Advertisement

ಅನ್‌ಲಾಕ್‌ ಬೆನ್ನಲ್ಲೆ ಎಚ್ಚರ ಮರೆತ ಜನ

08:39 PM Jun 15, 2021 | Team Udayavani |

ಕೊಪ್ಪಳ: ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಜಿಲ್ಲಾಡಳಿತ ಘೋಷಣೆ ಮಾಡಿದ್ದ ಲಾಕ್‌ಡೌನ್‌ನಿಂದ ಕೆಲವೊಂದು ವಿನಾಯಿತಿ ನೀಡಿದ್ದು, ಈ ಬೆನ್ನಲ್ಲೇ ಜಿಲ್ಲೆಯಲ್ಲಿನ ಜನತೆ ಏಕಾಏಕಿ ನಗರದ ಮಾರುಕಟ್ಟೆಗಳಿಗೆ ಸೋಮವಾರ ಲಗ್ಗೆಯಿಟ್ಟು ಕೋವಿಡ್‌ ನಮ್ಮಿಂದ ದೂರವಾಯಿತು ಎನ್ನುವ ಭಾವನೆಯಲ್ಲಿದ್ದಾರೆ. ನಿಜಕ್ಕೂ ಇದು ದುರದೃಷ್ಟಕರ ಸಂಗತಿ. ಯಾರೂ ಸಾಮಾಜಿಕ ಅಂತರ ಪಾಲಿಸಲಿಲ್ಲ. ಮಾಸ್ಕ್ ಧರಿಸದೇ ಇದ್ದದ್ದು ಮಾರುಕಟ್ಟೆಯಲ್ಲಿ ಕಂಡುಬಂತು.

Advertisement

ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಇದು ಸ್ವಲ್ಪ ಸಮಾಧಾನ ತರಿಸಿದೆ. ಆದರೂ ಸೋಂಕಿನ ಪ್ರಮಾಣ ಇನ್ನೂ ಸೊನ್ನೆಯ ಹಂತಕ್ಕೆ ತಲುಪಿಲ್ಲ. ಇಂದಿಗೂ ನಿತ್ಯ ನೂರಾರೂ ಜನರಲ್ಲಿ ಸೋಂಕು ದೃಢಪಡುತ್ತಿವೆ. ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಜನತೆ ಮಾತ್ರ ಕೋವಿಡ್‌ ಕಡಿಮೆಯಾಯಿತು ನಾವು ನಗರಕ್ಕೆ ತೆರಳಬಹುದು ಎನ್ನುವ ಭಾವನೆಯಲ್ಲಿ ನಗರ ಪ್ರದೇಶಗಳಿಗೆ ಆಗಮಿಸುತ್ತಿರುವುದು ಆತಂಕ ಮೂಡಿಸಿದೆ.

ಸಾಮಾಜಿಕ ಅಂತರ ಮಾಯ: ಜಿಲ್ಲಾಡಳಿತ ಸೋಮವಾರದಿಂದ ಲಾಕ್‌ಡೌನ್‌ ಸಡಿಲಿಕೆ ಮಾಡಿ ಜೂ. 21ರವರೆಗೂ ಅಂಗಡಿ, ಮುಂಗಟ್ಟು ಆರಂಭಕ್ಕೆ ಅವಕಾಶ ನೀಡಿದೆ. ಇದನ್ನೇ ಅವಕಾಶ ಎಂದುಕೊಂಡಿರುವ ಜನರು ನಮ್ಮಿಂದ ಕೋವಿಡ್‌ ಸೋಂಕು ದೂರವಾಯ್ತು ಎನ್ನುವ ಭಾವನೆ ಮೂಡಿದೆ. ನಗರದಲ್ಲಿ ಮಾಸ್ಕ್ ಧರಿಸುವುದು ಕಡಿಮೆಯಾಗಿದೆ.

ಸಾಮಾಜಿಕ ಅಂತರವಂತೂ ಎಲ್ಲಿಯೂ ಕಾಣುತ್ತಿಲ್ಲ. ಯಾವುದೇ ಅಂಗಡಿ ಮಾಲೀಕರು ಗ್ರಾಹಕರಿಗೆ ಕೋವಿಡ್‌ ಬಗ್ಗೆ ಜಾಗೃತಿಯನ್ನೇ ಮೂಡಿಸುತ್ತಿಲ್ಲ. ಅಧಿ ಕಾರಿ ವರ್ಗವೂ ಇದೆಲ್ಲವನ್ನು ಮರೆತಿದ್ದಾರೆ. ಪೊಲೀಸರು ತಮ್ಮಷ್ಟಕ್ಕೆ ತಾವು ಕೆಲಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶದಲ್ಲಿ ಕೋವಿಡ್‌ ಜಾಗೃತಿಗಾಗಿ ಟಾಸ್ಕ್ ಫೋರ್ಸ್‌ ಸಮಿತಿ ರಚನೆ ಮಾಡುವುದು ತುಂಬಾ ಅಗತ್ಯ ಹಾಗೂ ಅವಶ್ಯಕತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next