್ನು ದೇಶಿಯ ತಂಡಕ್ಕೆ ಆಯ್ಕೆ ಮಾಡಲಾಯಿತು. ಏಕದಿನ ಪದಾರ್ಪಣೆಯಲ್ಲಿ ಮೂರು ವಿಕೆಟ್, ಟಿ20 ಪದಾರ್ಪಣೆ ಪಂದ್ಯದಲ್ಲಿ ನಾಲ್ಕು ವಿಕೆಟ್. ಇದಾಗಿ ಎರಡು ದಿನಗಳ ಬಳಿಕ ಕೊನೆಯ ಟಿ20 ಪಂದ್ಯ. ಅದರಲ್ಲಿ ಎರಡು ವಿಕೆಟ್. ಆದರೆ ಆ ಬಳಿಕ ಬರಿಂದರ್ ಅವರನ್ನು ಕೈ ಬಿಡಲಾಯಿತು.