ಮುಂಬೈ:ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ 2020ರ ಡಿಸೆಂಬರ್ 31ರ ತನಕ ಎಲ್ಲಾ ಶಾಲೆಗಳನ್ನು ಬಂದ್ ಮಾಡಲು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ಶುಕ್ರವಾರ (ನವೆಂಬರ್ 20, 2020) ನಿರ್ದೇಶನ ನೀಡಿದೆ. 9ನೇ ತರಗತಿಯಿಂದ ಪಿಯುಸಿವರೆಗೆ ನವೆಂಬರ್ 23ರಿಂದ ನಿಗದಿತ ಸಮಯದಿಂದ ಪುನರಾರಂಭಗೊಳ್ಳಲಿದೆ ಎಂದು ತಿಳಿಸಿದೆ.
ವಾಣಿಜ್ಯ ನಗರಿ ಮುಂಬೈಯಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಶಾಲೆಗಳನ್ನು ಪುನರಾರಂಭಿಸದಿರಲು ಮುಂಬೈ ಮಹಾನಗರ ಪಾಲಿಕೆ ಮೇಯರ್ ಕಿಶೋರಿ ಪೆಡ್ನೇಕರ್ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ.
ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಸ್ಥಳೀಯ ರೈಲು ಸಂಚಾರವನ್ನು ಕೂಡಾ ಆರಂಭಿಸದಿರುವುದು ಉತ್ತಮ ಎಂದು ಮೇಯರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ನವೆಂಬರ್ 23ರಿಂದ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ 9ರಿಂದ ಪಿಯುಸಿವರೆಗೆ ತರಗತಿ ಆರಂಭಿಸಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ:ಅಜಿತ್ ಪವಾರ್ ಗೆ ತಲೆನೇ ಇಲ್ಲ, ಅವನೊಬ್ಬ ಡಬಲ್ ಗೇಮ್ ವ್ಯಕ್ತಿ: ಸಚಿವ ಪ್ರಭು ಚವ್ಹಾಣ್
9ರಿಂದ ಪಿಯುಸಿವರೆಗೆ ತರಗತಿಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ತರಗತಿಗಳು ಆರಂಭವಾಗುವ ಮುನ್ನ ಸ್ಥಳೀಯ ಮಹಾನಗರ ಪಾಲಿಕೆಯ ಸಿಬ್ಬಂದಿಗಳ ನೆರವಿನೊಂದಿಗೆ ಸ್ಯಾನಿಟೈಸ್ ಮಾಡುವಂತೆ ಸೂಚಿಸಿದೆ.